Advertisement

ಟೋಲ್ ವೈಖರಿಗೆ ಶಾಸಕರಿಂದಲೇ ಪ್ರತಿಭಟನೆ

02:46 PM Jun 26, 2019 | Team Udayavani |

ಕೊಪ್ಪಳ: ಜಿಲ್ಲೆಯ ವಿವಿಧೆಡೆ ಜಿಎಂಆರ್‌ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ 300ಕ್ಕೂ ಹೆಚ್ಚು ಸಿಬ್ಬಂದಿಯನ್ನು ಏಕಾಏಕಿ ತೆಗೆದು ಹಾಕಿದ್ದಕ್ಕೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಕುಷ್ಟಗಿ ಶಾಸಕ ಅಮರೇಗೌಡ ಭಯ್ನಾಪೂರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಅಚ್ಚರಿಯೆಂಬಂತೆ ರಸ್ತೆಗಳಿದು ಪ್ರತಿಭಟನೆ ನಡೆಸಿದ ಪ್ರಸಂಗ ಮಂಗಳವಾರ ನಡೆದಿದೆ.

Advertisement

ಕೊಪ್ಪಳ ತಾಲೂಕಿನ ಹಿಟ್ನಾಳ ಟೋಲ್ಗೇಟ್ ಹಾಗೂ ಕುಷ್ಟಗಿ ಟೋಲ್ನಲ್ಲಿ ಜಿಎಂಆರ್‌ ಕಂಪನಿಯಿಂದ ಏಕಾಏಕಿ 30ಕ್ಕೂ ಹೆಚ್ಚು ಜನರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಈ ಮೊದಲು ಇದರ ಬಗ್ಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ಈಗ ಯಾವ ಕಾರಣ ನೀಡದೇ ಕೆಲಸದಿಂದ ತೆಗೆದು ಹಾಕಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಶಾಸಕ ಹಿಟ್ನಾಳ, ಭಯ್ನಾಪೂರ ಸೇರಿದಂತೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ತಾಲೂಕಿನ ಹಿಟ್ನಾಳ ಟೋಲ್ಗೇಟ್ ಬಳಿ ಪ್ರತಿಭಟನೆ ನಡೆಸಿ ತಮ್ಮ ಅಸಮಾಧಾನ ಹೊರ ಹಾಕಿದರು. ಕೂಡಲೇ ಕೆಲಸದಿಂದ ತೆಗೆದು ಹಾಕಿದ ಸಿಬ್ಬಂದಿಯನ್ನು ಪುನಃ ಕೆಲಸಕ್ಕೆ ನೇಮಕ ಮಾಡಿಕೊಂಡು ವೇತನ ಪಾವತಿ ಮಾಡಬೇಕು ಎಂದು ಒತ್ತಾಯ ಮಾಡಿದರು. ಸ್ಥಳಕ್ಕೆ ಡಿಸಿ ಸುನೀಲ್ ಕುಮಾರ ಭೇಟಿ ಮಾಡಿ ಅಲ್ಲಿನ ವಾಸ್ತವ ಸ್ಥಿತಿ ಅರಿತರಲ್ಲದೇ, ಕಂಪನಿ ಮುಖ್ಯಸ್ಥರ ಜೊತೆ ದೂರವಾಣಿ ಮೂಲಕ ಮಾತನಾಡಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸುವ ಕುರಿತು ಭರವಸೆ ನೀಡಿದರು. ಡಿಸಿ ಭರವಸೆ ಬಳಿಕ ಪ್ರತಿಭಟನೆ ತಣ್ಣಗಾಯಿತು.

ಟೋಲ್ಗಿದ್ದ ಕಾಳಜಿ ಕಾರ್ಖಾನೆಗಳ ಮೇಲೇಕಿಲ್ಲ?: ಜಿಲ್ಲೆಯಲ್ಲಿ ಹಲವು ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆಗಳು ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿವೆ. ಆದರೆ ಸ್ಥಳೀಯರಿಗೆ ಅಲ್ಲಿ ಕೆಲಸವೇ ಸಿಗುತ್ತಿಲ್ಲ. ಭೂಮಿ ಕಳೆದುಕೊಂಡವರಿಗೆ ಕಸ ಹೊಡೆಯುವ ಕೆಲಸ ನೀಡಿದ ಹಲವು ಉದಾಹರಣೆಗಳಿವೆ. ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಹಿಟ್ನಾಳ ಟೋಲ್ಗೇಟ್ ಬಗ್ಗೆ ಇರುವ ಪ್ರೀತಿ ತಾಲೂಕಿನಲ್ಲಿ ಇರುವ ಕೈಗಾರಿಕೆಗಳ ಮೇಲೆ ಏಕಿಲ್ಲ. ಆ ಕಂಪನಿಗಳ ಮುಂದೆಯೂ ಏಕೆ ಕುಳಿತು ಪ್ರತಿಭಟನೆ ನಡೆಸಿಲ್ಲ. ಕೆಪಿಆರ್‌ ಸೇರಿದಂತೆ ಹಲವು ಕಾರ್ಖಾನೆಗಳಲ್ಲಿ ಇಂದಿಗೂ ಯುವಕರು ಕಡಿಮೆ ವೇತನದಲ್ಲೇ ಕೆಲಸ ಮಾಡುತ್ತಿದ್ದಾರೆ. ಹಲವು ಕಂಪನಿಗಳು ಬಂದ್‌ ಆಗಿ ನೂರಾರು ಕಾರ್ಮಿಕರು ಕೆಲಸವಿಲ್ಲದೇ ಅಲೆದಾಡುವ ಸ್ಥಿತಿಗೆ ಬಂದು ತಲುಪಿದೆ. ಹಿಟ್ನಾಳ ಟೋಲ್ ಏಕಾಏಕಿ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಶಾಸಕರು ರಸ್ತೆಗಳಿದು ಟೋಲ್ಗೇಟ್ ಮುಂದೆ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಇದೇ ಅಸಮಾಧಾನ, ಆಕ್ರೋಶ ಉಳಿದ ಕಾರ್ಖಾನೆಗಳ ಮೇಲೆ ಏಕಿಲ್ಲ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಸರೋಜಿನಿ ಮಹಿಷಿ ವರದಿ ಪ್ರಕಾರವೇ ಜಿಲ್ಲೆಯ ಉಳಿದ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿಲ್ಲ. ಅನ್ಯ ರಾಜ್ಯಗಳ ಜನರೇ ಇಂದಿಗೂ ಕೆಲಸ ಮಾಡುತ್ತಿದ್ದಾರೆ ಎನ್ನುವ ಆಪಾದನೆ ಕೇಳಿ ಬಂದಿದೆ. ಇದಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ, ಅಮರೇಗೌಡ ಭಯ್ನಾಪೂರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಅವರೇ ಉತ್ತರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next