ಕೆ.ಆರ್.ನಗರ: ತಾಲೂಕಿನ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ 40 ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರ ವಾಪಸ್ ಪಡೆದಿದೆ ಎಂದು ಶಾಸಕ ಸಾ.ರಾ.ಮಹೇಶ್ ಬಿಜೆಪಿ ವಿರುದ್ದ ಆರೋಪಿಸಿದ್ದಾರೆ. ಆದರೆ ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಾಲೂಕಿಗೆ ಬಂದಿದ್ದ ನೂರಾರು ಕೋಟಿ ಅನುದಾನ ವಾಪಸ್ ಹೋಗಲು ನೀವಲ್ಲವೇ? ಎಂದು ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್ ಪ್ರಶ್ನಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಸಕರು ತಾವು ಮಾಡಿದ ತಪ್ಪನ್ನು ಮರೆ ಮಾಚಲು ಜನರ ದಾರಿ ತಪ್ಪಿಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ತಾಲೂಕಿಗೆ ಸಾಕಷ್ಟು ಅನುದಾನ ತರಲಾಗಿತ್ತು. ಆದರೆ ಶಾಸಕರು ಅವುಗಳಿಗೆ ಚಾಲನೆ ನೀಡದೆ, ಅನುದಾನ ವಾಪಸ್ ಹೋಗಲು ಕಾರಣರಾಗಿದ್ದಾರೆ ಎಂದು ದೂರಿದರು.
ಬಿಜೆಪಿ ಸರ್ಕಾರವನ್ನು ಟೀಕಿಸುವ ಶಾಸಕ ಸಾರಾ ಮಹೇಶ್, ನಾಡಹಬ್ಬ ದಸರಾವನ್ನು ಬಹಿಷ್ಕರಿಸಿ, ಜಿಲ್ಲಾ ಉಸ್ತುವಾರಿ ಸಚಿವರ ಕೆಡಿಪಿ ಸಭೆಯಲ್ಲೂ ಭಾಗವಹಿಸಿಲ್ಲ. ಈ ರೀತಿ ಬಹಿಷ್ಕಾರ ಹಾಕುವ ಬದಲು ಸರ್ಕಾರದ ಮೇಲೆ ಒತ್ತಡ ಹೇರಿ ತಾಲೂಕಿನ ಅಭಿವೃದ್ಧಿಗೆ ಅನುದಾನ ತರಲು ಸಾಧ್ಯವಿಲ್ಲವೆ? ಮತದಾರರಿಗೆ ಮೋಸ ಮಾಡುವ ಈ ಗಿಮಿಕ್ ಹೆಚ್ಚು ದಿನ ನಡೆಯುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರದಲ್ಲಿರುವವರು ಆಡಳಿತದಲ್ಲಿರುವ ಸರ್ಕಾರ ಮತ್ತು ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಬೇಕು. ಅದನ್ನು ಬಿಟ್ಟು ಸದಾ ಸರ್ಕಾರವನ್ನು ಟೀಕಿಸುವ ಬದಲು, ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಗಮನಹರಿಸಬೇಕು. ಕುರುಬ ಸಮುದಾಯದವರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಅವರನ್ನು ನಿರ್ಲಕ್ಷಿಸಿರುವ ನೀವು ಇನ್ನಾದರೂ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು ಎಂದು ಕೋರಿದರು.
ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ, ನಗರ ಯೋಜನಾ ಪ್ರಾಧಿಕಾರ ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್, ಕಾಂಗ್ರೆಸ್ ಸೇವಾ ದಳದ ತಾಲೂಕು ಅಧ್ಯಕ್ಷ ರಾಘವೇಂದ್ರಸ್ವಾಮಿ ಹಾಜರಿದ್ದರು.