ಹೊಸದುರ್ಗ: ಶಾಸಕ ಗೂಳಿಹಟ್ಟಿ ಶೇಖರ್ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಕಂದಾಯ ಇಲಾಖೆ ಹಾಗೂ ಗ್ರಾಪಂ ಪಿಡಿಒಗಳ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಇಲಾಖೆಯ ಯೋಜನೆಗಳ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಯಾವುದೇ ಪ್ರಮಾದ ಆಗದಂತೆ ಕೆಲಸ ಮಾಡಲು ಅನುವು ಮಾಡಿಕೊಡಬೇಕು. ಕೆಳಹಂತದ ಅಧಿಕಾರಿಗಳು ನೀಡುವ ಪ್ರಾಥಮಿಕ ವರದಿ ನ್ಯಾಯಸಮ್ಮತವಾಗಿರಬೇಕು.ಇಲ್ಲದಿದ್ದಲ್ಲಿ ಮುಂದಾಗುವ ಅನಾಹುತಕ್ಕೆ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎನ್‌ಆರ್‌ಇಜಿ ಕಾಮಗಾರಿಗಳಲ್ಲಿ ಶೇ. 20 ರಿಂದ 25 ವರೆಗೂ ಪಿಡಿಒಗಳು ಕಮಿಷನ್ ಪಡೆಯುತ್ತಿದ್ದಾರೆ ಎಂಬ ಅರೋಪ ಕೇಳಿ ಬರುತ್ತಿದೆ. ಸರ್ಕಾರದಿಂದ ಸಂಬಳ ಕೊಡುವಾಗ ಕಮಿಷನ್ ಪಡೆಯುವ ಅಗತ್ಯವಾದರೂ ಏನು ಎಂದು ಖಾರವಾಗಿ ಪ್ರಶ್ನಿಸಿದ ಶಾಸಕರು, ಕಮಿಷನ್ ಪದ್ಧತಿ ಬಿಟ್ಟು ಗುಣಮಟ್ಟದ ಕಾಮಗಾರಿ ಮಾಡಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸದೆ ಕಾಲಮಿತಿಯೊಳಗೆ ಕೆಲಸ ಮಾಡಿಕೊಡಬೇಕು. ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವವರು ಯಾರಾದರೂ ಕಂಡು ಬಂದಲ್ಲಿ ಗಮನಕ್ಕೆ ತರಬೇಕು. ಸರ್ಕಾರದ ಆಶ್ರಯ ಮನೆ, ಶೌಚಾಲಯ ನಿರ್ಮಾಣ ಸೇರಿದಂತೆ ಕನಿಷ್ಠ ಕೆಲಸಗಳಿಗೆ ಸ್ಥಳೀಯ ಕೆರೆ ಕಟ್ಟೆಗಳಲ್ಲಿನ ಮರಳು ಬಳಕೆ ಮಾಡಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದಾರ್ ಎಂ.ಪಿ. ಕವಿರಾಜ್ ಮಾತನಾಡಿ, ಸಕಾಲದಲ್ಲಿ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಲಾಗುತ್ತಿದೆ. ಮಳೆಯಿಂದಾಗಿ ರೆಕಾರ್ಡ್ ರೂಂನ ಹಳೆಯ ಕಡತಗಳು ಹಾಳಾಗಿದ್ದು, ಅವುಗಳನ್ನು ಸರಿಪಡಿಸಲಾಗುತ್ತಿದೆ.
ಈಗಿನ ನ್ಯಾಯಾಲಯ ಹೊಸ ಕಟ್ಟಡಕ್ಕೆ ಸ್ಥಲಾಂತರವಾಗಲಿದ್ದು, ಹಳೆ ಕಟ್ಟಡವನ್ನು ತಾಲೂಕು ಕಚೇರಿ ಬಳಕೆಗೆ ಅನುವು ಮಾಡಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಮಹಂತೇಶ್, ತಾಪಂ ಅಧ್ಯಕ್ಷೆ ಪ್ರೇಮಾ ರವೀಂದ್ರ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪಿಡಿಒಗಳು ಹಾಜರಿದ್ದರು.