ವಿಧಾನಸಭೆ: ರಾಜ್ಯ ಸರ್ಕಾರದಲ್ಲಿ ಹೊರಗುತ್ತಿಗೆ ನೌಕರರೇ ಹೆಚ್ಚಾಗಿದ್ದು, ಇದರಿಂದ ಮೀಸಲಾತಿ ವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಸರ್ಕಾರ ಹೊರಗುತ್ತಿಗೆ ನೇಮಕಾತಿಯನ್ನು ರದ್ದುಪಡಿಸಬೇಕು ಎಂದು ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್ ಆಗ್ರಹಿಸಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 4 ಲಕ್ಷ ಹೊರಗುತ್ತಿಗೆ ನೌಕರರಿದ್ದು, ಅವರು ಸರ್ಕಾರದ ಯಾವುದೇ ಜವಾಬ್ದಾರಿ ವಹಿಸುವುದಿಲ್ಲ. ವಿವಿಧ ಇಲಾಖೆಗಳಿಗೆ ಅವರನ್ನು ಹೊರ ಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳಲು ಬೇರೆ ಬೇರೆ ದರ ನಿಗದಿ ಮಾಡಲಾಗಿದೆ. ವಿಧಾನಸೌಧದ ಸುತ್ತ ಮುತ್ತಲಿನ ಕಚೇರಿಗಳಲ್ಲಿಯೇ ಸುಮಾರು 20 ಸಾವಿರ ಹೊರ ಗುತ್ತಿಗೆ ನೌಕರರಿದ್ದಾರೆ. ಇದರಿಂದ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಅಲ್ಲದೇ ಮೀಸಲಾತಿ ವ್ಯವಸ್ಥೆ ಮೇಲೂ ಪರಿಣಾಮ ಬೀರಿದ್ದು, ಸಂವಿಧಾನವನ್ನೇ ಗಾಳಿಗೆ ತೂರಿದಂತಾಗಿದೆ.
ನಿಗಮ ಮಂಡಳಿಗಳಲ್ಲಿ ಬಹುತೇಕ ಹೊರ ಗುತ್ತಿಗೆ ನೌಕರರೇ ಇದ್ದಾರೆ. ಅವರೇ ಸರ್ಕಾರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿದ್ದರೆ, ಸರ್ಕಾರ ಏನು ಮಾಡುತ್ತಿದೆ. ಸರ್ಕಾರ ಹೊರ ಗುತ್ತಿಗೆ ನೇಮಕಾತಿಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಇನ್ನು ರಾಜ್ಯದ ಸಾಲದ ಹೊರೆ ಹೆಚ್ಚಾಗುತ್ತಿದ್ದು, ಜಲಸಂಪನ್ಮೂಲ ಇಲಾಖೆಯ ವಿವಿಧ ನಿಗಮಗಳ ವ್ಯಾಪ್ತಿಯಲ್ಲಿ 10 ಸಾವಿರ ಕೋಟಿ ರೂ.ಬಾಕಿ ಇದೆ. ಪಿಡಬುÉಡಿಯಲ್ಲಿ 18 ಸಾವಿರ ಕೋಟಿ ಬಾಕಿ, ನಗರಾಭಿವೃದ್ಧಿಯಲ್ಲಿ 18 ಸಾವಿರ ಕೋಟಿ, ಬಿಬಿಎಂಪಿಯಲ್ಲಿ 12 ಸಾವಿರ ಕೋಟಿ ರೂ. ಸೇರಿ ಒಟ್ಟು 75 ಸಾವಿರ ಕೋಟಿ ರೂ. ಬಾಕಿ ಕೊಡಬೇಕಿದೆ. ಇದೂ ಕೂಡ ರಾಜ್ಯದ ಸಾಲವಲ್ಲವೇ. ಬಿಲ್ ಬಾಕಿ ಜೊತೆಗೆ ಕಡತ ಬಾಕಿ ಕೂಡ ಇದೆ. ಸೆಕ್ರೇಟರಿಯೇಟ್ ವ್ಯಾಪ್ತಿಯಲ್ಲಿಯೇ 50 ಸಾವಿರ ಕಡತಗಳು ಬಾಕಿ ಇವೆ. ಕಂದಾಯ ಇಲಾಖೆಯಲ್ಲಿ 5 ಸಾವಿರ, ಗೃಹ ಇಲಾಖೆಯಲ್ಲಿ 6 ಸಾವಿರ, ನಗರಾಭಿವೃದ್ಧಿಯಲ್ಲಿ 6500 , ಕಡತಗಳು ಬಾಇ ಇವೆ. ಸರ್ಕಾರ ಇ ಆಫೀಸ್ ವ್ಯವಸ್ಥೆ ಎಲ್ಲಿದೆ. ಇವೆರಡಕ್ಕೂ ಒಂದಕ್ಕೊಂದು ಸಂಬಂಧ ಇದೆ ಎಂದರು.
ಇದನ್ನೂ ಓದಿ:ಪಾಕಿಸ್ಥಾನಕ್ಕೆ ‘ಆಕಸ್ಮಿಕ’ ಕ್ಷಿಪಣಿ ಉಡಾವಣೆ : ರಕ್ಷಣಾ ಸಚಿವಾಲಯ ವಿಷಾದ
ಬಜೆಟ್ ಮೇಲೆ ಚರ್ಚೆ ನಡೆದು ಸದನದ ಅನುಮತಿ ಪಡೆದು ಸರ್ಕಾರ ಹಣ ಖರ್ಚು ಮಾಡಬೇಕು. ಆದರೆ, ಅನೇಕ ಯೋಜನೆಗಳನ್ನು ಬಜೆಟ್ ಹೊರತಾಗಿಯೂ ಜಾರಿಗೆ ತರಲಾಗುತ್ತಿದೆ. ಆಡಳಿತಾತ್ಮಕ ಒಪ್ಪಿಗೆ ಇಲ್ಲದೆಯೂ ಐದು ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಹಣದ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಶಾಸಕಾಂಗದ ಅನುಮತಿ ಇಲ್ಲದೇ ಅಧಿಕಾರಿಗಳು ಯೋಜನೆಗಳಿಗೆ ಅನುಮತಿ ಕೊಡಲು ಅವಕಾಶ ಕೊಟ್ಟವರಾರು. ಇದು ಆಡಳಿತ ವೈಫಲ್ಯದ ಪರಿಣಾಮ. ಇಂತಹ ಬಜೆಟ್ ಇಟ್ಟುಕೊಂಡು ಯಡಿಯೂರಪ್ಪ ಅವರು ಜನರ ಬಳಿ ಹೇಗೆ ಹೋಗುತ್ತಾರೊ ಗೊತ್ತಿಲ್ಲ ಎಂದು ಹೇಳಿದರು.