Advertisement

ಮತದಾರರ ಆಶಯದಂತೆ ಕೆಲಸ ನಿರ್ವಹಣೆ

03:31 PM May 21, 2023 | Team Udayavani |

ಕೆ.ಆರ್‌.ಪೇಟೆ: ನನ್ನ ಗೆಲುವಿಗೆ ಕಾರಣಕರ್ತರಾಗಿರು ವ ಮತದಾರರ ಆಶಯದಂತೆ ಮುಂದಿನ ದಿನಗಳಲ್ಲಿ ಕೆಲಸ ನಿರ್ವಹಿಸಲಿದ್ದೇನೆ ಎಂದು ಶಾಸಕ ಎಚ್‌. ಟಿ. ಮಂಜು ತಿಳಿಸಿದರು.

Advertisement

ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಸಂತೆಬಾಚಹಳ್ಳಿ ಮತ್ತು ರಂಗನಾಥಪುರ ಕ್ರಾಸ್‌ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ ಅರ್ಪಿಸಿ ಮಾತನಾಡಿ, ನನ್ನ ಮೇಲೆ ಹಾಗೂ ಜೆಡಿಎಸ್‌ ಪಕ್ಷದ ಮೇಲೆ ನಂಬಿಕೆ ಇಟ್ಟು, ನನಗೆ ಮತ ನೀಡುವ ಮೂಲಕ ತಾಲೂಕಿನಲ್ಲಿ ಬದಲಾವಣೆಯನ್ನು ತಂದಿದ್ದೀರಿ. ಕಳೆದ 3-4 ತಿಂಗಳಿನಿಂದ ನಿಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾರ್ಯಕರ್ತರ, ಮತದಾರರ ಹೃದಯದಲ್ಲಿ ಸ್ಥಾನ ಪಡೆದಿದ್ದೇನೆ. ನೀವು ತೋರಿರುವ ಈ ವಿಶ್ವಾಸ, ಪ್ರೀತಿಯನ್ನು ವರ್ಣಿಸಲು ಸಾಧ್ಯವಿಲ್ಲ. ನಿಮ್ಮ ಗ್ರಾಮಗಳಿಗೆ ಭೇಟಿ ನೀಡಿದಾಗ ಎಲ್ಲಾ ವರ್ಗದ ಜನರು ನನಗೆ ಅಪಾರ ಅಭಿಮಾನ ತೋರಿಸಿ, ಹಾರೈಸಿ ನನ್ನ ಗೆಲುವಿಗೆ ಕಾರಣಕರ್ತರಾಗಿದ್ದೀರಿ. ನಾನು ನಿಮ್ಮೊಂದಿಗೆ ಇದ್ದು, ನಿಮ್ಮ ಮಧ್ಯದಲ್ಲಿ ಸಾಮಾನ್ಯ ಸೇವಕನಾಗಿ ಕೆಲಸ ಮಾಡುವ ಮೂಲಕ ನಿಮ್ಮ ಋಣವನ್ನು ತೀರಿಸಲಿದ್ದೇನೆ. ನಿಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗಲಿದ್ದೇನೆ. ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಬದ್ಧನಾಗಿ ಕೆಲಸ ಮಾಡುವ ಮೂಲಕ ನೀವು ಇಟ್ಟಿರುವ ವಿಶ್ವಾಸ, ನಂಬಿಕೆ ಹುಸಿಯಾಗದಂತೆ ನೋಡಿಕೊಳ್ಳುತ್ತೇನೆ ಎಂದರು.

ತಾಲೂಕಿನ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನ: ಚುನಾವಣೆ ಬರುತ್ತದೆ, ಹೋಗುತ್ತದೆ. ಚುನಾವಣಾ ಸಮಯದಲ್ಲಿ ಚುನಾವಣೆ ಮಾಡಿ, ನಂತರ ತಾಲೂಕಿನ ಅಭಿವೃದ್ಧಿಗೆ ನಮ್ಮ ಶಕ್ತಿಮೀರಿ ಪ್ರಯತ್ನ ಮಾಡೋಣ. ತಾಲೂಕು ಶಾಂತಿಪ್ರಿಯರ ನಾಡಾಗಿದ್ದು, ಯಾವುದೇ ಕಾರಣಕ್ಕೂ ದ್ವೇಷ, ಮೋಸ, ವಂಚನೆ ಮುಂತಾದವುಗಳಿಗೆ ಹಾಗೂ ಅನೈತಿಕ, ಅಕ್ರಮ ಚಟುವಟಿಕೆಗಳಿಗೆ ಗಮನ ನೀಡದೆ ಅಣ್ಣತಮ್ಮಂದಿರಂತೆ ಎಲ್ಲಾ ಸಮುದಾಯಗಳೊಂದಿಗೆ ವಿಶ್ವಾಸ, ಶಾಂತಿಯುತವಾದ ಜೀವನ ನಡೆಸುವ ಮೂಲಕ ಇತರರಿಗೆ ಮಾದರಿಯಾಗಬೇಕು. ಸರ್ಕಾರ ದಿಂದ ಸಿಗುವ ಎಲ್ಲಾ ರೀತಿಯ ಅನುದಾನಗಳನ್ನು ನನ್ನ ಶಕ್ತಿಮೀರಿ ತರಲು ಪ್ರಯತ್ನಿಸುತ್ತೇನೆ. ಎಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕಿನ ಅಭಿವೃದ್ಧಿಗೆ ಅರ್ಪಣಾ ಮನೋಭಾವ ದಿಂದ ಕೆಲಸ ಮಾಡಲಿದ್ದೇನೆ ಎಂದು ಹೇಳಿದರು.

ಗ್ರಾಮದ ಸಮಸ್ಯೆ ಪರಿಹಾರಕ್ಕೆ ಸ್ಪಂದನೆ: ಮನ್ಮುಲ್‌ ನಿರ್ದೇಶಕ ಡಾಲುರವಿ ಮಾತನಾಡಿ, ತಾಲೂಕಿನಲ್ಲಿ ಇಲ್ಲಿಯವರೆಗೆ ಗೆದ್ದ ಶಾಸಕರು ಇಲ್ಲಿಗೆ ಬಂದು ಧನ್ಯವಾದ ತಿಳಿಸಿರುವ ಉದಾಹರಣೆಗಳಿಲ್ಲ. ನಿಮಗೆ ನೀಡಿದ ಮಾತಿನಂತೆ ಗೆದ್ದ ನಂತರ ನಿಮ್ಮ ಗ್ರಾಮಗಳ ಮತದಾರರಿಗೆ ಕೃತಜ್ಞತೆ ತಿಳಿಸಲು ಆಗಮಿಸಿದ್ದೇವೆ. ಮಂಜು ಸಾಮಾನ್ಯರ ಕೈಗೆ ಸಿಗುವ ವ್ಯಕ್ತಿಯಾಗಿದ್ದು, ನಿಮ್ಮ ಗ್ರಾಮದ ಸಮಸ್ಯೆಗಳ ಅರಿವಿರುವ ಅವರು ನಮಗೆ ಪೂರಕವಾಗಿ ಸ್ಪಂದಿಸಲಿದ್ದಾರೆ. ನಿಮ್ಮ ಒಂದೊಂದು ಮತಗಳೂ ಸಹ ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಹೇಳಿದರು.

ದೊಡ್ಡಕ್ಯಾತನಹಳ್ಳಿ, ಚಿಕ್ಕಕ್ಯಾತನಹಳ್ಳಿ, ಹುಬ್ಬನಹಳ್ಳಿ, ಲೋಕನಹಳ್ಳಿ, ಹಡೇನಹಳ್ಳಿ, ಅಮಚಹಳ್ಳಿ, ಹೊಸಹಳ್ಳಿ, ಸೋಮೇನಹಳ್ಳಿ, ಕೊತ್ತಮಾರನಹಳ್ಳಿ, ನಾಯಕನಹಳ್ಳಿ, ಕೊಡಗಹಳ್ಳಿ, ಬಿಕ್ಕಸಂದ್ರ, ಅಪ್ಪನಹಳ್ಳಿ, ಮಾವಿನಕಟ್ಟೆ ಕೊಪ್ಪಲು, ಮಾಳಗೂರು, ಹರಪನಹಳ್ಳಿ, ರಂಗನಾಥ ಪುರ, ಬೊಪ್ಪನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಲಾಯಿತು. ತಾಲೂಕು ಜೆಡಿಎಸ್‌ ಅಧ್ಯಕ್ಷ ಜಾನಕೀರಾಮು, ತಾಪಂ ಮಾಜಿ ಸದಸ್ಯ ಮೋಹನ್‌, ಸಂತೇಬಾಚಹಳ್ಳಿ ಹೋಬಳಿ ಜೆಡಿಎಸ್‌ ಅಧ್ಯಕ್ಷ ರವಿಕುಮಾರ್‌, ನಿವೃತ್ತ ಶಿಕ್ಷಕ ಕೃಷ್ಣೇಗೌಡ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next