ಚಿತ್ರದುರ್ಗ: ದಾವಣಗೆರೆ ಲೋಕ ಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಕಗ್ಗಂಟನ್ನು ಬಿ.ಎಸ್. ಯಡಿಯೂರಪ್ಪ ಬಗೆಹರಿಸಿದ ಬೆನ್ನಲ್ಲೇ ಚಿತ್ರದುರ್ಗ ಬಿಜೆಪಿಯಲ್ಲೂ ಭಿನ್ನಮತ ಸ್ಫೋಟಗೊಂಡಿದೆ. ಟಿಕೆಟ್ ಕೈ ತಪ್ಪಿದ್ದರಿಂದ ಆಕ್ರೋಶಗೊಂಡಿರುವ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹಾಗೂ ಅವರ ಪುತ್ರ ಎಂ.ಸಿ.ರಘುಚಂದನ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ರಘುಚಂದನ್ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಬೇಸರ ವ್ಯಕ್ತಪಡಿಸಿ ದ್ದರು. ಗುರುವಾರ ಶಾಸಕ ಎಂ.ಚಂದ್ರಪ್ಪ ಮನೆಯಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು, ಶಾಸಕರು ಹಾಗೂ ಅವರ ಪುತ್ರ ರಘುಚಂದನ್ ಕೈಗೊಳ್ಳುವ ನಿರ್ಧಾರಕ್ಕಾಗಿ ಕಾದಿದ್ದರು.
ಶುಕ್ರವಾರ ನಿರ್ಧಾರ :
ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಸಿ.ರಘುಚಂದನ್, ರಾಜಕೀಯವಾಗಿ ಚಿತ್ರದುರ್ಗ ಆಶ್ರಯವಿಲ್ಲದವರಿಗೆ ನಿರಾಶ್ರಿತರ ಕೇಂದ್ರವಾಗಿರುವುದು ಅತ್ಯಂತ ನೋವಿನ ಸಂಗತಿ. 500 ಕಿ.ಮೀ. ದೂರದ ಗೋವಿಂದ ಕಾರಜೋಳ ಅವರನ್ನು ಚಿತ್ರದುರ್ಗದ ಅಭ್ಯರ್ಥಿಯನ್ನಾಗಿ ಘೋಷಿಸಿರುವುದು ಯಾವ ಪುರುಷಾರ್ಥಕ್ಕೆ? ಚಿತ್ರ ದುರ್ಗದಲ್ಲಿ ಗಂಡಸರು ಇಲ್ಲವೇ? ಇದು ನಮ್ಮ ಸ್ವಾಭಿಮಾನ ಹಾಗೂ ಅಸ್ಮಿತೆಯ ಪ್ರಶ್ನೆ. ಹಾಗಾಗಿ ಶುಕ್ರವಾರ ಕಾರ್ಯಕರ್ತರ ಸಭೆ ನಡೆಸಿ ಮುಂದಿನ ನಡೆ ಬಗ್ಗೆ ತೀರ್ಮಾನಿಸುವುದಾಗಿ ತಿಳಿಸಿದರು.
2013ರ ವಿಧಾನಸಭೆ ಚುನಾವಣೆಯಲ್ಲಿ ಮೂಡಿಗೆರೆಯಲ್ಲಿ ಸೋತ ಬಿ.ಎನ್.ಚಂದ್ರಪ್ಪ ಅವರನ್ನು ಕರೆ ತಂದು ಇಲ್ಲಿಂದ ಸಂಸದರನ್ನಾಗಿ ಮಾಡಲಾಯಿತು. 2019ರಲ್ಲಿ ಆನೇಕಲ್‌ನಲ್ಲಿ ಸೋತಿದ್ದ ಎ.ನಾರಾಯಣ ಸ್ವಾಮಿ ಅವರನ್ನು ಕರೆಸಿ ಚಿತ್ರದುರ್ಗದಿಂದ ಸಂಸತ್ತಿಗೆ ಕಳುಹಿಸಲಾಯಿತು. ಈಗ ಮುಧೋಳದಲ್ಲಿ ಸೋತಿರುವ ಗೋವಿಂದ ಕಾರಜೋಳಗೆ ಪಕ್ಷ ಅವಕಾಶ ಮಾಡಿಕೊಟ್ಟಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಇದುವರೆಗೆ ನಂಬಿದ್ದೆವು. ಈಗಲೂ ನಂಬಿದ್ದೇವೆ. ನಮ್ಮಲ್ಲಿ ಸ್ಪ ರ್ಧಿಸಲು ಯಾರಿಗೂ ಶಕ್ತಿ ಇಲ್ಲವೇ ಎಂದು ಪ್ರಶ್ನಿಸಿದರು.