ವೀರನಹೊಸಹಳ್ಳಿ ಹೆಬ್ಬಾಗಿಲು(ಹುಣಸೂರು): ಗಜಪಯಣ ಸರಕಾರದ ಕಾರ್ಯಕ್ರಮ ವಾಗಿಸದೆ, ಜನರ ಹಬ್ಬವಾಗಿಸಿದಲ್ಲಿ ಮತ್ತಷ್ಟು ಮೆರಗು ಸಿಗಲಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಬಣ್ಣಿಸಿದರು.
ನಾಗರಹೊಳೆ ಉದ್ಯಾನದ ಹೆಬ್ಟಾಗಿಲು ವೀರನ ಹೊಸಹಳ್ಳಿಯ ಮುಖ್ಯ ದ್ವಾರದಲ್ಲಿ ಗಜಪಯಣಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದ ನಂತರ ವೇದಿಕೆ ನಡೆದ ಸಮಾರಂಭದಲ್ಲಿ ಮಾವುತರು-ಕವಾಡಿಗಳನ್ನು ಗೌರವಿಸಿ ಮಾತನಾಡಿದರು.
ವಿಶ್ವವಿಖ್ಯಾತ ದಸರಾ ಮುನ್ನುಡಿಯಾಗಿರುವ ಗಜಪಯಣ ಹುಣಸೂರಿನ ಹೆಮ್ಮೆ, ಮೈಸೂರಿನ ಅಸ್ಮಿತೆಯೂ ಹೌದು. ಆದರೆ ಗಜಪಯಣ ಸರಕಾರದ ಹಬ್ಬವಾಗಬಾರದು, ಬದಲಿಗೆ ಜನರ ಹಬ್ಬವಾಗಬೇಕು. ಈ ಹಿಂದಿನಂತೆ ದಸರಾಕ್ಕೆ ತೆರಳುವ ಆನೆಗಳನ್ನು ಮೈಸೂರಿಗೆ ನಡೆಸಿಕೊಂಡು ಹೋಗುವುದು ಆಕರ್ಷಣೀಯ, ಅರಣ್ಯ ಇಲಾಖೆಯ ನಿಯಮ ದಂತೆ ನಿತ್ಯ 15 ಕಿ.ಮೀ.ನಂತೆ ಆನೆಗಳನ್ನು ನಡೆಸಿ ಕೊಂಡು ಹೋದಲ್ಲಿ ಪ್ರತಿ ಹಳ್ಳಿಯಲ್ಲೂ ಗಜಪಯಣ ವನ್ನು ಕಣ್ತುಂಬಿಕೊಳ್ಳುತ್ತಾರೆ. ಹೆಚ್ಚಿನ ಪ್ರಚಾರವೂ ಸಿಗಲಿದೆ ಎಂದು ಎಂಎಲ್‌ಸಿ ವಿಶ್ವನಾಥರ ಆಶಯಕ್ಕೆ ಸಾಥ್ ನೀಡಿದರು.
ಸ್ವಾಮಿಕಾರ್ಯ-ಸ್ವಕಾರ್ಯ ಸಂತಸ: ಗಜಪಯಣ ದಿಂದಾಗಿ ಸ್ವಾಮಿ ಕಾರ್ಯ-ಸ್ವ ಕಾರ್ಯಕ್ಕೂ ಅವಕಾಶ ಸಿಕ್ಕಂತಾಗಿದೆ. ಗಜಪಯಣವು ಒಂದೆಡೆ ಮನೆ ಕಾರ್ಯಕ್ರಮದಂತಾದರೆ ಮತ್ತೂಂದೆಡೆ ನಾಗರ ಹೊಳೆ ಉದ್ಯಾನದ ಹಾಗೂ ಮಾವುತರು- ಕವಾಡಿಗಳು, ಜಮೆದಾರರ ಸಮಸ್ಯೆಗಳಿಗೆ ಇಲ್ಲಿಗೆ ಆಗಮಿಸುವ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಮೂಲಕ ಪರಿಹಾರ ಸಿಗಲಿದೆ ಎಂಬ ಆಶಯ ವ್ಯಕ್ತಪಡಿಸಿ, ತಮ್ಮ ಮನವಿ ಮೇರೆಗೆ ಮಾವುತರು-ಕವಾಡಿಗಳ ಸಂಬಳ ಪರಿಷ್ಕರಣೆ ಮಾಡುವ ಮೂಲಕ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಗೋಗಿ ಮತ್ತು ಹಿರಿಯ ಅಧಿಕಾರಿಗಳ ಸಹಕಾರವನ್ನು ಸ್ಮರಿಸಿ, ಅಭಿನಂದಿಸಿದರು.
ಸಚಿವರ ಅಸಡ್ಡೆ: ಬೇಸರ: ಉಸ್ತುವಾರಿ ಸಚಿವ ಎಸ್ .ಟಿ.ಸೋಮಶೇಖರ್ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ಗಜಪಡೆಯ ಪೂಜಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ವೇದಿಕೆ ಕಾರ್ಯಕ್ರಮಕ್ಕೆ ಬಾರದೆ ತೆರಳಿರುವುದನ್ನು ಪ್ರಸ್ತಾಪಿಸಿದ ಶಾಸಕ ಮಂಜುನಾಥ್ ಸಚಿವರಿಬ್ಬರು ಗಜಪಯಣಕ್ಕೆ ಅಸಡ್ಡೆ ತೋರಿದ್ದಾರೆಂದು ಬೇಸರ ವ್ಯಪ್ತಪಡಿಸಿದರೆ, ಆದಿವಾಸಿ ಮುಖಂಡರಾದ ಜೆ.ಟಿ.ರಾಜಪ್ಪ, ಚಂದ್ರು ಹಾಗೂ ನೆರೆದಿದ್ದ ಸಾರ್ವಜನಿಕರೂ ಸಹ ಸಚಿವರ ಗೈರಿಗೆ ಆಕ್ರೋಶ ವ್ಯಕ್ತಪಡಿಸಿದರು. ಸಚಿವರಿಬ್ಬರು ಹೊರಟು ಹೋದ ಸುದ್ದಿ ತಿಳಿದ ಅರಣ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಗಲಿಬಿಲಿಗೊಂಡಿದ್ದು ಕಂಡುಬಂತು.
ಕಾಡುಕುಡಿಗಳ ಸಾಂಸ್ಕೃತಿಕ ರಂಗು: ಗಜಪಯಣದ ಪ್ರಮುಖ ಆಕರ್ಷಣೆಗಳಲ್ಲೊಂದಾದ ಆದಿವಾಸಿ ಮಕ್ಕಳು, ಟಿಬೇಟಿಯನ್ನುರ ಸಂಪ್ರಾದಾಯಿಕ ಜನಪದ ನೃತ್ಯವು ಎಲ್ಲರ ಗಮನ ಸೆಳೆಯಿತು. ವೀರನಹೊಸಹಳ್ಳಿ, ನಾಗಾಪುರ ಆಶ್ರಮ ಶಾಲಾ ಮಕ್ಕಳು ನೀಡಿದ ಪರಿಸರ-ಕಾಡು ಕುರಿತ ನೃತ್ಯ, ಗುರುಪುರ ಟಿಬೇಟಿಯನ್ ಶಾಲಾ ಮಕ್ಕಳ ಸಾಂಪ್ರದಾಯಿಕ ನೃತ್ಯ ಮತ್ತು ವೀರಗಾಸೆ, ಚಂಡೆ, ಡೊಳ್ಳು ಕುಣಿತ, ನಗಾರಿ ಕಲಾ ತಂಡಗಳು ನೀಡಿದ ಪ್ರದರ್ಶನ ನೆರೆದಿದ್ದವರ ಮನಸೂರೆಗೊಂಡಿತು.
ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧೀಕಾರಿ ವಿಜಯಕುಮಾರ್ ಗೋಗಿ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಎಸ್‌ಪಿ ಚೇತನ್, ಉಪವಿಭಾಗಾಧಿಕಾರಿ ವರ್ಣಿತ್‌ನೇಗಿ, ಸಿಎಫ್ ಗಳಾದ ಮಾಲತಿಪ್ರಿಯಾ, ಮೂರ್ತಿ, ಡಿಸಿಎಫ್ ಗಳಾದ ಹರ್ಷಕುಮಾರ್ ಚಿಕ್ಕನಲಗುಂದ, ಕರಿಕಾಳನ್, ಕಮಲ, ರುದ್ರೇಶ್, ಎಸಿಎಫ್‌ಗಳಾದ ಶಿವರಾಮ್, ಲಕ್ಷ್ಮೀನಾರಾಯಣ್, ಗೋಪಾಲ್, ಮಹದೇವಪ್ಪ, ತಹಶಿಲ್ದಾರ್ ಡಾ.ಅಶೋಕ್, ಇಓ.ಬಿ.ಕೆ.ಮನು, ಗ್ರಾ.ಪಂ.ಅಧ್ಯಕ್ಷರಾದ ಸುಭಾಷ್, ರಾಜಮ್ಮ, ಕಸಾಪ ಅಧ್ಯಕ್ಷ ಮಹದೇವ್ ಇದ್ದರು.
–ಸಂಪತ್‌ಕುಮಾರ್ ಹುಣಸೂರು