ಸರಕಾರಿ ಶಾಲೆಗಳ ಮಕ್ಕಳು ಯಾವ ರೀತಿಯಲ್ಲೂ ಕಡಿಮೆಯಿಲ್ಲ ಎಂದು ಸಾಧಿಸಿ ತೋರಿಸಿದರೆ ಜನರು ತಾವಾಗಿ ಮಕ್ಕಳನ್ನು ಸೇರಿಸುತ್ತಾರೆ.
ಸರಕಾರಿ ಶಾಲೆಗಳ ಸಬಲೀಕರಣ ಮತ್ತು ಶಿಕ್ಷಣದ ಗುಣಮಟ್ಟ ಸುಧಾರಿಸುವ ಸಲುವಾಗಿ ರಚಿಸಿದ್ದ ಸಮಿತಿ ಮಾಡಿರುವ 21 ಶಿಫಾರಸುಗಳಲ್ಲಿ ಕೆಲವೊಂದು ಶಿಫಾರಸುಗಳು ಗಮನಾರ್ಹವಾಗಿವೆ. ಮುಖ್ಯವಾಗಿ ಶಾಲೆಗಳ ಗುಣಮಟ್ಟ ಸುಧಾರಿಸಬೇಕಾದರೆ ಶಾಸಕರು, ಸಚಿವರು, ಸಂಸದರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವುದನ್ನು ಕಡ್ಡಾಯಗೊಳಿಸಬೇಕೆಂಬ ಸಲಹೆ ಆಕರ್ಷಕವಾಗಿ ಕಾಣಿಸುತ್ತಿದೆ. ಆಳುವವರ ಮಕ್ಕಳೇ ಸರಕಾರಿ ಶಾಲೆಗಳಲ್ಲಿ ಕಲಿಯುವಂತಾದರೆ ಆ ನೆಪದಲ್ಲಾದರೂ ಸರಕಾರಿ ಶಾಲೆಗಳ ಮೂಲಸೌಕರ್ಯ ಮತ್ತು ಕಲಿಕೆಯ ಗುಣಮಟ್ಟದಲ್ಲಿ ಸುಧಾರಣೆಯಾದೀತು ಎಂಬ ಪ್ರಾಮಾಣಿಕ ಕಾಳಜಿ ಇದರ ಹಿಂದಿದೆ. ಹಾಗೆಂದು ಇಂತಹ ಸಲಹೆ ಕೇಳಿ ಬರುತ್ತಿರುವುದು ಇದೇ ಮೊದಲೇನಲ್ಲ. ಅಲಹಬಾದ್ ಹೈಕೋರ್ಟ್ ಎರಡು ವರ್ಷಗಳ ಹಿಂದೆಯೇ ಸರಕಾರಿ ನೌಕರರು, ನ್ಯಾಯಾಂಗದ ಸಿಬಂದಿ, ಮಂತ್ರಿಗಳು, ಶಾಸಕರು, ಸಂಸದರು ಸೇರಿದಂತೆ ಸರಕಾರದ ಸಂಬಳ ಮತ್ತು ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರುವವರೆಲ್ಲ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ಓದಿಸುವುದನ್ನು ಕಡ್ಡಾಯಗೊಳಿಸಲು ಆದೇಶ ನೀಡಿತ್ತು. ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ನಿರಾಕರಿಸುವವರಿಂದ ಅವರು ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸಲು ಮಾಡುತ್ತಿರುವ ಖರ್ಚಿನಷ್ಟು ಹಣವನ್ನು ದಂಡದ ರೂಪದಲ್ಲಿ ವಸೂಲು ಮಾಡಿ, ಅದನ್ನು ಶಿಕ್ಷಣ ರಂಗದ ಸುಧಾರಣೆಗೆ ಬಳಸಿಕೊಳ್ಳಬೇಕು ಹಾಗೂ ಸರಕಾರಿ ನೌಕರರ ಭಡ್ತಿ, ವೇತನ ಏರಿಕೆ ಇತ್ಯಾದಿ ಸವಲತ್ತುಗಳನ್ನು ತಡೆ ಹಿಡಿಯಬೇಕೆಂಬ ಕಠಿಣ ಕಾನೂನುಗಳನ್ನು ರಚಿಸಬೇಕೆಂಬ ಅಂಶವೂ ನ್ಯಾಯಾಲಯದ ಆದೇಶದಲ್ಲಿತ್ತು.
ಖಾಸಗಿ ಶಾಲೆಗಳ ಶುಲ್ಕ ಹಾಗೂ ಇತರ ಖರ್ಚುವೆಚ್ಚಗಳನ್ನು ಭರಿಸಲು ಅಸಾಧ್ಯವಾಗಿ ಅಸಹಾಯಕ ಸ್ಥಿತಿಯಲ್ಲಿರುವ ಕಡು ಬಡವರು ಮಾತ್ರ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸುತ್ತಾರೆ. ಹಳ್ಳಿಯ ಮೂಲೆಮೂಲೆಗೂ ವ್ಯಾಪಿಸಿರುವ ಇಂಗ್ಲಿಷ್ ವ್ಯಾಮೋಹ ಸರಕಾರ ಶಾಲೆಗಳಿಗೆ ಮಾರಕವಾಗಿ ಪರಿಣಮಿಸಿದೆ. ಹೀಗಾಗಿ ಮಕ್ಕಳಿಲ್ಲದೆ ಪ್ರತಿ ವರ್ಷ ಹಲವಾರು ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಶಿಕ್ಷಣ ಕ್ಷೇತ್ರ ಪೂರ್ತಿಯಾಗಿ ಖಾಸಗಿಯವರ ಕೈವಶವಾಗುವ ಅಪಾಯ ಗೋಚರಿಸಿದ್ದು, ಇದನ್ನು ತಪ್ಪಿಸಬೇಕಾದರೆ ಸರಕಾರಿ ಶಾಲೆಗಳ ಗುಣಮಟ್ಟವನ್ನು ತುರ್ತಾಗಿ ಸುಧಾರಿಸುವುದು ಅನಿವಾರ್ಯ. ಆದರೆ ಜನಪ್ರತಿನಿಧಿಗಳು ಮತ್ತು ಸರಕಾರಿ ನೌಕರರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಿದ ಕೂಡಲೇ ಗುಣಮಟ್ಟದಲ್ಲಿ ಸುಧಾರಣೆಯಾದೀತೇ ಮತ್ತು ಇದನ್ನು ಕಡ್ಡಾಯಗೊಳಿಸುವ ನಿಯಮವನ್ನು ಜಾರಿಗೆ ತರುವುದು ಪ್ರಾಯೋಗಿಕವಾಗಿ ಸಾಧ್ಯವೇ ಎನ್ನುವುದು ಇಲ್ಲಿರುವ ಪ್ರಶ್ನೆ. ತಮ್ಮ ಮಕ್ಕಳು ಎಲ್ಲಿ, ಏನನ್ನು ಮತ್ತು ಹೇಗೆ ಕಲಿಯಬೇಕು ಎನ್ನುವುದು ಹೆತ್ತವರ ಆಯ್ಕೆಗೆ ಬಿಟ್ಟ ವಿಚಾರ. ಇದು ಅವರ ಖಾಸಗಿ ವಿಚಾರವಾಗಿರುವುದರಿಂದ ಖಾಸಗಿತನ ಮೂಲಭೂತ ಹಕ್ಕಾಗಿರುವ ಸಂದರ್ಭದಲ್ಲಿ ಸರಕಾರಿ ಶಾಲೆಗೆ ಕಳುಹಿಸಬೇಕೆಂಬ ನಿಯಮವನ್ನು ಪಾಲಿಸುವಂತೆ ಬಲವಂತಪಡಿಸುವುದು ಕಷ್ಟ. ಶಾಲೆಗಳ ಗುಣಮಟ್ಟ ಸುಧಾರಿಸುವ ಸಲುವಾಗಿ ನಿಯಮ ರೂಪಿಸಲಾಗಿದೆ ಎಂಬ ವಾದ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಇದಕ್ಕೆ ಬದಲಾಗಿ ಜನಪ್ರತಿನಿಧಿಗಳೂ ಸೇರಿದಂತೆ ಎಲ್ಲರೂ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಂತಹ ವಾತಾವರಣ ನಿರ್ಮಿಸುವುದು ಉತ್ತಮ ಉಪಾಯ. ಹೀಗೆ ಮಾಡಬೇಕಾದರೆ ಮೊದಲು ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪ ನಿಲ್ಲಬೇಕು. ಸರಕಾರಗಳ ತಮ್ಮ ತತ್ವ ಸಿದ್ಧಾಂತಗಳಿಗೆ ಒಪ್ಪುವಂತಹ ಪಠ್ಯ ಪುಸ್ತಕಗಳನ್ನು ರಚಿಸುವುದು ಮತ್ತು ಶಿಕ್ಷಣ ನೀತಿಯನ್ನು ರೂಪಿಸುವ ಚಾಳಿಯನ್ನು ಕೈಬಿಡಬೇಕು. ಸರಕಾರಿ ಶಾಲೆಗಳಲ್ಲೂ ಎಲ್‌ಕೆಜಿ, ಯುಕೆಜಿ ವಿಭಾಗಗಳನ್ನು ಇಂಗ್ಲಿಷ್ ಕಲಿಸಿ ಖಾಸಗಿ ಶಾಲೆಗಳ ಮಕ್ಕಳಿಗಿಂತ ಸರಕಾರಿ ಶಾಲೆಗಳ ಮಕ್ಕಳು ಯಾವ ರೀತಿಯಲ್ಲೂ ಕಡಿಮೆಯಿಲ್ಲ ಎಂದು ಸಾಧಿಸಿ ತೋರಿಸಿದರೆ ಜನರು ತಾವಾಗಿ ಮಕ್ಕಳನ್ನು ಸೇರಿಸುತ್ತಾರೆ. ಈ ನಿಟ್ಟಿನಲ್ಲಿ ಮುಂದಡಿಯಿಟ್ಟಿರುವ ಉತ್ತರ ಪ್ರದೇಶ ಸರಕಾರ ತುಸು ಯಶಸ್ಸು ಕಂಡಿದೆ. ಪಕ್ಕದ ಕೇರಳದಲ್ಲೂ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತಲೂ ಮಿಗಿಲು ಎನ್ನುವಂತಹ ಶೈಕ್ಷಣಿಕ ವಾತಾವರಣ ರೂಪಿಸಿಕೊಂಡಿರುವುದರಿಂದ ಮಕ್ಕಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಇಂತಹ ಕೆಲವು ಮಾದರಿಗಳನ್ನು ಎದುರಿಗಿಟ್ಟುಕೊಂಡು ಇಡೀ ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ನೀಡುವ ಕೆಲಸವಾಗಬೇಕು.