ಪಿರಿಯಾಪಟ್ಟಣ: ಕಂದಾಯ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಗಳು ತಾಲೂಕಿನ ಎರಡು ಕಣ್ಣುಗಳು ಇದ್ದ ಹಾಗೆ ಇವುಗಳ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ಕೆ ಮಹದೇವ್ ತಿಳಿಸಿದರು.
ತಾಲ್ಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಈ ಸಭೆಯಲ್ಲಿ ಬಂದಿರುವ ಅರ್ಜಿಗಳನ್ನು ಸಂಪೂರ್ಣವಾಗಿ ವಿಲೇವಾರಿಯಾಗಬೇಕು. ತಪ್ಪಿದ್ದಲ್ಲಿ ಅಧಿಕಾರಿಗಳಿಗೆ ಸಾರ್ವಜನಿಕರ ಎದುರು ಚೀಮಾರಿ ಹಾಕುತ್ತೇನೆ, ಸಂಧ್ಯಾ ಸುರಕ್ಷಾ, ವೃದ್ಯಾಪ ವೇತನ ಇಂತಹ ಅರ್ಜಿಗಳು, ಖಾತೆ ಮಾಡಿಕೊಡಲು ಹಲವಾರು ತಿಂಗಳುಗಳಿಂದ ವಿಲೇ ಇಡಲಾಗಿರುವ ಅರ್ಜಿಗಳನ್ನು ಶೀಘ್ರದಲ್ಲೇ ಇತ್ಯರ್ಥಗೊಳಿಸಬೇಕು ಎಂದು ತಹಸಿಲ್ದಾರ್ ಕೆ.ಚಂದ್ರಮೌಳಿ ಅವರಿಗೆ ಸೂಚಿಸಿದರು.
ಪಿರಿಯಾಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿಗೆ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಹಾಗೂ ಪತ್ರಕರ್ತರಿಂದ ಶಾಸಕರಿಗೆ ದೂರು ಬಂದಿತ್ತು, ಮನೆ ನಿರ್ಮಾಣ ಮತ್ತಿತರ ಉದ್ದೇಶಕ್ಕಾಗಿ ಜಮೀನು ಕಳೆದುಕೊಂಡ ರೈತರು ತಮ್ಮ ದಾಖಲಾತಿ ಸರಿಪಡಿಸಿಕೊಳ್ಳಲು ಕಂದಾಯ ಇಲಾಖೆ ವಿಳಂಬ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಸಾರ್ವಜನಿಕರು ದೂರಿದರು.
ತಹಶೀಲ್ದಾರ್ ಕೆ.ಚಂದ್ರಮೌಳಿ ಮಾತನಾಡಿ ಗ್ರಾಮದ ಸಮಸ್ಯೆಗಳನ್ನು ಅರಿತು ಸ್ಥಳದಲ್ಲೇ ಪರಿಹಾರ ನೀಡುವ ಕಾರ್ಯಕ್ರಮ ಇದಾಗಿದ್ದು, ಬೆಳಿಗ್ಗೆಯಿಂದಲೇ ಸಾರ್ವಜನಿಕರಿಂದ ಸಮಸ್ಯೆಗಳನ್ನು ಕುರಿತಂತೆ ಅರ್ಜಿಗಳನ್ನು ಪಡೆಯಲಾಗಿದ್ದು, ಸಮಸ್ಯೆಗಳ ಪರಿಹಾರಕ್ಕಾಗಿ ಆಯಾಯ ಸಂಬಂಧಪಟ್ಟ ಬಗ್ಗೆ ಇಲಾಖೆಗಳ ಅಧಿಕಾರಿಗಳಿಗೆ ವಿಲೇವಾರಿ ಮಾಡಿ ಕ್ರಮ ವಹಿಸುವಂತೆ ಆದೇಶಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ ಇಒ ಸಿ.ಆರ್.ಕೃಷ್ಣ ಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು, ಸಿಡಿಪಿಒ ಮಮತಾ, ಬಿಇಒ ಬಸವರಾಜು, ಆಹಾರ ಇಲಾಖೆ ಶಿರಸ್ಥೇದಾರ್ ಸಣ್ಣಸ್ವಾಮಿ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಸೋಮಯ್ಯ, ಎಡಿಎಲ್‌ಆರ್ ಚಿಕ್ಕಣ್ಣ, ಗ್ರಾ.ಪಂ. ಗ್ರಾಪಂ ಪಿಡಿಒ ಮಂಜುನಾಥ್, ಅಧ್ಯಕ್ಷೆ ಸುಶೀಲಮ್ಮ, ಉಪಾಧ್ಯಕ್ಷ ಸ್ವಾಮಿಗೌಡ, ಮೈಮುಲ್ ನಿರ್ದೇಶಕ ರಾಜೇಂದ್ರ, ಅಣ್ಣಯ್ಯ ಶೆಟ್ಟಿ, ರಾಮು, ರಂಗಸ್ವಾಮಿ, ಮುಖಂಡರಾದ ಗೋವಿಂದೇಗೌಡ, ಜಲೇಂದ್ರ, ಸುಬ್ರಹ್ಮಣ್ಯ, ರವಿ, ಶಶಿಕಲಾ, ಗೌರಮ್ಮ, ಜ್ಯೋತಿ, ದೇವಪ್ಪ, ನಂಜಪ್ಪ, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಹಾಜರಿದ್ದರು. ಸೇರಿದಂತೆ ಮತ್ತಿತರರು ಹಾಜರಿದ್ದರು.