ಅರಸೀಕೆರೆ: ಬರಗಾಲ ಪೀಡಿತ ಪ್ರದೇಶದ ಜನರು ಅನುಭವಿಸುತ್ತಿದ್ದ ಸಂಕಷ್ಟವನ್ನು ಬಗೆಹರಿಸಬೇಕೆಂಬ ಸಂಕಲ್ಪದಲ್ಲಿ ಅವಿರತ ಹೋರಾಟ ಮಾಡಿ, ಕ್ಷೇತ್ರದ ಜನತೆಗೆ ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ಯಶಸ್ವಿಯಾಗಿದ್ದೇನೆ ಹೊರತು, ಸುಳ್ಳು ಆಶ್ವಾಸನೆ ಗಳನ್ನು ನೀಡಿ ಜನರನ್ನು ವಂಚಿಸುವ ಕೀಳುಮಟ್ಟದ ರಾಜಕಾರಣವನ್ನು ತಾವು ಎಂದಿಗೂ ಮಾಡುವುದಿಲ್ಲ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ತಾಲೂಕಿನ ಕಣಕಟ್ಟೆ ಹೋಬಳಿ ದೊಡ್ಡಮೇಟಿ ಕುರ್ಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 2 ಕೋಟಿ ರೂ.ನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರ ಶಾಸಕನಾದ ಮೇಲೆ ಅನೇಕ ಕಾಮಗಾರಿಗಳನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿ ಸಿದ್ದೇನೆ. ಹೇಮಾವತಿ ನದಿ ಮೂಲದಿಂದ ದೊಡ್ಡ ಮೇಟಿ ಕುರ್ಕೆಯ ಹೊಸ ಕೆರೆಗೆ ನೀರು ಹರಿಸುವ ಯೋಜನೆಯಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಮುಗಿಯಲಿದೆ ಎಂದು ತಿಳಿಸಿದರು.
ಮನೆ ಮನೆಗೆ ಗಂಗೆ: ಕಳೆದ ಅನೇಕ ವರ್ಷಗಳಿಂದ ಕ್ಷೇತ್ರದ ಗ್ರಾಮೀಣ ಜನತೆ ಕುಡಿಯುವ ನೀರಿಗಾಗಿ ಪರದಾಡುವ ದುಸ್ಥಿತಿಯನ್ನು ತಪ್ಪಿಸಲು ಟ್ಯಾಂಕರ್‌ಗಳ ಮೂಲಕ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ತಮ್ಮ ಅವಿರತ ಹೋರಾಟದ ಫಲವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮನೆ, ಮನೆಗೆ ಗಂಗೆ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ತಮ್ಮೆಲ್ಲರ ಆಶೀರ್ವಾದದಿಂದ ಯಶಸ್ವಿಯಾಗಿದ್ದೇನೆ ಎಂದು ಹೇಳಿದರು.
ವಿರೋಧಿಗಳಿಂದ ದಾರಿ ತಪ್ಪಿಸುವ ಕೆಲಸ: ಇದನ್ನು ಕಂಡು ಸಹಿಸದ ತಮ್ಮ ರಾಜಕೀಯ ವಿರೋಧಿಗಳು ಇಲ್ಲಸಲ್ಲದ ವ್ಯರ್ಥ ಆರೋಪಗಳನ್ನು ಮಾಡುವ ಮೂಲಕ ಕ್ಷೇತ್ರದ ಜನತೆಯನ್ನು ದಾರಿ ತಪ್ಪಿಸುವ ವಿಫಲ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇಂತಹ ಟೀಕೆ ಟಿಪ್ಪಣಿಗಳಿಗೆ ಅಂಜುವ ಜಾಯಮಾನ ತಮ್ಮದಲ್ಲ, ಅಭಿ ವೃದ್ಧಿ ಕಾರ್ಯಗಳ ಅನುಷ್ಠಾನದ ಮೂಲಕ ತಕ್ಕ ಉತ್ತರ ನೀಡ ಲು ಬದ್ಧನಾಗಿದ್ದೇನೆ ಎಂದು ಸವಾಲು ಹಾಕಿದರು. ಜಾಗೃತಿ ವಹಿಸಲು ಕಿವಿಮಾತು: ದೊಡ್ಡಮೇಟಿ ಕುರ್ಕೆ ಗ್ರಾಮ ಪರಿಮಿತಿಯಲ್ಲಿ 120 ಲಕ್ಷ ರೂ.ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ. ಸೊಪ್ಪಿನಹಳ್ಳಿ ಗ್ರಾಮ ಪರಿಮಿತಿಯಲ್ಲಿ 25 ಲಕ್ಷ ರೂ.ನಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ, ಹರಳಕಟ್ಟ ಗ್ರಾಮದ ಪರಿಮಿತಿಯಲ್ಲಿ 10 ಲಕ್ಷ ರೂ.ನಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ, ಎಂ.ವಿ.ಹಟ್ಟಿ ಪರಿಮಿತಿಯಲ್ಲಿ 30 ಲಕ್ಷ ರೂ.ನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಲಾಗಿದೆ. ಗ್ರಾಮಸ್ಥರು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಗುತ್ತಿಗೆದಾರರಿಂದ ಮಾಡಿಸಬೇಕು. ಈ ಬಗ್ಗೆ ಜಾಗೃತಿ ವಹಿಸಬೇಕೆಂದು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಕುಮಾರ್, ಜಿಪಂ ಮಾಜಿ ಸದಸ್ಯ ಮಾಡಾಳು ಸ್ವಾಮಿ, ಮಾಜಿ ಅಧ್ಯಕ್ಷ ಗಿರೀಶ್, ಸದಸ್ಯರಾದ ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಶಶಿಕುಮಾರ್, ರಾಂಪುರ ಗ್ರಾಪಂ ಅಧ್ಯಕ್ಷ ಕರುಣಾಕರ, ಮಾಜಿ ಅಧ್ಯಕ್ಷ ಸುರೇಶ್, ಮುಖಂಡರಾದ ಸುರೇಶ್, ಚಂದ್ರಪ್ಪ, ಕೊಟ್ರಪ್ಪ, ಹರೀಶ್, ಗ್ರಾಮಸ್ಥರು ಹಾಜರಿದ್ದರು.