Advertisement

BJP ಶಾಸಕ ಮುನಿರತ್ನ ಪರಪ್ಪನ ಜೈಲಿಗೆ: ಇಂದು ಜಾಮೀನು ಭವಿಷ್ಯ

11:42 PM Sep 17, 2024 | Team Udayavani |

ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯನ ಜಾತಿ ನಿಂದನೆ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ, ಶಾಸಕ ಮುನಿರತ್ನ ಅವರನ್ನು ಸೆ. 30ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

Advertisement

ಈ ಮಧ್ಯೆ ಮುನಿರತ್ನ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್‌ ಬುಧವಾರಕ್ಕೆ ಮುಂದೂಡಿದ್ದು ಇಂದು ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.

ಪೊಲೀಸ್‌ ಕಸ್ಟಡಿ ಅವಧಿ ಮುಕ್ತಾಯದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ಮುನಿರತ್ನ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೂಮ್ಮೆ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದರು.

ಮುನಿರತ್ನ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿ ವಾದ ಮಂಡನೆಗೆ ಅವಕಾಶ ಕೋರಿದರು. ಆದರೆ ನ್ಯಾಯಾಧೀಶರು ಜಾಮೀನು ಅರ್ಜಿ ವಿಚಾರಣೆಯನ್ನು ಸೆ.18ಕ್ಕೆ ಮುಂದೂಡಿ, ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.

ಈ ಬೆನ್ನಲ್ಲೇ ವೈಯಾಲಿಕಾವಲ್‌ ಠಾಣೆ ಪೊಲೀಸರು, ಆರೋಪಿ ಮುನಿರತ್ನನನ್ನು ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

Advertisement

ಮಾಜಿ ಸಚಿವ ಮುನಿರತ್ನ ವಿರುದ್ಧ ಗುತ್ತಿಗೆದಾರ ಚಲುವರಾಜುಗೆ ಜೀವ ಬೆದರಿಕೆ ಮತ್ತು ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯಕರ್‌ಗೆ ಜಾತಿ ನಿಂದನೆ ಮಾಡಿದ ಆರೋಪದಡಿ ವೈಯಾಲಿಕಾವಲ್‌ ಪೊಲೀಸ್‌ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಶೀಘ್ರ ಎಫ್ಎಸ್‌ಎಲ್‌ ವರದಿ
ಈಗಾಗಲೇ ಪ್ರಕರಣ ಸಂಬಂಧ ಮುನಿರತ್ನ, ಗುತ್ತಿಗೆದಾರ ಚಲುವರಾಜುಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋದ ಮದರ್‌ ಡಿವೈಸ್‌ ಅನ್ನು ಪೊಲೀಸರು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್ಎಸ್‌ಎಲ್‌)ಗೆ ಕಳುಹಿಸಿದ್ದಾರೆ. ಅಂತೆಯೇ ಮುನಿರತ್ನ ಮತ್ತು ದೂರುದಾರ ಚಲುವರಾಜ್‌ ಅವರ ಧ್ವನಿ ಮಾದರಿ ಸಂಗ್ರಹಿಸಿ ಎಫ್ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಎಫ್ಎಸ್‌ಎಲ್‌ ತಜ್ಞರು ಆಡಿಯೋ ಮತ್ತು ಧ್ವನಿ ಮಾದರಿ ಪರೀಕ್ಷೆ ನಡೆಸಿ ವರದಿ ನೀಡಲಿದ್ದಾರೆ. 2-3 ದಿನಗಳಲ್ಲಿ ವರದಿ ಕೈ ಸೇರಲಿದೆ ಎಂದು ಹೇಳಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ವಶಕ್ಕೆ ಸಾಧ್ಯತೆ?
ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದ ಸಂಬಂಧ ಪ್ರತ್ಯೇಕವಾಗಿ ವಿಚಾರಣೆ ನಡೆಸಲು ನ್ಯಾಯಾಲಯಕ್ಕೆ ಬಾಡಿ ವಾರಂಟ್‌ಗೆ ಅರ್ಜಿ ಸಲ್ಲಿಸಿ ಮತ್ತೆ ಮುನಿರತ್ನರನ್ನು ವಶಕ್ಕೆ ಪಡೆಯಲು ವೈಯಾಲಿಕಾವಲ್‌ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ನನ್ನ ವಿರುದ್ಧ ಷಡ್ಯಂತ್ರ: ಮುನಿರತ್ನ
ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಮುನಿರತ್ನ ಅವರನ್ನು ಎಸಿಪಿ ಪ್ರಕಾಶ್‌ ವಿಚಾರಣೆ ನಡೆಸಿದ್ದರು. ಇದೊಂದು ರಾಜ್ಯಕೀಯ ಷಡ್ಯಂತ್ರ. ಮುಡಾ ಪ್ರಕರಣ ಮತ್ತು ನಾಗಮಂಗಲ ಪ್ರಕರಣವನ್ನು ಬೇರೆಡೆ ತಿರುಗಿಸಲು ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಮುನಿರತ್ನ ಉತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next