ಚಿತ್ರದುರ್ಗ: ಸದನದಲ್ಲಿ ಅಂಗಿ ಹರಿದುಕೊಂಡು ಸುದ್ದಿಯಾಗಿದ್ದ ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಭಾನುವಾರ ರಾತ್ರಿ ಪೊಲೀಸ್ ಠಾಣೆ ಎದುರಿನಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕ್ಷೇತ್ರದಲ್ಲಿನ ಮರಳು ದಂಧೆಗೆ ಪೊಲೀಸರು ಕಡಿವಾಣ ಹಾಕಿಲ್ಲ ಹಾಗೂ ಅಮಾಯಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿ ಶಾಸಕ ಗೂಳಿಹಟ್ಟಿ ಶೇಖರ್ ಪೊಲೀಸ್ ಠಾಣೆ ಎದುರಿನಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕಿನ ಮಾಡದಕೆರೆ ಹೋಬಳಿಯಲ್ಲಿ ಮರಳು ತುಂಬಿದ ಲಾರಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ಇದಕ್ಕೆ ಸಂಬಂಧಿಸಿ ಟ್ರಾಕ್ಟರ್ ಒಂದರ ಚಾಲಕ ಮತ್ತು ಮಾಲೀಕರ ಮೇಲೆ ಪ್ರಕರಣ ದಾಖಲಿಸಲು ಮುಂದಾಗಿದ್ದರು.
ವಿಷಯ ತಿಳಿದು ಪೊಲೀಸರಿಗೆ ಕರೆ ಮಾಡಿದ ಶಾಸಕ ಗೂಳಿಹಟ್ಟಿ, ದೇವಾಲಯ ನಿರ್ಮಾಣಕ್ಕೆ ಮರಳು ಕೊಂಡೊಯ್ಯುವವರ ಮೇಲೆ ಪ್ರಕರಣ ದಾಖಲಿಸಬೇಡಿ. ಅಕ್ರಮವಾಗಿ ಮರಳು ದಂಧೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದರು. ಇದಕ್ಕೆ ಪೊಲೀಸರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎನ್ನಲಾಗಿದೆ.
ಇದರಿಂದ ಬೇಸರಗೊಂಡ ಶಾಸಕರು, ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಮರಳು ಗಣಿಗಾರಿಕೆ ವಿಚಾರದಲ್ಲಿ ಅಮಾಯಕರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಕರೆ ಮಾಡಿ ಹೇಳಿದರೂ ಪೊಲೀಸರು ಕೇಳುತ್ತಿಲ್ಲ ಎಂದಾದರೆ ಶಾಸಕನಾಗಿ ನಾನಿದ್ದು ಪ್ರಯೋಜನವೇನು ಎಂದು ಏಕಾಏಕಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾದರು. ಅಲ್ಲಿದ್ದ ಬೆಂಬಲಿಗರು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಬೆಂಕಿ ಕಿಡಿ ಹೊತ್ತಿಸಿದ್ದು, ಅದು ಶಾಸಕರ ಮೈಗೆ ತಗಲುವ ಮುನ್ನವೇ ಆರಿಸಲಾಗಿದೆ. ಆದರೆ, ಶಾಸಕರ ಕಿವಿ, ಮೂಗು ಬಾಯಲ್ಲಿ ಪೆಟ್ರೋಲ್ ಹೋದ ಕಾರಣ ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.