ವಾಡಿ: (ಚಿತ್ತಾಪುರ): ರಾಜ್ಯದ ಬಂಜಾರಾ (ಲಂಬಾಣಿ) ಸಮುದಾಯಕ್ಕೆ ಅರಣ್ಯ ಹಕ್ಕು ಸೌಲತ್ತು ಒದಗಿಸಲು ಕೋರಿ ಲಂಬಾಣಿ ಜನಾಂಗವನ್ನು ಎಸ್‌ಟಿ ಪಟ್ಟಿಗೆ ಸೇರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಲಬುರಗಿ ಸಂಸದ ಡಾ.ಉಮೇಶ ಜಾಧವ ಸಲ್ಲಿಸಿದ ಎರಡು ಮನವಿಪತ್ರಗಳನ್ನು ಕಾಂಗ್ರೆಸ್ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ತಮ್ಮ ಫೇಸ್‌ಬುಕ್ನಲ್ಲಿ ಪ್ರದರ್ಶಿಸುವ ಮೂಲಕ ಸಂಸದರ ದ್ವಂದ್ವ ನಿಲುವು ಬಯಲು ಮಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗರು ಕುರುಬ ಹಾಗೂ ಕೋಲಿ ಸಮುದಾಯವನ್ನು ಎಸ್‌ಸಿಗೆ ಸೇರಿಸುವುದಾಗಿ ಭರವಸೆ ನೀಡಿ ಈಗ ಮಾತು ತಪ್ಪಿದ್ದಾರೆ. ಬದಲಾಗಿ ಎಸ್‌ಸಿ ಪಟ್ಟಿಯಲ್ಲಿರುವ ರಾಜ್ಯದ ಬಂಜಾರಾ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಸಂಸದ ಡಾ.ಉಮೇಶ ಜಾಧವ ತೆರೆಮರೆಯಲ್ಲಿ ಮುಂದಾಗಿದ್ದಾರೆ ಎಂದು ಆರೋಪಿಸಿರುವ ಶಾಸಕ ಖರ್ಗೆ, ರಾಜ್ಯಕ್ಕೆ ಬಂದಾಗ ಬಂಜಾರಾ ಸಮುದಾಯ ಎಸ್‌ಸಿ ಪಟ್ಟಿಯಲ್ಲೇ ಇರಲಿ ಎನ್ನುವ ಸಂಸದರು, ದಿಲ್ಲಿಗೆ ಹೋದಾಗ ಬಂಜಾರಾ ಎಸ್‌ಟಿಗೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ. ಆ ಮೂಲಕ ಸಮುದಾಯದ ಧರ್ಮಗುರು ದಿ.ರಾಮರಾವ ಮಹಾರಾಜರನ್ನೇ ದಾರಿ ತಪ್ಪಿಸಿದ್ದಾರೆ. ಸಂಸದ ಜಾಧವ ಅವರ ದ್ವಂದ್ವ ನಿಲುವಿನಿಂದ ಕುರುಬ, ಕೋಲಿ ಹಾಗೂ ಬಂಜಾರಾ, ಈ ಮೂರು ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಅವರದ್ದೇ ಸಮುದಾಯದ ವ್ಯಕ್ತಿಯೊಬ್ಬರು ಬಂಜಾರಾ ಸಮುದಾಯವನ್ನು ಎಸ್‌ಸಿ ಪಟ್ಟಿಯಿಂದ ತೆಗೆದು ಹಾಕುವಂತೆ ಸುಪ್ರೀಂ ಕೋರ್ಟ್ನಲ್ಲಿ ಪಿಐಎಲ್ ದಾಖಲಿಸಿದ್ದರು. ಅಂದು ಆ ಸಮಿತಿ ರಾಜ್ಯ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಳಿತ್ತು. ಸಂಸದ ಡಾ.ಉಮೇಶ ಜಾಧವ ಅವರು ಇದರ ವಿರುದ್ಧ ದನಿ ಎತ್ತುವ ಮೂಲಕ ರಾಜ್ಯದಲ್ಲಿ ಬಂಜಾರಾ ಸಮುದಾಯ ಪರಿಶಿಷ್ಟ ಜಾತಿ ಪಟ್ಟಿಯಲ್ಲೇ ಇರಬೇಕು ಎಂದು ಆಗ್ರಹಿಸಿ ಪತ್ರ ಚಳುವಗೆ ಕರೆ ನೀಡಿದ್ದರು. ಈಗ ರಾಜ್ಯ ಬಂಜಾರಾ ಎಸ್‌ಟಿಗೆ ಸೇರಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಬಂಜಾರಾ ಸಮುದಾಯದ ಕುರಿತು ಸಂಸದರು ಒಂದೊಂದು ಕಡೆ ಒಂದೊಂದು ನಿಲುವು ತಾಳುವ ಮೂಲಕ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಇದನ್ನೆಲ್ಲ ಗಮನಿಸಿದರೆ, ಸಂಸದರು ಕೇವಲ ಕೋಲಿ, ಕುರುಬ ಹಾಗೂ ಲಂಬಾಣಿಗಳಿಗೆ ಮಾತ್ರವಲ್ಲದೆ ಅವರ ಧರ್ಮ ಗುರುಗಳಿಗೂ ದಾರಿ ತಪ್ಪಿಸಿರುವುದು ಸ್ಪಷ್ಟವಾಗಿದೆ. ಬೀದರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಕುರುಬ ಸಮುದಾಯದ ಗೊಂಡ, ರಾಜಗೊಂಡ ಜಾತಿಗಳು ಸೇರಿದಂತೆ ಕುರುಬ ಮತ್ತು ಕೋಲಿ ಸಮುದಾಯವನ್ನು ಎಸ್‌ಸಿಗೆ ಸೇರಿಸಲು ಅಂದಿನ ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ಆದರೆ, ಕೇಂದ್ರ ಬಿಜೆಪಿ ಸರ್ಕಾರ ರಾಜ್ಯದ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಈಗ ಎರಡೂ ಕಡೆ ತಮ್ಮದೇ ಸರ್ಕಾರಗಳಿದ್ದರೂ ಇಲ್ಲಿನ ಬಿಜೆಪಿ ಸಂಸದರು ಹಾಗೂ ಶಾಸಕರು ಈ ಕುರಿತು ಯಾವೂದೇ ಮುತುವರ್ಜಿ ವಹಿಸಿಲ್ಲ ಎಂದು ಪ್ರಿಯಾಂಕ್ ಟೀಕಿಸಿದ್ದಾರೆ.
ಸಂಸದ ಡಾ.ಉಮೇಶ ಜಾಧವ ತಾವು ಬಂಜಾರಾ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಯಾವೂದೇ ಪ್ರಯತ್ನ ಮಾಡಿಲ್ಲ ಎಂದು ಈಗ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂಬುದನ್ನು ಸಾಭೀತು ಮಾಡಲು ಸಂಸದರು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಿಸಿರುವ ಮನವಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಸಾಕ್ಷಿ ಸಮೇತ ಸಾಮಾಜಿಕ ಜಾಲತಾಣದಲ್ಲಿ ವಿವರಣೆ ನೀಡಿದ್ದೇನೆ. ಆದ್ದರಿಂದ, ಬಂಜಾರಾ ಸಮುದಾಯದ ಮೀಸಲಾತಿ ವಿಚಾರವಾಗಿ ತಮ್ಮ ನಿಲುವು ಎಸ್‌ಸಿಗೋ…? ಅಥವ ಎಸ್‌ಟಿಗೋ…? ಕೂಡಲೇ ಬಹಿರಂಗವಾಗಿ ಸ್ಪಷ್ಟಪಡಿಸಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಂಸದ ಡಾ.ಉಮೇಶ ಜಾಧವ ಅವರಿಗೆ ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರೀಯೆ ನೀಡಿರುವ ಫೇಸ್‌ಬುಕ್ ಸ್ನೇಹಿತರು, ಬಂಜಾರಾ ಎಸ್‌ಟಿಗೆ ಸೇರಿಸಲು ಜಾಧವ್ ಅವರೇ ಪ್ರಯತ್ನಿಸಿದ್ದು ಒಳ್ಳೆಯದಾಯಿತು ಬಿಡಿ ಸರ್ ನೀವೇಕೆ ಕಾಳಜಿ ತೋರಿಸುತ್ತಿದ್ದೀರಿ ಎಂದು ಸಲಹೆ ನೀಡಿದ್ದಾರೆ. ಇನ್ನೂ ಕೆಲವರು ಅವರ ಹಗಲು ನಾಟಕ ಎಲ್ಲರಿಗೂ ಗೊತ್ತು ಮಾಡಿಸಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲ ಎಸ್‌ಸಿ ಎಡಗೈ ಸಮುದಾಯದ ಎಫ್‌ಬಿ ಸ್ನೇಹಿತರು ಸದಾಶಿವ ಆಯೋಗದ ವರದಿ ಬಗ್ಗೆಯೂ ಬಿಜೆಪಿಗರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.