Advertisement

ಶಾಸಕ ಮಂಜುನಾಥ್‌ ಆರೋಪಗಳು ಸಂಪೂರ್ಣ ಸುಳ್ಳು

09:35 PM Jan 01, 2020 | Lakshmi GovindaRaj |

ಹುಣಸೂರು: ತಮ್ಮ ಶಾಸಕತ್ವದ ಅವಧಿಯಲ್ಲಿ ತಾಲೂಕಿಗೆ 298 ಕೋಟಿ ರೂ.ಗಳ ಅನುದಾನ ತಂದಿದ್ದು, ಬಹುತೇಕ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಈ ಸಂಬಂಧ ಮಾಜಿ ಶಾಸಕ ಅಡಗೂರು ಎಚ್‌.ವಿಶ್ವನಾಥ್‌, ಕಾಮಗಾರಿಗಳಿಗೆ ಇಲಾಖಾವಾರು ಅನುದಾನದ ಬಗ್ಗೆ ದಾಖಲೆ ಬಿಡುಗಡೆ ಗೊಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಈಗಿನ ಶಾಸಕ ಎಚ್‌.ಪಿ.ಮಂಜುನಾಥ್‌, ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ತಮ್ಮ ವಿರುದ್ಧ ತಾಲೂಕಿಗೆ ಯಾವುದೇ ಅನುದಾನ ತಂದಿಲ್ಲವೆಂದು ಲಘುವಾಗಿ ಆರೋಪಿಸಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಬೇಕಿದ್ದರೆ ಕಾಮಗಾರಿ ನಡೆಯುತ್ತಿರುವ ಗ್ರಾಮಗಳಿಗೆ ಬರಲಿ. ನಮ್ಮ ಕಾರ್ಯಕರ್ತರು, ಮುಖಂಡರು ಮನದಟ್ಟು ಮಾಡಿಕೊಡಲಿದ್ದಾರೆ ಎಂದು ತಿರುಗೇಟು ನೀಡಿದರು.

ಎಲ್ಲ ವಿಚಾರಗಳು ಗೊತ್ತಿದ್ದರೂ ನನ್ನ ಅಭಿವೃದ್ಧಿಯನ್ನು ಮರೆ ಮಾಚಲು ಸುಳ್ಳು ಹೇಳುತ್ತಿದ್ದಾರೆ. ಇನ್ನು ಮುಂದೆ ಬಹಿರಂಗವಾಗಿ ಲಘುವಾಗಿ ಮಾತನಾಡಬೇಡಿ, ಚುನಾವನೆ ಫಲಿತಾಂಶದ ದಿನವೇ ತಾವು ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡುವೆನೆಂದು ಹೇಳಿದ್ದೆ, ಈಗಲೂ ಅದಕ್ಕೆ ಬದ್ಧನಿದ್ದೇನೆ. ವಿನಾಕಾರಣ ಅಧಿಕಾರಿಗಳಿಗೆ ತೊಂದರೆ ನೀಡಬೇಡಿ ಎಂದು ಎಚ್ಚರಿಕೆ ನೀಡಿದರು.

49 ಕೆರೆಗಳ ನೀರುತುಂಬಿಸುವ ಯೋಜನೆ: ತಮ್ಮ ಅವಧಿಯಲ್ಲಿ ತಾಲೂಕಿನ ಲಕ್ಷ್ಮಣತೀರ್ಥ ನದಿಯಿಂದ ಏತನೀರಾವರಿ ಮೂಲಕ ಮರದೂರು ಕುಪ್ಪೆ-ಕೊಳಗಟ್ಟ ಮಾರ್ಗವಾಗಿ ಚೈನ್‌ ಲಿಂಕ್‌ ಮಾದರಿಯಲ್ಲಿ 49 ಕೆರೆಗಳಿಗೆ ನೀರು ತುಂಬಿಸುವ 63.50 ಕೋಟಿ ರೂ. ವೆಚ್ಚದ ಕಾಮಗಾರಿಗೆ 2018-19ರ ಬಜೆಟ್‌ನಲ್ಲಿ ಸೇರಿಸಿದೆ. ಕಟ್ಟೆಮಳಲವಾಡಿ ನಾಲಾ ಆಧುನೀಕರಣ ಯೋಜನೆಗೆ 37.80 ಕೋಟಿ ಮಂಜೂರಾಗಿದೆ.

ಅಲ್ಲದೆ ಚಿಲ್ಕುಂದ ಏತ ನೀರಾವರಿ ಯೋಜನೆಯಡಿ 14 ಕೆರೆಗಳಿಗೆ ನೀರು ತುಂಬಿಸುವ 19 ಕೋಟಿ ರೂ. ವೆಚ್ಚದ ಕಾಮಗಾರಿಗೂ ಅನುಮೋದನೆ ದೊರೆತಿದ್ದು, ಈ ಹಿಂದೆ ಇದೇ ಯೋಜನೆ ಕಳಪೆ ಕಾಮಗಾರಿಯಿಂದಾಗಿ ಹಳ್ಳ ಹಿಡಿದಿತ್ತು. ಇದರಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಶಾಸಕರ ಕುಟುಂಬದವರೇ ಹಣ ಮಾಡಿಕೊಂಡಿದ್ದಾರೆಂದು ಗಂಭೀರ ಆರೋಪ ಮಾಡಿದರು.

Advertisement

ವಿವಿಧ ಕಾಮಗಾರಿಗಳಿಗೆ ಅನುದಾನ: 2018-19ನೇ ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ 10.70 ಕೋಟಿ ರೂ., ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 64 ಕೋಟಿ ರೂ. ಮಂಜೂರಾಗಿದೆ. ಅಲ್ಲದೆ 2019-20ನೇ ಸಾಲಿನಲ್ಲಿ ಯಡಿಯೂರಪ್ಪನವರು 60 ಗ್ರಾಮಗಳ ಸಾಮಾನ್ಯ ವರ್ಗಗಳ ಬೀದಿಗಳ ಅಭಿವೃದ್ಧಿ ಗೆ 35 ಕೋಟಿರೂ ಹಾಗೂ ವಿವಿಧ ಕಾಲೇಜುಗಳ ಅಭಿವೃದ್ಧಿಗೆ 11 ಕೋಟಿ ರೂ. ಹಾಗೂ ನಗರಸಭೆಗೆ 5 ಕೋಟಿ ರೂ. ವಿಶೇಷ ಅನುದಾನ,

ಮೋದೂರು ಗೌರಿಕೆರೆ ತಡೆಗೋಡೆ, ಹಾಗೂ ರಸ್ತೆ ನಿರ್ಮಾಣಕ್ಕೆ 1.62 ಕೋಟಿ ರೂ. ಹಾಗೂ ತಾಲೂಕಿನ ವಿವಿಧ ವಿದ್ಯುತ್‌ ಸಬ್‌ ಸ್ಟೇಷನ್‌ ಮತ್ತು ಕಚೇರಿ ಕಟ್ಟಡ ನಿರ್ಮಾಣಕ್ಕೆ 5,90 ಕೋಟಿ ರೂ. ಬಿಡುಗಡೆಯಾಗಿದೆ. ಮನುಗನಹಳ್ಳಿ, ನಲ್ಲೂರುಪಾಲ, ಚಿಲ್ಕುಂದ, ಹರೀನಹಳ್ಳಿಗಳಲ್ಲಿ ಬಸ್‌ನಿಲ್ದಾಣ ನಿರ್ಮಿಸಲು ಒಂದು ಕೋಟಿ ರೂ. ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದರು. ಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಯೋಗಾನಂದಕುಮಾರ್‌, ಮುಖಂಡರಾದ ಶಿವಶೇಖರ್‌, ಸತ್ಯಪ್ಪ, ಪ್ರಭು ಇದ್ದರು.

ಕಬಿನಿಯಿಂದ ಕೋಟೆ-ಹುಣಸೂರಿಗೆ ನೀರು: ಹುಣಸೂರು ಹಾಗೂ ಎಚ್‌.ಡಿ.ಕೋಟೆ ತಾಲೂಕಿನ ಎಲ್ಲ ಹಳ್ಳಿಗಳಿಗೂ ಕುಡಿಯುವ ನೀರೊದಗಿಸುವ 270 ಕೋಟಿ ರೂ. ವೆಚ್ಚದ ಬೃಹತ್‌ ಯೋಜನೆ ರೂಪಿಸಲಾಗಿದೆ. ಡಿಪಿಆರ್‌ ಆಗಿದ್ದು, ಸಚಿವ ಸಂಪುಟದಲ್ಲಿ ಮಂಜೂರಾತಿ ದೊರೆಯಬೇಕಿದೆ. ಹುಣಸೂರು ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣದ ಯೋಜನೆ ಸಿದ್ದರಾಮಯ್ಯರ ಅವಧಿಯಲ್ಲಿ ಮಂಜೂರಾಗಿತ್ತಷ್ಟೆ, ಅನುದಾನ ಬಿಡುಗಡೆಯಾಗಿರಲಿಲ್ಲ. ಭೂಮಿಯನ್ನು ಮಂಜೂರು ಮಾಡಿಸಿ, ಆಡಳಿತಾತ್ಮಕ ಮಂಜೂರಾತಿ, ಹಣಕಾಸು ಇಲಾಖೆಯಿಂದ ಹಣ ಬಿಡುಗಡೆ ಮಾಡಿಸಿದ್ದು ತಾವೆಂದು ಹೇಳಿಕೊಂಡರು.

ರಾಜ್ಯಕ್ಕೆ ಯೋಜನೆ ಕೊಟ್ಟವನು ನಾನು: ಇದೇ ಪ್ರಥಮ ಬಾರಿಗೆ ಹಳ್ಳಿಗಳ ಸಾಮಾನ್ಯ ವರ್ಗದ ಬೀದಿಗಳ ಅಭಿವೃದ್ದಿಗೆ ಅನುದಾನ ತರುವ ಜೊತೆಗೆ ತಾಲೂಕನ್ನು ಯುನಿಟ್‌ ಆಗಿ ಪರಿವರ್ತಿಸಿಕೊಂಡು ಸಮಗ್ರ ಅಭಿವೃದ್ದಿಗೆ 60 ಕೋಟಿ ರೂ ಮುಂಜೂರು ಮಾಡಿಸಿ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಇದು ರಾಜ್ಯದಲ್ಲೇ ಪ್ರಥಮವಾಗಿದ್ದು, ಉಳಿದೆಲ್ಲೆಡೆಯೂ ಆರಂಭವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next