ಚಿಕ್ಕಮಗಳೂರು: ಹುನಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಇನ್ನೊಂದು ವಿವಾದದಲ್ಲಿ ಸಿಲುಕಿದ್ದು ಹಿಟ್ ರನ್ ಮಾಡಿ ಪರಾರಿಯಾದ ಆರೋಪ ಕೇಳಿ ಬಂದಿದೆ.
ಮೂಡಿಗೆರೆಯ ಕಬ್ಬಿಣದ ಸೇತುವೆ ಬಳಿ ಶನಿವಾರ ರಾತ್ರಿ ಯುವಕರು ಪ್ರಯಾಣಿಸುತ್ತಿದ ಬೈಕ್‌ಗೆ ಕಾರು ಗುದ್ದಿ ಸೌಜನ್ಯಕ್ಕೂ ನಿಲ್ಲಿಸದೆ ಪರಾರಿಯಾಗಿದ್ದಾರೆ.
ಬೈಕ್ ಸಂಪೂರ್ಣ ಜಖಂಗೊಂಡಿದ್ದು , ಬೈಕ್‌ನಲ್ಲಿದ್ದ ಯುವಕರಿಗೆ ಗಾಯಗಳಾಗಿವೆ. ಕೂಡಲೆ ಸ್ಥಳೀಯರ ಬೆಂಬಲದೊಂದಿಗೆ ಬೆನ್ನಟ್ಟಿದ್ದ ಇನ್ನೆರಡು ಬೈಕ್‌ಗಳಲ್ಲಿದ್ದ ಯುವಕರು 10 ಕಿ.ಮೀ ದೂರದಲ್ಲಿ ಕಾಶಪ್ಪನವರ್ ಅವರ ಕಾರನ್ನು ತಡೆದಿದ್ದಾರೆ.
ಈ ವೇಳೆ ತೀವ್ರ ವಾಗ್ಯುದ್ಧ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ನಾನು ಎಸಿ ಹಾಕಿದ್ದೆ ಬೈಕ್‌ಗೆ ಡಿಕ್ಕಿಯಾದದ್ದು ಗಮನಿಸಲಿಲ್ಲ ಎಂದು ಉಡಾಫೆ ಉತ್ತರ ನೀಡಿರುವುದಾಗಿ ವರದಿಯಾಗಿದೆ.
ವಿಜಯಾನಂದ ಕಾಶಪ್ಪನವರ್ ಅವರೇ ಕಾರನ್ನು ಚಲಾಯಿಸುತ್ತಿದ್ದು, ಕುಟುಂಬ ಸದಸ್ಯರೊಂದಿಗೆ ಧರ್ಮಸ್ಥಳಕ್ಕೆ ಯಾತ್ರೆಗಾಗಿ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಸ್ಕೈ ಬಾರ್‌ನಲ್ಲಿ ನಡೆದ ಗಲಾಟೆಯಿಂದ ಕಾಶಪ್ಪನವರ್ ಈ ಹಿಂದೆ ವಿವಾದಕ್ಕೆ ಗುರಿಯಾಗಿದ್ದರು.