ಬಳ್ಳಾರಿ: ಗಣಿನಾಡು ಬಳ್ಳಾರಿ ವಿಭಜಿಸಿ ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಶಾಸಕ ಜಿ. ಸೋಮಶೇಖರ ರೆಡ್ಡಿ ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ.
ಇಲ್ಲಿನ ಹನುಮಾನ್ ನಗರದಲ್ಲಿ ಮಳೆಯಿಂದ ಸೃಷ್ಟಿಯಾದ ಅವಾಂತರಗಳನ್ನು ಶನಿವಾರ ಬೆಳಗ್ಗೆ ಪರುಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಅನರ್ಹ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಕ್ಕೆ ರಾಜ್ಯ ಸರ್ಕಾರ ಹೊಸ ಜಿಲ್ಲೆ ಘೋಷಣೆ ಮಾಡಬಾರದು. ಜಿಲ್ಲೆಯಲ್ಲಿ ನಾಲ್ಕು ಜನ ಬಿಜೆಪಿ ಶಾಸಕರಿದ್ದೇವೆ. ವಿಜಯನಗರ ಜಿಲ್ಲೆ ಆಗಬಾರದು ಎಂದು ನಾವು ನಾಲ್ವರು ಶಾಸಕರು ರಾಜೀನಾಮೆ ನೀಡಿದರೆ ? ಎಂದು ಪ್ರಶ್ನಿಸಿದ ರೆಡ್ಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತುರದ ನಿರ್ಣಯ ಕೈಗೊಳ್ಳಬಾರದು. ನಮ್ಮೆಲ್ಲರನ್ನು ಕರೆದು ಚರ್ಚೆ ಮಾಡಬೇಕಿತ್ತು. ಈಗಾಗಲೇ ಸಿಎಂ ಯಡಿಯೂರಪ್ಪರಿಗೆ ಈ ಕುರಿತು ಸಲಹೆ ನೀಡಿದ್ದೇವೆ. ಯಾವುದೇ ಕಾರಣಕ್ಕೂ ವಿಜಯನಗರ ಜಿಲ್ಲೆ ಘೋಷಣೆ ಮಾಡಬಾರದು. ಅಖಂಡ ಬಳ್ಳಾರಿ ಜಿಲ್ಲೆಯಾಗಿ ಇರಬೇಕು ಅಂತಾ ನಾವು ಒತ್ತಾಯ ಮಾಡಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಪ್ರತಿವರ್ಷದಂತೆ ಈ ಬಾರಿಯೂ ನವೆಂಬರ್ ತಿಂಗಳಲ್ಲಿ ಹಂಪಿ ಉತ್ಸವ ಆಚರಣೆ ಮಾಡುತ್ತೇವೆ ಎಂದ ರೆಡ್ಡಿ, ಈ ಕುರಿತು ಜಿಲ್ಲಾ ಉಸ್ತುವಾರಿ ಲಕ್ಷ್ಮಣ ಸವದಿ ಅವರೊಂದಿಗೆ ಚರ್ಚೆ ನಡೆಸುತ್ತೇವೆ. ಈ ಹಿಂದೆ ಹಂಪಿ ಉತ್ಸವ ಆಚರಣೆಗಾಗಿ ಪ್ರತಿಭಟನೆ ನಡೆಸಿದ್ದೇವೆ. ಈಗಲೂ ಹಂಪಿ ಉತ್ಸವ ಆಚರಣೆ ಮಾಡದಿದ್ದರೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಮಾಜಿ ಶಾಸಕ ಅನಿಲ್ ಲಾಡ್ ಬಿಜೆಪಿ ಸೇರ್ಪಡೆ ವಿಚಾರ ಹಾಗೂ ಯಡಿಯೂರಪ್ಪ ಮೂಲೆಗುಂಪು ವಿಚಾರಕ್ಕೆ ಸೋಮಶೇಖರರೆಡ್ಡಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.