ಕೋಲಾರ: ಜೆಡಿಎಸ್‌ನಿಂದ ನನ್ನನ್ನು 7 ತಿಂಗಳ ಹಿಂದೆಯೇ ಉಚ್ಛಾಟನೆ ಮಾಡಿರುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಹೀಗಿರುವಾಗ ರಾಜ್ಯಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದೇನೆ, ನಾನು ಯಾರಿಗೆ ಮತ ಹಾಕಿದರೆ ಅವರಿಗೇನು? ನನ್ನನ್ನು ಕೇಳಲು ಕುಮಾರಸ್ವಾಮಿ ಮತ್ತು ಜೆಡಿಎಸ್ ಮುಖಂಡರಿಗೆ ಯಾವ ಹಕ್ಕಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಪ್ರಶ್ನಿಸಿದರು.
ಶನಿವಾರ ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜೆಡಿಎಸ್ ನಿಂದ ಉಚ್ಛಾಟನೆ ಮಾಡಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಹೀಗಿರುವಾಗ ನಾನು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು. ಅದು ನನ್ನಿಷ್ಟ. ನನ್ನನ್ನು ಪ್ರಶ್ನಿಸುವ ಹಕ್ಕು ಅವರಿಗೆ ಇಲ್ಲವೆಂದು ಸ್ಪಷ್ಟಪಡಿಸಿದರು.
ಇನ್ನೂ ಪತ್ರ ಸಿಕ್ಕಿಲ್ಲ: ಉಚ್ಛಾಟನೆ ಮಾಡಿದ್ದೀ ಎಂದು ಹೇಳುತ್ತಿದ್ದಾರೆಯೇ ಹೊರತು ನನಗೆ ಆ ಪತ್ರ ಈವರೆಗೂ ಸಿಕ್ಕಿಲ್ಲ. ಕೊಟ್ಟರೆ ಕೊಡಲಿ ಇಲ್ಲದಿದ್ದರೆ ಅವರೇ ಇಟ್ಟುಕೊಳ್ಳಲಿ. ಇದನ್ನೆಲ್ಲ ಅರಿಯದೆ ನನ್ನ ಮನೆಯ ಬಳಿ ಬಂದು ಜೆಡಿಎಸ್‌ನವರು ಪ್ರತಿಭಟನೆ ಮಾಡಿರುವುದರಲ್ಲಿ ಅರ್ಥವೇ ಇಲ್ಲ ಎಂದು ತಿರುಗೇಟು ನೀಡಿದರು.
ಡಿಕ್ಟೇಟರ್ ಮಾದರಿ ಆಡಳಿತ: 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಲ್ಲಿ ಕೋಲಾರ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಗತಿ ಇರಲಿಲ್ಲ. ಆ ಕಾರಣಕ್ಕಾಗಿ ನನಗೆ ಬಿ ಫಾರಂ ಕೊಟ್ಟಿದ್ದಾರೆಯೇ ಹೊರತು ಬೇರೇನೂ ಅಲ್ಲ. ನಾನು ಸತತ 4 ಬಾರಿ ಶಾಸಕನಾಗಿದ್ದವನು, ಧರ್ಮಸಿಂಗ್ ಮುಖ್ಯಮಂತ್ರಿ ಯಾಗಿದ್ದಾಗ ಸಚಿವನಾಗಿದ್ದವನು ಎಂದರು. ನಾನು ಸಚಿವನಾಗಿದ್ದ ಸಮಯದಲ್ಲಿ ಆಗ ಇನ್ನೂ ಎಚ್.ಡಿ.ಕುಮಾರಸ್ವಾಮಿ ಶಾಸಕರೂ ಆಗಿರಲಿಲ್ಲ. ಹೀಗಿರುವಾಗ ನನ್ನ ಸೀನಿಯಾರಿಟಿಯನ್ನೂ ನೋಡದೇ ಜೆಡಿಎಸ್ ಪಕ್ಷದಲ್ಲಿ ಸಚಿವ ಸ್ಥಾನಮಾನ ನೀಡಲು ನಿರ್ಲಕ್ಷ್ಯ ತೋರಿದರು. ನಮ್ಮ ಕೋಲಾರ ಭಾಗದವರು ಮತ್ತು ಸಂಬಂಧಿಕರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಅವರ ನಡತೆಗಳು ನ್ಯಾಯಯುತವಾಗಿ ಇರದೆ ಡಿಕ್ಟೇಟರ್ ರೀತಿ ಇದ್ದವು ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕರಿಗೆ ಹಣ: ಇಂಚರ ಗೋವಿಂದರಾಜು ಎಂಎಲ್ಸಿ ಆಗುವುದಕ್ಕಾಗಿ ಪ್ರತಿಯೊಬ್ಬ ಶಾಸಕರಿಗೂ ತಲಾ 50 ಲಕ್ಷ ರೂ. ಗಳನ್ನು ನೀಡಿದ್ದಾರೆ. ನನಗೂ ಕೊಡುವುದಕ್ಕೆ ಬಂದಿದ್ದರು, ನಾನು ನಿರಾಕರಿಸಿದೆ ಎಂದು ಆರೋಪಿಸಿದರು. ಶಿರಸಿಯಲ್ಲಿ ಕೆಎಸ್‌ಆರ್‌ಟಿಸಿ ನೌಕರನಾಗಿದ್ದ ಇಂದಿನ ಎಂಎಲ್‌ಸಿ ಇಂಚರ ಗೋವಿಂದರಾಜುರನ್ನು ಅವರ ಅಣ್ಣ ಬಲರಾಮಣ್ಣ ಒತ್ತಾಯದ ಮೇರೆಗೆ ಕೋಲಾರದ ಕಡೆಗೆ ವರ್ಗಾವಣೆ ಮಾಡಿಸಿಕೊಟ್ಟಿದ್ದೆ. ಎಲ್ಲವನ್ನು ಮರೆತು ಈಗ ನನ್ನನ್ನು ನಿಂದಿಸುತ್ತಿದ್ದಾರೆ. ಇದಕ್ಕೆ ನಾನೇನು ಹೇಳಲಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದರು.
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತಮಗೆ ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆಗ ಇದ್ದ ಮಹಾನುಭಾವನ (ಕೆ.ಎಚ್. ಮುನಿಯಪ್ಪ) ಕೈವಾಡದಿಂದಾಗಿ ನನಗೆ ಕಾಂಗ್ರೆಸ್‌ನಲ್ಲಿ ಅವಕಾಶ ಸಿಗಲಿಲ್ಲ. ಕೊನೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಆತನೇ ಸೋತನು. ಈಗ ಬುದ್ಧಿ ಬಂದಿದೆ, ಸಿಕ್ಕಾಗ ಗೌರವದಿಂದ ಮಾತನಾಡಿಸುತ್ತಿದ್ದಾರೆ ಎಂದರು. ಕೆ.ಶ್ರೀನಿವಾಸಗೌಡರ ಬೆಂಬಲಿಗರಾದ ಕೆ.ವಿ.ದಯಾನಂದ್, ಕೆಂಬೋಡಿ ನಾರಾಯಣಗೌಡ, ಅನ್ವರ್ ಪಾಷ ಇತರರಿದ್ದರು.
ನಾನು ಮೂಲ ಕಾಂಗ್ರೆಸ್ಸಿಗ: ಹಲವು ಸಂಕಷ್ಟದ ನಡುವೆ ನಾನು ಜೆಡಿಎಸ್ ಪಕ್ಷ ತೊರೆದು, ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದೆ. ಅಲ್ಲದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸಲು ಮಾಜಿ ಸ್ಪೀಕರ್ ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶ್ ಕುಮಾರ್ ಸಾಕಷ್ಟು ಶ್ರಮಿಸಿದ್ದಾರೆ ಎಂದು ಹೇಳಿದರು. ವಿಚಾರವಾದಿಗಳು, ಬುದ್ಧಿಜೀವಿಗಳು ಆಗಿರುವ ರಮೇಶ್‌ಕುಮಾರ್ ಅವರೊಂದಿಗೆ ಸದ್ಯ ನಾನು ಗುರುತಿಸಿಕೊಂಡಿದ್ದೇನೆ. ನನಗೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಗಲಿ ಬಿಡಲಿ, ನಾನು ಮೂಲ ಕಾಂಗ್ರೆಸ್ಸಿಗ. ಪಕ್ಷದಲ್ಲೇ ಇರುತ್ತೇನೆ ಎಂದ ಅವರು, ನನ್ನ ಪುತ್ರ ಹೋಳೂರು ಜಿಪಂ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲು ಎಲ್ಲ ಸಿದ್ಧತೆ ನಡೆಸಲಾಗಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.