Advertisement

ನನ್ನ ಕ್ಷೇತ್ರದ ಅಭಿವೃದ್ಧಿ ಹೇಗೆ ಮಾಡಬೇಕೆಂದು ನನಗೆ ಗೊತ್ತಿದೆ: ಶಾಸಕ ಪುಟ್ಟರಂಗ ಶೆಟ್ಟಿ

10:01 PM Jul 20, 2020 | Hari Prasad |

ಚಾಮರಾಜನಗರ: ಮೂರು ಬಾರಿ ಸತತವಾಗಿ ಶಾಸಕನಾಗಿರುವ ನನಗೆ ನನ್ನ ಕ್ಷೇತ್ರ ಅಭಿವೃದ್ಧಿ ಮಾಡುವುದು ಹೇಗೆಂದು ತಿಳಿದಿದೆ.

Advertisement

ಮತ್ತು ಈ ವಿಚಾರದಲ್ಲಿ ಹಾಗೂ ನನ್ನ ಕ್ಷೇತ್ರದ ವಿಷಯದಲ್ಲಿ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ನಿರಂಜನ್‌ ಕುಮಾರ್ ತಲೆ ಹಾಕುವ ಅಗತ್ಯವಿಲ್ಲ.

ಹೀಗೆಂದು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಸಿ. ಪುಟ್ಟರಂಗ ಶೆಟ್ಟಿ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ವಿಚಾರದಲ್ಲಿ ನಾನು ಯಾವುದೇ ರಾಜಕೀಯ ಮಾಡಿಲ್ಲ. ರಾಜಕೀಯ ಮಾಡುತ್ತಿರುವುದು ಬಿಜೆಪಿಯವರೇ.

ಅದರಲ್ಲೂ ಶಾಸಕ ನಿರಂಜನ್‌ ಕುಮಾರ್ ಅವರು, ನಾನೂ ಹಾಗೂ ಶಾಸಕ ಆರ್. ನರೇಂದ್ರ ಇಬ್ಬರೂ ಕೋವಿಡ್ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆಂದು ಮಾಡಿರುವ ಆರೋಪ ಸಂಪೂರ್ಣವಾಗಿ ಸತ್ಯಕ್ಕೆ ದೂರವಾದುದು ಮತ್ತು ಇಂತಹ ಸಂಕಷ್ಟದ ಸಂದರ್ಭದಲ್ಲಿ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಪುಟ್ಟರಂಗಶೆಟ್ಟಿ ಅವರು ಶಾಸಕ ನಿರಂಜನ್ ಕುಮಾರ್ ಮೇಲೆ ಹರಿಹಾಯ್ದರು.

Advertisement

ಮಾತ್ರವಲ್ಲದೇ, ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕ್ಷೇತ್ರದಲ್ಲಿ ಅನೇಕ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಹಕ್ಕನ್ನು ಪ್ರಶ್ನಿಸುವುದು ತಪ್ಪೇ? ಈ ವಿಚಾರವಾಗಿ ನಾವು ಸಚಿವರನ್ನು ಪ್ರಶ್ನಿಸಿದರೆ ಅದಕ್ಕೆ ನಿರಂಜನ್ ಉತ್ತರ ನೀಡುತ್ತಾರೆ ಎಂದರು.

ನಗರ ಸಭಾ ಮಾಜಿ ಅಧ್ಯಕ್ಷ ನಂಜುಂಡ ಸ್ವಾಮಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ ಕುಮಾರ್ ಅವರು ಕೇವಲ ಪ್ರಚಾರಕ್ಕಾಗಿ ಜಿಲ್ಲೆಗೆ ಬರುತ್ತಾರೆ. ಕೆಲಸ ಮಾಡಬೇಕೆಂಬ ಕಾಳಜಿ ಇಲ್ಲ. ಇವರ ಬದಲು ವಿ. ಸೋಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದರೆ ಜಿಲ್ಲೆ ಸ್ವಲ್ಪ ಅಭಿವೃದ್ಧಿಯಾದರೂ ಆಗಬಹುದು ಎಂದರು.

ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬಿ. ಕೆ. ರವಿಕುಮಾರ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಸುರೇಶ್‌ ಕುಮಾರ್ ಅವರು ಜಿಲ್ಲಾಡಳಿತ ಭವನದಲ್ಲಿ ನಡೆಸುವ ಸಭೆಗಳಲ್ಲಿ ಸ್ಥಳೀಯ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರನ್ನು ಆಹ್ವಾನಿಸದೇ ಸಭೆ ನಡೆಸುವ ಮೂಲಕ ಚ್ಯುತಿ ತಂದಿರುವುದು ಖಂಡನೀಯ.

ಮುಂದಿನ ದಿನಗಳಲ್ಲಿ ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಭೆ ನಡೆಸಿದರೆ ಪಕ್ಷದ ವತಿಯಿಂದ ಹೋರಾಟ ರೂಪಿಸಿ ಸಚಿವರ ವಿರುದ್ದ ಕಪ್ಪು ಬಾವುಟ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್‌ ಅಸ್ಗರ್ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next