Advertisement

ಕೆಎಚ್ಬಿ ಕಾಲೋನಿಗೆ ಶಾಸಕ ರಾಮಪ್ಪ ಭೇಟಿ-ಸಮಸ್ಯೆ ವೀಕ್ಷಣೆ

10:29 AM Sep 10, 2019 | Suhan S |

ಹರಿಹರ: ನಗರ ಹೊರವಲಯದ ಕೆಎಚ್ಬಿ ಕಾಲೋನಿ ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಶಾಸಕ ಎಸ್‌.ರಾಮಪ್ಪ ಕಾಲೋನಿಗೆ ಭೇಟಿ ನೀಡಿ, ಯುಜಿಡಿ, ಜಲಸಿರಿ, ಪಾರ್ಕ್‌, ಆಟದ ಮೈದಾನ ಹಾಗೂ ಚರಂಡಿಗಳ ಸ್ವಚ್ಛತೆಯ ಸಮಸ್ಯೆಗಳನ್ನು ಖುದ್ದು ವೀಕ್ಷಿಸಿದರು.

Advertisement

ಕಾಲೊನಿಯಲ್ಲಿನ ಯುಜಿಡಿ ಸೋಕಿಂಗ್‌ ಮಷಿನ್‌ ಪ್ರದೇಶ, ಪಾರ್ಕ್‌, ಆಟದ ಮೈದಾನ, ಕಸ ಮತ್ತಿತರ ತ್ಯಾಜ್ಯಗಳಿಂದ ತುಂಬಿ ದುರ್ವಾಸನೆ ಬೀರುತ್ತಿರುವ ಚರಂಡಿಗಳನ್ನು ವೀಕ್ಷಿಸಿದ ಶಾಸಕರು, ನಿವಾಸಿಗಳೊಂದಿಗೆ ಚರ್ಚಿಸಿದರು.

ಈ ವೇಳೆ ನಿವಾಸಿಗಳು ಇಲ್ಲಿ ಮನೆ ಖರೀದಿಸಿ ಆರು ವರ್ಷಗಳಾದರೂ ಕನಿಷ್ಟ ಮೂಲ ಸೌಲಭ್ಯಗಳಿಲ್ಲ. ಯುಜಿಡಿ ಪೈಪ್‌ಗ್ಳು ಒಡೆದು ಕಟ್ಟಿಕೊಂಡು ಶೌಚಾಲಯ ತ್ಯಾಜ್ಯ ಹೊರಹೋಗುತ್ತಿಲ್ಲ, ಇಲ್ಲಿನ ಪರಿಸರ ರೋಗ, ರುಜಿನಗಳು ಹರಡುವಂತಿದ್ದು, ಬದುಕುವುದು ಕಷ್ಟವಾಗಿದೆ ಎಂದರು.

ಇಲ್ಲಿನ ಆಟದ ಮೈದಾನ ಪ್ರದೇಶ ಗಿಡ ಗಂಟಿಗಳು ಬೆಳೆದು ವಿಷ ಜಂತುಗಳ ವಾಸಸ್ಥಾನವಾಗಿದೆ. ಪಾರ್ಕ್‌ ಪ್ರದೇಶದ ಕಥೆಯೂ ಇದಕ್ಕೆ ಹೊರತಾಗಿಲ್ಲ. ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಕೊಠಡಿ ಇಲಿ, ಹೆಗ್ಗಣ, ಮುಂಗುಸಿಗಳ ವಾಸಸ್ಥಾನವಾಗಿದೆ ಎಂದು ಶಾಸಕರೆದುರು ನಿವಾಸಿಗಳು ಗೋಳು ತೋಡಿಕೊಂಡರು.

ನಗರಸಭೆಗೆ ವಾರ್ಷಿಕ ಕರ ಪಾವತಿಸುತ್ತಿದ್ದೇವೆ. ಆರೋಗ್ಯ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳಾಗಲಿ, ಪೌರಾಯುಕ್ತರಾಗಲಿ ಮೌಖೀಕ ದೂರು ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

Advertisement

ನಿವಾಸಿ ಕೆ.ರುದ್ರಮುನಿ ಮಾತನಾಡಿ, ಅವೈಜ್ಞಾನಿಕ ಯುಜಿಡಿ ವ್ಯವಸ್ಥೆಯಿಂದಾಗಿ ಕೆಲ ನಿವಾಸಿಗಳು ರಸ್ತೆ ಒಡೆದು ಶೌಚಾಲಯದ ತ್ಯಾಜ್ಯ ನೇರವಾಗಿ ಚರಂಡಿಗೆ ಹೋಗುವಂತೆ ಪೈಪ್‌ ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ನೆರೆಹೊರೆಯವರು ದಿನವಿಡೀ ದುರ್ವಾಸನೆಯ ಹಿಂಸೆ ತಾಳಲಾರದೆ ಮನೆ ಬಾಗಿಲು ಮುಚ್ಚಿಕೊಂಡಿರಬೇಕಿದೆ ಎಂದರು.

ಎರ್ರಿಸ್ವಾಮಿ ಮಾತನಾಡಿ, ಯುಜಿಡಿ ಚೇಂಬರ್‌ಗಳು ತುಂಬಿ ತುಳುಕುತ್ತಿರುವುದರಿಂದ ಮುಚ್ಚಳಗಳು ತೆರೆದುಕೊಂಡಿದ್ದು ಚರಂಡಿಗಳು ದುರ್ವಾಸನೆ ಹರಡುತ್ತಿವೆ. ಚಿಕ್ಕ ಮಕ್ಕಳು ಆಟವಾಡುವ ಭರದಲ್ಲಿ ಚೇಂಬರ್‌ಗಳಲ್ಲಿ ಬೀಳುವ ಅಪಾಯವಿದೆ ಎಂದರು.

ಶಾಸಕ ರಾಮಪ್ಪ ಪೌರಾಯುಕ್ತೆ ಎಸ್‌.ಲಕ್ಷ್ಮೀ ಅವರಿಗೆ ಕರೆ ಮಾಡಿ, ಕೂಡಲೇ ಕಾಲೋನಿಗೆ ಭೇಟಿ ನೀಡಿ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next