ಸಾಗರ: ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬಕ್ಕೆ ನಾನು ಕಾರಣವಲ್ಲ. ಅನಗತ್ಯವಾಗಿ ನನ್ನ ಮೇಲೆ ಆರೋಪ ಹೊರಿಸುವ ಕೆಲಸವನ್ನು ಕಾಂಗ್ರೆಸ್ ಸೇರಿದಂತೆ ವಿರೋಧಿಗಳು ಮಾಡುತ್ತಿದ್ದಾರೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ತಾಲೂಕಿನ ಹಸಿರುಮಕ್ಕಿ ಸೇತುವೆಯನ್ನು ಭಾನುವಾರ ವೀಕ್ಷಣೆ ಮಾಡಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ತಾವು ಅಧಿಕಾರದಲ್ಲಿದ್ದಾಗ ಒಂದೂ ಸೇತುವೆಯನ್ನು ಕಟ್ಟದೆ ಇದ್ದವರು ಈಗ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿ, ಶೀಘ್ರದಲ್ಲಿ ಎದುರಾಗಲಿರುವ ಚುನಾವಣೆಯಲ್ಲಿ ಲಾಭ ಗಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ದೂರಿದರು.
2018 ರಲ್ಲಿ ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದ ಸಂದರ್ಭದಲ್ಲಿ 115.59 ಕೋಟಿ ರೂ. ವೆಚ್ಚದಲ್ಲಿ ಹಸಿರುಮಕ್ಕಿ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಕಾಗೋಡು ಆಲೋಚನೆ ಉತ್ತಮವಾಗಿದೆ. ಆದರೆ ಗುತ್ತಿಗೆದಾರ ಕಂಪನಿ ಅವೈಜ್ಞಾನಿಕವಾಗಿ ತಾಂತ್ರಿಕ ವರದಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಿದ್ದೇ ಸೇತುವೆ ವಿಳಂಬವಾಗಲು ಕಾರಣವಾಗಿದೆ. 1,155 ಮೀ. ಉದ್ದ, 35 ಮೀ. ಅಗಲದ ಹಸಿರುಮಕ್ಕಿ ಸೇತುವೆ 33 ಫಿಲ್ಲರ್ ಮೇಲೆ ನಿರ್ಮಾಣಗೊಳ್ಳಬೇಕು. ಆದರೆ ಚೀನಾ ಮೂಲದ ಎಸ್‌ಪಿಎಲ್ ಇನ್‌ಫಾಸ್ಟ್ರೆಕ್ಚರ್ ಸಂಸ್ಥೆ ಡಿಪಿಆರ್ ತಯಾರಿಸುವಾಗ ನೀರಿನ ಆಳವನ್ನು ಸರಿಯಾಗಿ ಅಂದಾಜು ಮಾಡಿಲ್ಲ. ಇದೀಗ ಮತ್ತೆ 110 ಕೋಟಿ ರೂ. ಸೇತುವೆ ಕಾಮಗಾರಿ ಪೂರ್ಣಗೊಳ್ಳಲು ಬೇಕು ಎಂದು ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ರೈತರು ಉದ್ಧಾರವಾಗಲು ಉದ್ಯಮಿಯಾಗಬೇಕು : ಸಚಿವ ಬಿ.ಸಿ.ಪಾಟೀಲ್
2022 ರ ಮಾರ್ಚ್‌ಗೆ ಕಾಮಗಾರಿ ಮುಗಿಯಬೇಕಾಗಿತ್ತು. ಎರಡು ವರ್ಷ ಕೊರೊನಾ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿತ್ತು. ಈ ವರ್ಷ ಕಾರ್ಮಿಕರ ಕೊರತೆ ನೆಪ ಹೇಳಲಾಗುತ್ತಿದೆ. ಇದೀಗ ಹಣದ ಕೊರತೆ ಇದೆ ಎಂದು ಹೇಳಿದ್ದರಿಂದ ಬೆಂಗಳೂರಿನಲ್ಲಿ ಕಾಮಗಾರಿ ಉಸ್ತುವಾರಿ ವಹಿಸಿರುವ ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮದ ಅಧ್ಯಕ್ಷರು ಮತ್ತು ಅಧಿಕಾರಿಗಳ ಸಭೆ ಕರೆದು ಹೆಚ್ಚುವರಿ ಹಣಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಶೀಘ್ರದಲ್ಲಿಯೆ ಕಾಮಗಾರಿಗೆ ಹೆಚ್ಚುವರಿ ಹಣ ಬಿಡುಗಡೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಹಾಲಿ ನಿರ್ವಹಿಸಿರುವ ಕಾಮಗಾರಿಯ ಪೂರ್ಣ ಹಣವನ್ನು ಪಾವತಿ ಮಾಡಲಾಗಿದೆ. ಕಾಮಗಾರಿಗೆ ಸಂಬಂಧಪಟ್ಟ ಹಣವನ್ನು ಹಾಲಪ್ಪ ಕೊಡಿಸಿಲ್ಲ, ಸರ್ಕಾರ ಬಿಡುಗಡೆ ಮಾಡಿಲ್ಲ ಎನ್ನುವುದು ಸುಳ್ಳು ಸುದ್ದಿಯಾಗಿದೆ ಎಂದು ತಿಳಿಸಿದರು.
ಕೆಲವರು ಸೇತುವೆ ಕಾಮಗಾರಿ ವಿಳಂಬವಾಗಿರುವುದಕ್ಕೆ ನಾನೇ ಕಾರಣ ಎಂದು ಹೋರಾಟ ಹಮ್ಮಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟಕ್ಕೆ ನಾನು ಬೆಲೆ ಕೊಡುತ್ತೇನೆ. ಆದರೆ ಹಿಂದೆ ಕಾಗೋಡು ತಿಮ್ಮಪ್ಪ ಅವರು ಸರಿಯಾದ ಗುತ್ತಿಗೆದಾರ ಸಂಸ್ಥೆಯನ್ನು ಗುರುತಿಸದೆ ಕಾಮಗಾರಿ ಹೊಣೆ ನೀಡಿದ್ದು ಯಾರ ತಪ್ಪು. ಮುಂದಿನ ಒಂದರಿಂದ ಎರಡು ವರ್ಷದೊಳಗೆ ಹೆಚ್ಚುವರಿ ಹಣ ಕೊಡಿಸಿ ಹಸಿರುಮಕ್ಕಿ ಸೇತುವೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಕೆಆರ್‌ಐಡಿಎಲ್ ಅಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಪ್ರಮುಖರಾದ ಸುವರ್ಣ ಟೀಕಪ್ಪ, ಸುಬ್ರಹ್ಮಣ್ಯ, ಅಶೋಕ್, ಚೇತನರಾಜ್ ಕಣ್ಣೂರು, ಗಿರೀಶ್ ಗೌಡ, ಸಿದ್ದುಗೌಡ, ಮಂಜಯ್ಯ ಜೈನ್, ಅರುಣ್ ಇನ್ನಿತರರು ಹಾಜರಿದ್ದರು.