Advertisement

ನಿಮ್ಮ ವಂಶ ನಿರ್ವಂಶವಾಗುತ್ತದೆ: ಕೆ. ವೆಂಕಟೇಶ್ ವಿರುದ್ಧ ಶಾಸಕ ಕೆ.ಮಹದೇವ್ ಕಿಡಿ

06:35 PM Mar 08, 2023 | Team Udayavani |

ಪಿರಿಯಾಪಟ್ಟಣ: ನಾನು ದೇವಾಲಯದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದೇನೆ ಎಂದು ಸುಳ್ಳು ಆರೋಪ ಮಾಡುತ್ತಿರುವ ಮಾಜಿ ಶಾಸಕ ಕೆ.ವೆಂಕಟೇಶ್ ರವರಿಗೆ ನೈತಿಕತೆ ಹಾಗೂ ದೇವರ ಮೇಲೆ ನಂಬಿಕೆ ಇದ್ದರೆ ಇಂದು ನಡೆಯುವ ಮಸಣಿಕಮ್ಮ ಬ್ರಹ್ಮ ರಥೋತ್ಸವದಲ್ಲಿ ಬಂದು ದೇವರ ಮುಂದೆ ಪ್ರಮಾಣ ಮಾಡಲಿ ಎಂದು ಶಾಸಕ ಕೆ.ಮಹದೇವ್ ಸವಾಲು ಹಾಕಿದ್ದಾರೆ.

Advertisement

ತಾಲೂಕಿನ ಕರಡಿಬೊಕ್ಕೆ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಸ್ತೆ ಅಭಿವೃದ್ದಿ ಕಾಮಗಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,ನಾಲ್ಕುವರೆ ವರ್ಷಗಳಿಂದ ಕಾಣೆಯಾಗಿದ್ದ ಮಾಜಿ ಶಾಸಕ ಕೆ.ವೆಂಕಟೇಶ್ ದಿಢೀರ್ ಪ್ರತ್ಯಕ್ಷರಾಗಿ ಸುಳ್ಳು ಆರೋಪಗಳನ್ನು ಮಾಡುತ್ತಾ ತಾಲೂಕಿನ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಮಸಣಿಕಮ್ಮ ದೇವಾಲಯದಲ್ಲಿ ಶಾಸಕ ಕೆ.ಮಹದೇವ್ ಅವರ ಪಕ್ಷದ ಕೆಲವು ಮುಖಂಡರು ಸೇರಿಕೊಂಡು 1.26 ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಸುಳ್ಳು ಆರೋಪಿಸಿದ್ದಾರೆ. ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು, ಅಲ್ಲಿನ ಹಣ ಸರಕಾರದ ಖಜಾನೆಯಲ್ಲಿರುತ್ತದೆ ಹೀಗಿರುವಾಗ ಆ ಹಣವನ್ನು ನಾನು ಹೇಗೆ ಲಪಟಾಯಿಸಲು ಸಾಧ್ಯ, ನನಗೆ ದೇವರ ಮೇಲೆ ಅಪಾರ ಭಕ್ತಿ ಮತ್ತು ನಂಬಿಕೆ ಇದೆ ಹಾಗಾಗಿ ತಿಂಗಳಿಗೆ ಒಮ್ಮೆ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ ಬರುತ್ತೇನೆ. ಇದೇ ಮಾಜಿ ಶಾಸಕರಿಗೆ ದೇವರ ಮೇಲೆ ನಂಬಿಕೆ ಮತ್ತು ಭಕ್ತಿ ಯಾವುದು ಇಲ್ಲ, ಹಾಗೇನಾದರೂ ಅವರಿಗೆ ದೇವರ ಮೇಲೆ ನಿಜವಾಗಿಯೂ ಭಕ್ತಿ ಇದ್ದರೆ ಇಂದು ಬ್ರಾಹ್ಮಿ ಮುಹೂರ್ತದಲ್ಲಿ ನಡೆಯುವ ಮಸಣಿಕಮ್ಮ ತಾಯಿಯ ಬ್ರಹ್ಮ ರಥೋತ್ಸವಕ್ಕೆ ಅವರು ಬರಲಿ, ನಾನು ಬರುತ್ತೇನೆ “ಅಲ್ಲಿ ನಾನು ದೇವರ ಹಣವನ್ನು ಲೂಟಿ ಮಾಡಿಲ್ಲ” ಎಂದು ದೇವರ ಕೊರಳಿಗೆ ಹಾರ ಹಾಕುತ್ತೇನೆ ಅದೇ ರೀತಿ ನನ್ನ ಮೇಲೆ ಸುಳ್ಳು ಆರೋಪ ಮಾಡಿರುವ ವೆಂಕಟೇಶ್ ರವರು ಕೂಡ ಇವನು ದೇವರ ಹಣವನ್ನು ಲೂಟಿ ಮಾಡಿದ್ದಾನೆ ಎಂದು ದೇವರ ಕೊರಳಿನಿಂದ ಹಾರ ಎತ್ತಲಿ, ನಾನೆನಾದರೂ ದೇವಾಲಯದ ಹಣವನ್ನು ಲೂಟಿ ಮಾಡಿದ್ದರೆ ನನ್ನ ವಂಶ ನಿರ್ವಂಶವಾಗಲಿ, ಇಲ್ಲದಿದ್ದರೆ ವೆಂಕಟೇಶ್ ರವರ ವಂಶ ನಾಶವಾಗಲಿ ಎಂದು ಆಕ್ರೋಶ ಹೊರ ಹಾಕಿದರು.

ಪತ್ರಕರ್ತರ ಮನೆ ಹಾಳಾಗಲಿ
ಮಾಜಿ ಶಾಸಕ ಕೆ.ವೆಂಕಟೇಶ್ ರವರು ಮಸಣಿಕಮ್ಮ ದೇವಾಲಯದ ಹಣವನ್ನು ಮಹದೇವ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳುವಾಗ ಪತ್ರಕರ್ತರು ಸಾಕ್ಷಿ ಕೇಳಬೇಕಿತ್ತು ಆದರೆ ಅವರು ಮಾಡುವ ಆರೋಪಗಳನ್ನು ಪತ್ರಿಕೆಗಳಲ್ಲಿ ಬರೆದು ನನ್ನ ಮನಸ್ಸಿಗೆ ನೋವು ಮಾಡಿದ್ದೀರಿ. ಪತ್ರಕರ್ತರು ಅವರು ಮಾಡುವ ಆರೋಪಗಳನ್ನು ಪತ್ರಿಕೆಗೆ ಹಾಕುವ ಮೊದಲು ನನ್ನನ್ನು ಕೇಳಬೇಕಿತ್ತು, ಅದನ್ನು ಬಿಟ್ಟು ಅವರು ಮಾಡಿರುವ ಆರೋಪಗಳೇ ನಿಜವೆಂದು ಭಾವಿಸಿ ಪತ್ರಿಕೆಗಳಲ್ಲಿ ಬರೆದು ನನ್ನ ತೇಜೋವಧೆ ಮಾಡಿದ್ದೀರಿ ನಿಮ್ಮ ಮನೆ ಹಾಳಾಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಿಆರ್ಇಡಿ ಎಇಇ ಮಲ್ಲಿಕಾರ್ಜುನ್ ಸಹಾಯಕಿ ಮೇಘನಾ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮುಖಂಡರಾದ ರಂಗಸ್ವಾಮಿ, ಗಗನ್, ಅಶ್ವಿನ್ ಕುಮಾರ್, ನವಿಲೂರು ರಾಜು, ಜಲೇಂದ್ರ, ಚಿರು ದಿರ್ಜಿವಾಲಾ, ಅಶೋಕ್, ಚಲುವರಾಜು, ವಿದ್ಯಾಶಂಕರ್, ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next