Advertisement

ಕಾಯ್ದೆ ವಿರೋಧಿಸುವವರು ಅಧ್ಯಯನ ಮಾಡಲಿ

04:49 PM Sep 30, 2020 | Suhan S |

ಸುರಪುರ: ಎಪಿಎಂಸಿ, ಭೂ ಸುಧಾರಣೆ ಕಾಯ್ದೆ ವಿರೋಧಿಸುವವರು ಮೊದಲು ಕಾಯ್ದೆ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಲಿ. ಸರಿಯಾಗಿ ತಿಳಿದು ಕೊಳ್ಳದೇ ಕಾಯ್ದೆ ವಿರೋಧಿಸುವುದು ಸರಿಯಲ್ಲ ಎಂದು ಶಾಸಕ ರಾಜುಗೌಡ ಹೇಳಿದರು.

Advertisement

ಮಂಗಳವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 60 ವರ್ಷ ದೇಶವಾಳಿದರೂ ಕಾಂಗ್ರೆಸ್‌ನವರು ದೇಶ ಮತ್ತು ರೈತರ ಅಭಿವೃದ್ಧಿ ಬಗ್ಗೆ ಒಂದು ದಿನವೂ ಚಿಂತಿಸಲಿಲ್ಲ, ಅಭಿವೃದ್ಧಿಗೆ ಪೂರಕವಾಗುವ ಕಾಯ್ದೆಗಳನ್ನು ಜಾರಿಗೆ ತರಲಿಲ್ಲ. ಹೀಗಾಗಿ ಆಡಳಿತ ವಿಷಯದಲ್ಲಿ ಕಾಂಗ್ರೆಸ್‌ನವರು ಗೌಡರ ಕೋಣವಿದ್ದಂತೆ. ತಾವು ಮಾಡೋದಿಲ್ಲ, ಮಾಡುವವರಿಗೂ ಬಿಡುವುದಿಲ್ಲ ಎಂದರು.

ಇಂದು ಜಾರಿಗೆ ಬಂದಿರುವ ಕಾಯ್ದೆ ಕಾಂಗ್ರೆಸ್‌ನವರ ಕನಸಿನ ಕೂಸು. ಈ ಬಗ್ಗೆ ಅವರೇ ಸಂಸತ್ತಿನಲ್ಲಿ ಮಂಡಿಸಿದ್ದರು. ಅದರ ಫಲವಾಗಿ ಇಂದು ಅನುಷ್ಠಾನವಾಗಿ ಜಾರಿಗೆ ಬಂದಿದೆ. ಲೋಪದೋಷ ಗಳಿದ್ದರೆ ಸದನದಲ್ಲಿ ಕುಳಿತು ಮುಕ್ತವಾಗಿ ಚರ್ಚಿಸಲಿ. ಅದು ಬಿಟ್ಟು ರೈತರು ಮತ್ತು ಜನರಲ್ಲಿ ಗೊಂದಲ ಮೂಡಿಸಿ ಪ್ರತಿಭಟನೆಗೆ ಪ್ರೇರೇಪಿಸುವುದು, ಬೀದಿಗಿಳಿದು ಹೋರಾಟ ಮಾಡುವುದು ಅರ್ಥಹೀನ ಎಂದರು.

ಬಿಜೆಪಿ ಯಾವತ್ತು ರೈತರ ಪರವಾಗಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಯಾವುದೇ ರೀತಿ ತೊಂದರೆಯಾಗುವುದಿಲ್ಲ. ನನ್ನ ಬೆಳೆ ನನ್ನ ಹಕ್ಕು ಎನ್ನುವ ತತ್ವದಡಿ ರೈತರು ತಮ್ಮ ಬೆಳೆ ದೇಶದ ಯಾವುದೇ ಮೂಲೆಯಲ್ಲಾದರೂ ಮಾರಬಹುದು. ಈ ಕಾಯ್ದೆ ರೈತರಿಗೆ ವರದಾನವಾಗಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಭೂಮಿ ಇಲ್ಲದವರು ಬಹಳಷ್ಟು ಜನರಿದ್ದಾರೆ. ಈಗಾಗಲೇ ಅರಣ್ಯ ಇಲಾಖೆ ಕೃಷಿ ಕಾಯ್ದೆಗೂ ತಿದ್ದುಪಡಿ ತರಲಾಗಿದೆ. ಆದ್ಯತೆಯನುಸಾರ ಅರ್ಜಿ ಪರಿಶೀಲಿಸಿ ಭೂ  ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಒತ್ತಾಯಪೂರ್ವಕವಾಗಿ ಯಾರೊಬ್ಬರೂ ಭೂಮಿ ಕಸಿದುಕೊಳ್ಳುವಂತಿಲ್ಲ. ಭೂಮಿ ಖರೀದಿಗೆ ಇದ್ದ ಕೆಲವು ಷರತ್ತು ಸಡಿಲಗೊಳಿಸಲಾಗಿದೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರೈತರಿಗೆ ಮಾರಕವಾಗದೇ ಪ್ರೇರಕವಾಗಲಿದೆ ಎಂದರು.

Advertisement

ಕಾಯ್ದೆ ತಿದ್ದುಪಡಿಯಿಂದ ರೈತರನ್ನು ಮೇಲೆತ್ತುವ ಕೆಲಸ ಮಾಡಲಾಗುತ್ತದೆ. ಇದರಿಂದ ಉತ್ಪನ್ನ ಮಾರಾಟದ ಸಾಗಾಣಿಕೆ ಖರ್ಚು, ವೆಚ್ಚ ಉಳಿಯಲಿದೆ. ದಲ್ಲಾಳಿಗಳ ಶೋಷಣೆ ತಪ್ಪುತ್ತದೆ. ಕರ ರಹಿತ ಹಣ ಕೈ ಸೇರುತ್ತದೆ. ಪರಿಶಿಷ್ಟ ಜಾತಿ,ಪಂಗಡ ಮತ್ತು ಸಣ್ಣ-ಅತೀ ಸಣ್ಣ ರೈತರ ಜಮೀನು ಮಾರಾಟಕ್ಕೆ ಕೆಲ  ಕಠಿಣ ನಿಯಮ ಅಳವಡಿಸಲಾಗಿದೆ. ರೈತರ ಹಿತಕ್ಕೆ ಸರ್ಕಾರ ಬದ್ಧವಿದೆ. -ರಾಜುಗೌಡ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next