Advertisement

ರವಿ ವಿರುದ್ಧ ಶಾಸಕ ಕುಮಾರಸ್ವಾಮಿ ಅಸಮಾಧಾನ 

11:01 AM Jul 17, 2021 | Team Udayavani |

ಚಿಕ್ಕಮಗಳೂರು: ಜಿಲ್ಲೆಯ ಜನಪ್ರತಿನಿಧಿಗಳ ನಡುವೆ ಬಿರುಕು ಮೂಡಿದೆ. 2 ಬಣಗಳಾಗಿವೆ ಎಂಬ ಸುದ್ದಿ ಹರಿದಾಡುತ್ತಿತ್ತು. ಕೆಲವುದಿನಗಳ ಹಿಂದೆ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಸಚಿವಕೆ. ಸುಧಾಕರ್‌ ಭೇಟಿ ನೀಡಿದಾಗ ಶಾಸಕರು ಗುಪ್ತ್ ಗುಪ್ತ್ ಸಭೆ ನಡೆಸಿದ್ದರು ಎಂಬ ಸುದ್ದಿಹರಿದಾಡಿದ ಬೆನ್ನಲ್ಲೇ ಮೂಡಿಗೆರೆಕ್ಷೇತ್ರ ಶಾಸಕ ಎಂ.ಪಿ.ಕುಮಾರಸ್ವಾಮಿ ಸಿ.ಟಿ. ರವಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

Advertisement

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಜಿಲ್ಲೆಯಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುತ್ತಿದ್ದು ನಮ್ಮ ಗಮನಕ್ಕೆ ತಂದಿಲ್ಲ, ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಾರೆಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು ಜಿಲ್ಲೆಯ ಜನಪ್ರತಿನಿಧಿಗಳ ನಡುವೆ ಸಮನ್ವಯತೆ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಈ ಸಂಬಂಧ ಮಾದ್ಯಮದವರು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಯಾವುದೇ ಅಧಿಕಾರಿ ವರ್ಗಾವಣೆ ಮಾಡಬೇಕಾದರೆ ಕೋರ್‌ಕಮಿಟಿಯಲ್ಲಿ ಚರ್ಚಿಸಬೇಕು. ಉಸ್ತುವಾರಿ ಸಚಿವರಿಂದ ಆಗಬೇಕು ಎಂಬ ತೀರ್ಮಾನ ಆಗಿತ್ತು. ಇದ್ಯಾವುದೂ ನಡೆಯುತ್ತಿಲ್ಲ ಎಂದು ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್‌ ವರ್ಗಾವಣೆ ಬಗ್ಗೆ ನಾನು ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಏಕೆಂದರೆ ನಮ್ಮಲ್ಲಿ ಅರಣ್ಯ ಸಮಸ್ಯೆ ಇದೆ. ನುರಿತ ಮತ್ತು ತಾಳ್ಮೆಯುಳ್ಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಬೇಕಿದೆ. ಸಿ.ಟಿ.ರವಿಯವರ ಕ್ಷೇತ್ರದಲ್ಲಿ ಅರಣ್ಯ ಸಮಸ್ಯೆ ಇಲ್ಲ. ಅವರು ಹೋಗಿ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ವರ್ಗಾವಣೆ ಮಾಡಿಸಿಕೊಂಡು ತಮಗೆ ಬೇಕಾದವರನ್ನು ಹಾಕಿಸಿಕೊಂಡು ಬಂದರೆ ಹೇಗೆ ಎಂದು ಪ್ರಶ್ನಿಸಿದರು.

ತಾಲೂಕಿನಲ್ಲಿ ಅರಣ್ಯ ಸಮಸ್ಯೆ ಬಗೆಹರಿಯುತ್ತಿಲ್ಲ ಎಂಬ ನೋವು ಜನಪ್ರತಿನಿಧಿಗಳು ಮತ್ತು ರೈತರಿಗಿದೆ.ಈ ಹಿನ್ನೆಲೆಯಲ್ಲಿ ಚರ್ಚೆಯಾಗದೆ ಅಧಿಕಾರಿಯನ್ನು ವರ್ಗಾವಣೆ ಮಾಡಿಸಿಕೊಂಡು ಬಂದರೆ ರೈತರನ್ನು, ಒತ್ತುವರಿದಾರರನ್ನು ಕಾಪಾಡುವವರು ಯಾರಿದ್ದಾರೆ ಎಂಬ ಬೇಜಾರು ನಮಗಿದೆ ಎಂದರು.

Advertisement

ಸಿ.ಟಿ.ರವಿ ಅವರ ಅಣತಿಯಂತೆ ಎಲ್ಲವೂ ನಡೆಯುತ್ತಿದೆ. ಯಾಕೆ ನಮ್ಮನ್ನು ಕೇಳದೆ ಈ ರೀತಿ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ, ಅವರು ಉನ್ನತ ಹುದ್ದೆಯಲ್ಲಿದ್ದಾರೆ. ಉನ್ನತ ಹುದ್ದೆಯಲ್ಲಿದ್ದವರು ರಾಜಕೀಯದಲ್ಲಿ ಹಿರಿಯರು ಎಂಬ ಭಾವನೆ ಇದೆ. ಎಲ್ಲರನ್ನೂ ಒಂದೇ ರೀತಿ ಕೊಂಡೊಯ್ಯಬೇಕು. ಆದರೆ, ಸಿ.ಟಿ. ರವಿ ಅವರು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆಯಾಗುತ್ತಿರುವುದು ಉಳಿದ ಶಾಸಕರ ಗಮನಕ್ಕೆ ಬರುವುದಿಲ್ಲ. ಬಂದ ಅಧಿಕಾರಿಗಳು ಸೌಜನ್ಯಕ್ಕೂ ಪರಿಚಯ ಮಾಡಿಕೊಳ್ಳುವುದಿಲ್ಲ. ದಾರಿಯಲ್ಲಿ ಸಿಕ್ಕಾಗ ಪರಿಚಯ ಮಾಡಿಕೊಳ್ಳುತ್ತಾರೆ. ಜಿಲ್ಲೆಯಲ್ಲಿ ಎಲ್ಲವೂ ಸಿ.ಟಿ.ರವಿ ಅವರ ಅಣತಿಯಂತೆ ನಡೆಯುತ್ತಿದೆ. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಒಳ್ಳೆಯ ಅಧಿಕಾರಿಗಳು ಬರಬೇಕು ಎಂಬುದು ನಮ್ಮ ಆಸೆಯಾಗಿದೆ ಎಂದರು.

ಸಿ.ಟಿ.ರವಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂತಹ ಉನ್ನತ ಹುದ್ದೆಯಲ್ಲಿದ್ದೇನೆ. ಎಲ್ಲವೂ ನಾನು ಹೇಳಿದಂತೆ ಆಗಬೇಕು ಎಂಬ ಮನಸ್ಥಿತಿ ಹೊಂದಿರಬೇಕು. ಇದೇ ರೀತಿ ಅವರ ವರ್ತನೆ ಮುಂದುವರಿದರೆ ಪಕ್ಷದ ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕರ ಗಮನಕ್ಕೆ ತರುವುದಾಗಿ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next