Advertisement

ಹುಣಸೂರು: ಕಟ್ಟೆಮಳಲವಾಡಿ ಮಾರುಕಟ್ಟೆಯಲ್ಲಿ ತಂಬಾಕು ಹರಾಜಿಗೆ ಶಾಸಕ ಮಂಜುನಾಥ್ ಚಾಲನೆ

10:00 AM Oct 11, 2022 | Team Udayavani |

ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಹರಾಜು ಪ್ರಕ್ರಿಯೆಗೆ ಶಾಸಕ ಎಚ್.ಪಿ.ಮಂಜುನಾಥ್ ರೈತ ಮುಖಂಡರೊಡಗೂಡಿ ಚಾಲನೆ ನೀಡಿದರು.

Advertisement

ಮೊದಲ ದಿನ ಗುಣಮಟ್ಟದ ತಂಬಾಕು ಕೆ.ಜಿ.ಗೆ 202 ರೂ. ಹರಾಜು ನಡೆಯಿತು. ಕಳೆದ ಬಾರಿ ಆರಂಭದ ದಿನ ಕೆ.ಜಿ.ಗೆ 185ರೂ.ಗೆ ಹರಾಜಾಗಿತ್ತು. ಕಳೆದ ವರ್ಷ 163.70 ರೂ. ಸರಾಸರಿ ಬೆಲೆ ಸಿಕ್ಕಿತ್ತು. ಮಾರುಕಟ್ಟೆಗೆ 27 ಬೇಲ್‌ ಬಂದಿದ್ದು, 28 ಕಂಪನಿಗಳು ಭಾಗವಹಿಸಿದ್ದರು.

ಕಟ್ಟೆಮಳಲವಾಡಿ ಪ್ಲಾಟ್ ಫಾರಂ 2 ಮತ್ತು 3 ಹಾಗೂ 64ರ ಹರಾಜು ಪ್ರಾಂಗಣಕ್ಕೆ ಮೊದಲ ದಿನ ಮಾರುಕಟ್ಟೆಗಾಗಮಿಸಿದ್ದ ಬೇಲ್‌ಗಳನ್ನು ಎಲೆಕ್ಟ್ರಾನಿಕ್‌ ಯಂತ್ರದ ಮೂಲಕ ಬಿಡ್‌ಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕ ಎಚ್.ಪಿ.ಮಂಜುನಾಥ್, ಎರಡು ವರ್ಷಗಳ ಕೋವಿಡ್-19 ಹಾಗೂ ಈ ವರ್ಷದ ಅತಿಯಾದ ಮಳೆಯಿಂದಾಗಿ ರೈತರು ಸಂಕಷ್ಟದ ನಡುವೆಯೂ ಸಾಲ ಮಾಡಿ ತಂಬಾಕು ಬೆಳೆ ಬೆಳೆದಿದ್ದು, ಇಡೀ ಬದುಕನ್ನೇ ಬೇಲ್‌ಗಳಾಗಿ ಪರಿವರ್ತಿಸಿ ಮಾರುಕಟ್ಟೆಗೆ ತಂದಿದ್ದಾರೆ. ಹರಾಜು ಪ್ರಕ್ರಿಯೆ ವೇಳೆ ಕಂಪನಿಯವರು ರೈತರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ತಂಬಾಕು ಖರೀದಿ ಮಾಡಬೇಕು.  ಖರೀದಿ ಕಂಪನಿಗಳು ಹಾಗೂ ರೈತರ ನಡುವೆ ಸೇತುವೆಯಾಗಿ ತಂಬಾಕು ಮಂಡಳಿ ಅಧಿಕಾರಿಗಳು ಕಾರ್ಯನಿರ್ವಹಿಸಿ ರೈತರ ನೆರವಿಗೆ ನಿಲ್ಲಬೇಕೆಂದು ಸೂಚಿಸಿದರು.

ಕೆಲ ರೈತ ಮುಖಂಡರು ಮಾತನಾಡಿ, ಈ ಬಾರಿ ಸಾಲ ಮಾಡಿ 2-3 ಬಾರಿ ತಂಬಾಕು ಬೆಳೆಯಲು ರಸಗೊಬ್ಬರ ಬಳಸಿದ್ದು, ಪ್ರತಿ ವರ್ಷ ಖರ್ಚು ಹೆಚ್ಚಾಗುತ್ತಿದೆ. ಹೀಗಾಗಿ ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದೇವೆ. ಮಾರುಕಟ್ಟೆಯಲ್ಲಿ ಪಾರದರ್ಶಕತೆ ಜೊತೆಗೆ ಹಲವಾರು ಮೂಲ ಸೌಕರ್ಯದ ಸಮಸ್ಯೆಗಳಿದ್ದು, ತಕ್ಷಣವೇ ಸೌಕರ್ಯ ಕಲ್ಪಿಸಬೇಕೆಂದು ಅಧಿಕಾರಿಗಳು ಹಾಗೂ ಶಾಸಕರಲ್ಲಿ ಮನವಿ ಮಾಡಿದರು.

Advertisement

ರೈತರ ನೆರವಿಗೆ ಮಂಡಳಿ: ತಂಬಾಕು ಮಂಡಳಿ ಪ್ರಾದೇಶಿಕ ನಿರ್ದೇಶಕ ಲಕ್ಷ್ಮಣ್‌ರಾವ್‌ ಮಾತನಾಡಿ, ರಾಜ್ಯದ ಹೊಗೆಸೊಪ್ಪು ಬೆಳೆಗಾರರು ಅತಿಯಾದ ಮಳೆಯಿಂದ ತೊಂದರೆಗೊಳಗಾಗಿದ್ದಾರೆ. ಖರೀದಿ ಕಂಪನಿಗಳು ರೈತರ ನಿರೀಕ್ಷೆಯಂತೆ ಬೆಲೆ ನೀಡುವತ್ತ ಗಮನ ಹರಿಸಬೇಕೆಂದು ಸೂಚಿಸಿ, ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದ್ದು, ಮಂಡಳಿ ರೈತರ ಪರವಾಗಿದ್ದು, ಆತಂಕಕ್ಕೊಳಗಾಗಬೇಡಿ. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲವೆಂಬ ಭರವಸೆ ನೀಡಿದರು. ಹುಡಿ ಮಾರಾಟಕ್ಕೂ ಅವಕಾಶ: ಇದೇ ಪ್ರಥಮ ಬಾರಿಗೆ ಹುಡಿ ಹೊಗೆಸೊಪ್ಪನ್ನು ಮಾರುಕಟ್ಟೆಯಲ್ಲೇ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಹಳ್ಳಿಗಳಲ್ಲಿ ದಳ್ಳಾಳಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡದಂತೆ ಆರ್.ಎಂ.ಓ.ಮನವಿ ಮಾಡಿದರು.

ಸಂಸದ-ನಿರ್ದೇಶಕರ ಗೈರು ರೈತರ ಆಕ್ರೋಶ:

ಸಂಸದ ಪ್ರತಾಪ ಸಿಂಹ, ತಂಬಾಕು ಮಂಡಳಿಯ ಹರಾಜು ನಿರ್ದೇಶಕಿ ಅಶ್ವಿನಿ ನಾಯ್ಡು ಗೈರಾಗಿದ್ದರು. ಕಳೆದ ಒಂದೂವರೆ ವರ್ಷಗಳಿಂದ ಮಾರುಕಟ್ಟೆಗೆ ಬರಲು ರೈತ ಮುಖಂಡರು ಮನವಿ ಮಾಡಿದರೂ ಮಾರುಕಟ್ಟೆಗೆ ಬಾರದ ಹರಾಜು ನಿರ್ದೇಶಕಿ ಅಶ್ವಿನಿ ನಾಯ್ಡುರನ್ನು ಕರೆಸಬೇಕೆಂದು ಆಕ್ರೋಶ ಹೊರ ಹಾಕಿದರು.

ಕಟ್ಟೆಮಳಲವಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಧಾರಾಣಿ‌ ತಗಡಯ್ಯ, ಮಾಜಿ ಅಧ್ಯಕ್ಷ ನಟರಾಜ್, ಸದಸ್ಯರು, ರೈತ ಮುಖಂಡರಾದ ಶಿವಣ್ಣೇಗೌಡ, ಚಂದ್ರೇಗೌಡ, ಎ.ಪಿ.ಸ್ವಾಮಿ, ರಾಮೇಗೌಡ, ರಾಜೇಗೌಡ, ಶ್ರೀಧರ, ಅಶೋಕ, ತಂಬಾಕು ಮಂಡಳಿಯ ಅಧಿಕಾರಿಗಳು ಹಾಗೂ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಬೆಳೆಗಾರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next