ಹಾಸನ: ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರು ಶ್ರಮ ವಹಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುವುದರ ಮೂಲಕ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಪ್ರೀತಿಗೆ ಪಾತ್ರರಾಗಬೇಕು. ಆ ಮೂಲಕ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುವಂತೆ ನಡೆದುಕೊಳ್ಳಬೇಕು ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ವಾಹನ ಚಾಲಕರು, ವಾಟರ್‌ವೆುನ್, ಒಳಚರಂಡಿ ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳ ಸಂಘದ ಪ್ರಥಮ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರ ಸೇವೆಗೆ ಲೋಪವಾಗದಂತೆ ಕೆಲಸ ಮಾಡುವುದಾದರೇ ನಿಮ್ಮ ಶ್ರಮವನ್ನು ಗುರುತಿಸಿ ಜನಪ್ರತಿನಿಧಿಗಳೇ ನಿಮ್ಮ ಪ್ರತಿನಿಧಿಯಾಗಿ ಸರಕಾರದ ಮಟ್ಟದಲ್ಲಿ ನಿಮ್ಮ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುವಂತಹ ಸ್ವಭಾವ ಮತ್ತು ಶ್ರಮವನ್ನು ಹಾಕಬೇಕು ಎಂದು ತಿಳಿಸಿದರು.
ಈ ವರ್ಷದಲ್ಲಿ ನಿಮ್ಮ ಹೋರಾಟ ಆರಂಭವಾದರೇ ಕನಿಷ್ಠ ಮುಂದಿನ ವರ್ಷದಲ್ಲಿ ಪೌರ ಕಾರ್ಮಿಕರಿಗೆ ವೇತನ ಪಾವತಿಯಾಗುತ್ತಿರುವಂತೆ ಎಲ್ಲ ಹೊರಗುತ್ತಿಗೆ ನೌಕರರ ಬ್ಯಾಂಕ್ ಖಾತೆಗೆ ನೇರವಾಗಿ ವೇತನ ಪಾವತಿ ಮಾಡುವ ವ್ಯವಸ್ಥೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಂಘಟನೆ ಅತಿ ಮುಖ್ಯ: ಪೌರ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಪೌರ ಸಂಸ್ಥೆಗಳ ಹೊರಗುತ್ತಿಗೆ ನೌಕರರು ನಿರಂತರವಾಗಿ ಶೋಷಣೆಗೊಳಗಾಗುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಸಂಘಟನೆ ಅತಿ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ :
ಸ್ಥಳಿಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಸಂಘದ ಗೌರವಾಧ್ಯಕ್ಷ ಹೆತ್ತೂರು ನಾಗರಾಜ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್.ಶಂಕರ್, ಮದ್ದೂರು ಪುರಸಭೆ ಸದಸ್ಯ ಪ್ರಿಯಾಂಕ ಅಪ್ಪುಗೌಡ, ಪತ್ರಕರ್ತ ಆರ್.ಪಿ.ವೆಂಕಟೇಶ್‌ಮೂರ್ತಿ, ಹೊರಗುತ್ತಿಗೆ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಧರ್ಮರಾಜ್ ಮತ್ತಿತರರು ಉಪಸ್ಥಿತರಿದ್ದರು.