ಗುಂಡ್ಲುಪೇಟೆ: ಪರಿಸರ ಸಮತೋಲನದಲ್ಲಿ ಹುಲಿಯ ಪಾತ್ರ ಮಹತ್ವದ್ದಾಗಿದ್ದು, ಸಂತತಿ ಬೆಳೆಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ತಿಳಿಸಿದರು.
ತಾಲೂಕಿನ ಬಂಡೀಪುರ ಅಭಯಾರಣ್ಯದ ಸಫಾರಿ ಕೌಂಟರ್ ಆವರಣದಲ್ಲಿ ಅರಣ್ಯ ಇಲಾಖೆ, ಬಂಡೀಪುರ ಹುಲಿ ಯೋಜನೆಯಿಂದ ನಡೆದ ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹುಲಿ ಸಂತತಿ ಹೆಚ್ಚಳದಿಂದ ಆಗುವ ಅನುಕೂಲಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ, ಜನಸ್ನೇಹಿ ಆಗಿ ಕೆಲಸ ನಿರ್ವಹಿಸಿ ಎಂದು ಸಲಹೆ ನೀಡಿದರು.
ಈಗಾಗಲೇ ಅರಣ್ಯದಂಚಿನಲ್ಲಿ ಕಂದಕ, ಸೋಲಾರ್ ವಿದ್ಯುತ್ ಬೇಲಿ, ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗುತ್ತದೆ. ವನ್ಯ ಪ್ರಾಣಿ – ಮಾನವ ಸಂಘರ್ಷ ಕಡಿಮೆ ಆಗಲು ಉಚಿತ ಅನಿಲ ಸಂಪರ್ಕ, ಸೋಲಾರ್ ವಿದ್ಯುತ್ ತಂತಿಬೇಲಿ, ಲಂಟಾನ ತೆರವು ಸೇರಿ ಹಲವು ಪ್ರಗತಿ ಕೆಲಸಗಳಿಗೆ ನರೇಗಾ ಯೋಜನೆ ಉಪಯುಕ್ತವಾಗಿದೆ ಎಂದು ಹೇಳಿದರು.
ಕಾಡು ಕಾಯುವುದು ಹೆಮ್ಮೆಯ ವಿಷಯ: ಸೈನಿಕರು ದೇಶ ಕಾಯುವ ಮಾದರಿಯಲ್ಲಿ ಇಲಾಖೆಯವರು ಪ್ರಾಣದ ಹಂಗು ತೊರೆದು, ಮಳೆ, ಬಿಸಿಲೆನ್ನದೇ ಕಾಡು ಕಾಯುತ್ತಿರುವುದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹುಲಿಗಳ ಸಂತತಿ ಕಾರಣಕ್ಕೆ ದೇಶದ ಗಮನ ಸೆಳೆದಿರುವ ಬಂಡೀಪುರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅರಣ್ಯ ಖಾತೆ ಸಚಿವರಾಗಿದ್ದ ಆನಂದ್‌ಸಿಂಗ್‌ಗೆ ಸಲ್ಲಿಸಿದ್ದ ಪ್ರಸ್ತಾವನೆಗೆ ಈಗಿರುವ ಉಮೇಶ್‌ಕತ್ತಿ ಒಪ್ಪಿಗೆ ಸೂಚಿಸಿದ್ದಾರೆ. 2010ರಲ್ಲಿ ದೇಶದ ಪ್ರಮುಖ 11 ರಾಷ್ಟ್ರಗಳು ಮಾಡಿದ ಪ್ರತಿಜ್ಞೆ ಫಲವಾಗಿ ಹುಲಿ ಸಂತತಿ ಏರಿಕೆ ಆಗಿರುವುದು ಖುಷಿ ನೀಡಿದೆ ಎಂದರು.
ಅರಣ್ಯ ರಕ್ಷಣೆ ಎಲ್ಲರ ಕರ್ತವ್ಯ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ಕಾಡು ಉಳಿವಿಗೆ ಎಲ್ಲರೂ ಸಹಕಾರ ಮಾಡಬೇಕು. ಅರಣ್ಯ ಇಲಾಖೆಯಿಂದ ಮಾತ್ರ ಇದು ಸಾಧ್ಯವಿಲ್ಲ. ಅರಣ್ಯ ರಕ್ಷಣೆ ಎಲ್ಲರ ಕರ್ತವ್ಯ ಎಂದು ವಿವರಿಸಿದರು.
ಎಪಿಸಿಸಿಎಫ್ ಜಗತ್ ರಾಂ, ಸಿಸಿಎಫ್, ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರೀಯ ಮಾತನಾಡಿದರು. ಎಸಿಎಫ್ಗಳಾದ ಪರಮೇಶ, ರವೀಂದ್ರ, ನವೀನ್, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್, ಹಂಗಳ ಗ್ರಾಪಂ ಅಧ್ಯಕ್ಷಎಚ್.ಎನ್.ಮಲ್ಲಪ್ಪ, ಉಪಾಧ್ಯಕ್ಷೆ ಗೀತಾ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯಮಲ್ಲೇಶಪ್ಪ, ಗೌರವ ವನ್ಯಜೀವಿ ಪರಿಪಾಲಕರಾದ ಕೃತಿಕಾ ಆಲನಹಳ್ಳಿ, ಎಂ. ಕೆ.ನಂಜುಂಡ ರಾಜೇಅರಸ್, ರಿಜಿನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಅಧಿಕಾರಿ, ನೌಕರರು ಹಾಜರಿದ್ದರು.