ಪಿರಿಯಾಪಟ್ಟಣ: ಮನುಷ್ಯ ಸಾಲ ಮಾಡಿ ಜೀವನ ಸಾಗಿಸುವುದು ಸಹಜ ಆದರೆ ಸಾಲಕ್ಕೆ ಅಂಜಿ ಆತ್ಮಹತ್ಯೆಗೆ ಶರಣಾಗುವುದು ಕುಟುಂಬವನ್ನು ಪಾತಾಳಕ್ಕೆ ತಳ್ಳಿದಂತೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.
ಮನುಷ್ಯನಿಗೆ ಬೌದ್ಧಿಕ ಆಲೋಚನಾ ಶಕ್ತಿ ಇದ್ದು, ಆತ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಆರ್ಥಿಕ ಸದೃಡತೆ ಕಂಡುಕೊಳ್ಳಬೇಕಿದೆ. ಜೀವನ ಎಂದ ಮೇಲೆ ಕಷ್ಟಕಾರ್ಪಣ್ಯಗಳು ಬರುವುದು ಸಹಜ, ಜೀವನ ನಿರ್ವಹಣೆಗಾಗಿ ಅನೇಕರಿಂದ ಸಾಲ ಮಾಡಬೇಕಾದ ಪ್ರಸಂಗ ಬರುತ್ತದೆ ಆದರೆ ಸಾಲಕ್ಕೆ ಅಂಜಿ ಆತ್ಮಹತ್ಯೆಗೆ ಶರಣಾದರೆ ಕುಟುಂಬ ಅನಾಥವಾಗುತ್ತದೆ ಎಂಬುದನ್ನು ಮರೆಯಬಾರದು ರೈತ ಸಮಸ್ಯೆಗಳನ್ನು ಎದುರಿಸಲು ಸಿದ್ಧವಾಗಿರಬೇಕೆ ವಿನಹ ನಮ್ಮನ್ನೆ ನಂಬಿ ಬದುಕುತ್ತಿರುವ ಕುಟುಂಬದ ಸದಸ್ಯರಿಗೆ ನೋವು ನೀಡಬಾರದು ಎಂದರು.
ತಹಶೀಲ್ದಾರ್ ಕೆ.ಚಂದ್ರಮೌಳಿ ಮಾತನಾಡಿ ರೈತರ ನೆರವಿಗೆ ಸರ್ಕಾರ ಸಿದ್ದವಿದೆ ರೈತರು ಎಂತಹ ಸಂಕಷ್ಟದಲ್ಲಿದ್ದರೂ ಆತ್ಮಹತ್ಯೆಯ ನಿರ್ಧಾರಗಳನ್ನು ತೆಗೆದು ಕೊಳ್ಳಬಾರದು, ಒಬ್ಬ ರೈತ ಆತ್ಮಹತ್ಯೆಗೆ ಶರಣಾದರೆ ಇಡೀ ಕುಟುಂಬ ಬೀದಿಪಾಲಾಗುತ್ತೆದೆ ಬದುಕುವ ಎಲ್ಲ ಅವಕಾಶಗಳನ್ನು ದೇವರು ಕೊಟ್ಟರೂ ಇಂತ ಹ್ಯೇಯ ಕೃತ್ಯಕ್ಕೆ ಮುಂದಾಗಬಾರದು ಎಂದು ಕಿವಿಮಾತು ಹೇಳಿದರು.
ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಪ್ರಸಾದ್ ಮಾತನಾಡಿ ರೈತರು ಸಾಲ ರೈತರ ದುಡುಕಿನ ನಿರ್ಧಾರಗಳಿಂದ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವುದಿಲ್ಲ. ಈ ಬಾರಿ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿಗೆ ಉತ್ತಮ ಬೆಲೆ ನೀಡುತ್ತಿದ್ದರೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿ. ತಾಲ್ಲೂಕಿನಲ್ಲಿ 2021 ನೇ ಸಾಲಿನಲ್ಲಿ 16 ಆತ್ಮಹತ್ಯೆ ಪ್ರಕರಣಗಳಾಗಿದ್ದು. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಧನ, ಹಾಗೂ ಆಕಸ್ಮಿಕವಾಗಿ ಮರಣ ಹೊಂದಿದ ಎರಡು ರೈತ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಧನವನ್ನು ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಾಪಂ ಇಒ ಕೃಷ್ಣಕುಮಾರ್, ಬಿಇಒ ತಿಮ್ಮೇಗೌಡ, ಮುಖಂಡರಾದ ಅಣ್ಣಯ್ಯ ಶೆಟ್ಟಿ, ಸಿ.ಎನ್.ರವಿ ಉಪಸ್ಥಿತರಿದ್ದರು.