ಬೆಳ್ತಂಗಡಿ: ನಾವೂರು ಅಂಗನವಾಡಿ ಕೇಂದ್ರ ಸಹಿತ ಪ್ರೌಢ ಶಾಲೆಗಳಿಗೆ ಶಾಸಕ ಹರೀಶ್ ಪೂಂಜ ಗುರುವಾರ ಭೇಟಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಸುನಂದಾ ಅವರು ಕಟ್ಟಡ ದುರಸ್ತಿ ಪಡಿಸುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಶಾಸಕರು ಸಿಡಿಪಿಒ ಜತೆ ಮಾತುಕತೆ ನಡೆಸಿ ಎನ್‌ಆರ್‌ಜಿ ಅನುದಾನ ಬಳಸಿ ಕಟ್ಟಡ ದುರಸ್ತಿಗೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ನಾವೂರು ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ 8ನೇ ತರಗತಿಗೆ 30 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸುತ್ತಿರುವ ನೂತನ ಕಟ್ಟಡ ಕಾಮಗಾರಿ ಪರಿಶೀಲಿಸಿದರು. 10ನೇ ತರಗತಿಗೆ ಭೇಟಿ ನೀಡಿ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಶಾಲೆಯ ಫಲಿತಾಂಶ ಹಾಗೂ ಅಗತ್ಯ ಸವಲತ್ತುಗಳ ಕುರಿತು ಚರ್ಚೆ ನಡೆಸಿದರು.
ಈ ಬಾರಿಯ ಫಲಿತಾಂಶ ನಿರೀಕ್ಷಿಸಿದಷ್ಟಿಲ್ಲ. ಮುಂದಿನ ವರ್ಷ ಶೇ. 100 ಫಲಿತಾಂಶ ದಾಖಲಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮಕ್ಕಳು ಸಮಾಜಶಾಸ್ತ್ರ ಹಾಗೂ ಗಣಿತ ಪಠ್ಯದಲ್ಲಿ ಹೆಚ್ಚಿನ ತರಗತಿಗಳ ಆವಶ್ಯಕತೆ ಇರುವ ಕುರಿತು ಶಾಸಕರ ಗಮನ ಸೆಳೆದರು. ಶನಿವಾರ ಬಳಿಕ ಹೆಚ್ಚಿನ ತರಗತಿ ನೀಡುವ ಕುರಿತು ಶಿಕ್ಷಕರಿಗೆ ಸೂಚಿಸಿದರು.
ರಸ್ತೆ ಕಾಮಗಾರಿ ಪರಿಶೀಲನೆ
ಸಂಸದರ ನಿಧಿಯಿಂದ 5 ಲಕ್ಷ ರೂ. ಅನುದಾನದಲ್ಲಿ ಇಂದಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಪಡಂಬಿಲ-ಕಲ್ಲಾಜೆ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿದರು. ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು. ಈ ವೇಳೆ ಗ್ರಾ.ಪಂ. ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.