ಸಾಗರ: ಸ್ವಚ್ಛಸಾಗರ, ಸುಂದರ ಸಾಗರ ಮತ್ತು ಪ್ಲಾಸ್ಟಿಕ್ ಮುಕ್ತ ಸಾಗರ ನಿರ್ಮಾಣಕ್ಕಾಗಿ ಮುಂದಿನ ಒಂದು ವರ್ಷಗಳ ಕಾಲ ನಿರಂತರವಾಗಿ ಪ್ಲಾಸ್ಟಿಕ್ ಸಂಗ್ರಹಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ 5ನೇ ವಾರ್ಡ್‌ನಲ್ಲಿ ಶನಿವಾರ ನಿರಂತರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪಯೋಗಿಸಿ ಎಸೆದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಾವೇ ಸಂಗ್ರಹಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪ್ಲಾಸ್ಟಿಕ್ ಅತ್ಯಂತ ಅಪಾಯಕಾರಿ. ಅದು ಭೂಮಿಯಲ್ಲಿ ಕgಗುವುದಿಲ್ಲ. ಜೊತೆಗೆ ಪರಿಸರಕ್ಕೂ ಮಾರಕವಾಗಿದೆ. ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಮನವಿ ಮಾಡಿದರು.
ಪ್ರತಿದಿನ ಪ್ಲಾಸ್ಟಿಕ್ ತ್ಯಾಜ್ಯ ಎರಡು ಲಾರಿ ಲೋಡ್‌ನಷ್ಟು ಸಂಗ್ರಹವಾಗುತ್ತಿದೆ. ಪೌರಕಾರ್ಮಿಕರು ಸ್ವಚ್ಛತಾ ಕೆಲಸ ಕೈಗೊಳ್ಳುತ್ತಾರೆ ಎಂದು ಭಾವಿಸುವುದಕ್ಕಿಂತ ಸುಂದರ ಸಾಗರ ಮತ್ತು ಸ್ವಚ್ಛಸಾಗರ ನಿರ್ಮಾಣ ಮಾಡುವಲ್ಲಿ ನಮ್ಮ ಪಾತ್ರವೇನು ಎನ್ನುವುದರ ಬಗ್ಗೆ ಚಿಂತನೆ ನಡೆಸಬೇಕು. ಜನಪ್ರತಿನಿಧಿಯಾಗಿ ನನ್ನ ಕರ್ತವ್ಯ ಪಾಲನೆ ಸಹ ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಪ್ರತಿದಿನ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದರು.
ಪೌರ ಕಾರ್ಮಿಕರು ಸ್ವಚ್ಛತಾ ಕೆಲಸ ಮಾಡುತ್ತಾರೆ ಎಂದು ಸುಮ್ಮನೆ ಕುಳಿತುಕೊಳ್ಳದ ಶಾಸಕ ಹಾಲಪ್ಪ ಕಳೆದ ಆರು ದಿನಗಳಿಂದ ಬೆಳಿಗ್ಗೆ 6ರಿಂದ ೮ರವರೆಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರ ಹಾಜರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲು ದೊಡ್ಡ ಸಂಖ್ಯೆಯ ಅಭಿಮಾನಿಗಳ ತಂಡವೂ ಪಾಲ್ಗೊಳ್ಳುವಂತಾಗಿದೆ. ಶಾಸಕರು ಹಿಂಜರಿಕೆಯಿಲ್ಲದೆ ಸ್ವತಃ ತಾವೇ ರಸ್ತೆ, ಚರಂಡಿ ಪಕ್ಕ, ಉದ್ಯಾನವನ ಇನ್ನಿತರ ಕಡೆಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುತ್ತಿರುವುದು ಗಮನ ಸೆಳೆದಿದೆ.
ಶನಿವಾರ ಕೂಡ ಅವರ ಜೊತೆ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಸದಸ್ಯರಾದ ಆರ್.ಶ್ರೀನಿವಾಸ್, ತುಕಾರಾಮ್ ಡಿ., ಬಿಜೆಪಿ ಪ್ರಮುಖರಾದ ಕೃಷ್ಣ ಶೇಟ್, ಜಯಂತಿ, ಪರಶುರಾಮ್, ಅರುಣಕುಮಾರ್ ಜೈನ್, ಮುಕುಂದ, ಪೌರಾಯುಕ್ತ ರಾಜು ಬಣಕಾರ್, ಹಿರಿಯ ಆರೋಗ್ಯ ನಿರೀಕ್ಷಕಿ ರಚನಾ, ನಾಗರಾಜ್ ಇನ್ನಿತರರು ಹಾಜರಿದ್ದರು.