ಹುಣಸೂರು: ಬಿಳಿಕೆರೆ ಹೋಬಳಿಯ ಧರ್ಮಪುರ ಮುರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಹೆಚ್ಚುವರಿಯಾಗಿ ತೆರೆಯಲಾಗಿರುವ ಕೋವಿಡ್ 19 ನಿಗಾ ಘಟಕ ಕೇಂದ್ರಕ್ಕೆ ಶಾಸಕ ಎಚ್ ಪಿ ಮಂಜುನಾಥ್ , ತಹಶೀಲ್ದಾರ್ ಬಸವರಾಜ್ ರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಧರ್ಮಪುರ ವಸತಿ ಶಾಲೆಯಲ್ಲಿ ಹೆಚ್ಚುವರಿಯಾಗಿ ಪುರುಷ ಮತ್ತು ಮಹಿಳೆ ವಿಭಾಗಕ್ಕೆ ಪ್ರತ್ಯೇಕವಾಗಿ (100+ 100) 200 ಹಾಸಿಗೆಯುಳ್ಳ ಕರೋನ ಸೋಂಕಿತರ ನಿಗಾ ಘಟಕ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಸೋಂಕಿತರಿಗೆ ಅನುಕೂಲವಾಗುವಂತೆ ಕೇಂದ್ರದಲ್ಲಿ ಅಂಬುಲೆನ್ಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿರಬೇಕು ಎಂದರು.
ಎರಡು ಕೇಂದ್ರಗಳಿಗೆ ಪ್ರತ್ಯೇಕವಾಗಿ ಬಿಸಿ ನೀರು ಕಾಯಿಸುವ ಒಂದು ಲೀ ಸಾಮರ್ಥ್ಯದ 10 ಕ್ಯಾಟಲ್ ಗಳು ಇಪ್ಪತ್ತೈದು ಲೀಟರ್ ಸಾಮರ್ಥ್ಯದ ಬಿಸಿ ಹಾಗೂ ತಣ್ಣಿರು ಶುದ್ಧೀಕರಿಸುವ ಎರಡು ಯಂತ್ರಗಳು , ಇದಲ್ಲದೆ ಬಕೆಟ್ಟು, ಜಗ್ಗು, ಬೆಡ್ ಶೀಟ್ ಗಳು, ಅಡಿಗೆ ಹಾಗೂ ಇತರೆ ಸಿಬ್ಬಂದಿಗಳಿಗೆ ಅನುಕೂಲ ವಾಗುವಂತೆ ಒಂದು ನೂರು N 95 ಮಾಸ್ಕ್ ಗಳನ್ನು ಕೇಂದ್ರಕ್ಕೆ ನೀಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿ ಎರಡು ಘಟಕದ ಸೋಂಕಿತರಿಗೆ ಹಾಲು, ಮೊಟ್ಟೆ, ಬಾಳೆಹಣ್ಣು ಹಾಗೂ ತಾಜಾ ತರಕಾರಿಗಳನ್ನು ತಲುಪಿಸುವಂತೆ ಸ್ಥಳೀಯರಿಗೆ ಜವಾಬ್ದಾರಿ ನೀಡಿದರು.
ನಿಗಾಘಟಕದಲ್ಲೇ ತಯಾರಿಸಿದ ಆಹಾರ ಸೇವನೆ:
ಶಾಸಕ ಎಚ್ ಪಿ ಮಂಜುನಾಥ್ ಸೇರಿದಂತೆ ತಹಸಿಲ್ದಾರ್ ಬಸವರಾಜ್ ಇ.ಒ. ಗಿರೀಶ್ ತಾಲೂಕು ಆರೋಗ್ಯಾಧಿಕಾರಿ ಡಾ. ಕೀರ್ತಿಕುಮಾರ್ ಸೇರಿದಂತೆ ಇತರರು ಕೋವಿಡ್ ನಿಗಾ ಘಟಕ ಕೇಂದ್ರದಲ್ಲಿ ಸೋಂಕಿತರಿಗೆ ತಯಾರಿಸಿದ ಬಿಸಿಯೂಟವನ್ನು ಸೇವಿಸಿ ಆಹಾರ ಗುಣಮಟ್ಟವನ್ನು ಪರೀಕ್ಷಿಸಿದರು.