ಹೊಸಪೇಟೆ: ಶಾಸಕರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಜೈಲು ಸೇರಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಷರತ್ತುಬದ್ಧ ಜಾಮೀನು ದೊರೆತ ನಂತರ ಶುಕ್ರವಾರ ಹೊಸಪೇಟೆಯ ತಮ್ಮ ನಿವಾಸಕ್ಕೆ ಆಗಮಿಸಿದರು. ನಂತರ ಕೊಪ್ಪಳ ಜಿಲ್ಲೆಯ ಹುಲಿಗಿ ಕ್ಷೇತ್ರಕ್ಕೆ ತೆರಳಿ ಹುಲಿ ಗೆಮ್ಮ ದೇವಿ ದರ್ಶನ ಪಡೆ ದು ವಿಶೇಷ ಪೂಜೆ ಸಲ್ಲಿಸಿದರು.
ಹೊಸಪೇಟೆಗೆ ಆಗಮಿಸಿದ ಅವರಿಗೆ ಬೆಂಬಲಿಗರು ಅದ್ಧೂರಿ ಸ್ವಾಗತ ನೀಡಿದರಲ್ಲದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಿವಾಸಕ್ಕೆ ಬಂದ ಶಾಸಕ ಗಣೇಶ್ ಕಂಪ್ಲಿ ಕ್ಷೇತ್ರದ ಮುಖಂಡರು, ವಾಲ್ಮೀಕಿ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಮೂರು ತಿಂಗಳು ನಾನು ಕ್ಷೇತ್ರದಲ್ಲಿರಲಿಲ್ಲ. ನ್ಯಾಯಾಲಯ ನೀಡುವ ತೀರ್ಪಿಗೆ ಬದ್ಧನಾಗಿದ್ದೇನೆ. ರೆಸಾರ್ಟ್‌ನಲ್ಲಿ ನಡೆದಿದ್ದು ಸಣ್ಣ ಘಟನೆ. ಇದು ಇಷ್ಟು ದೊಡ್ಡದಾಗಿದ್ದು ಈಗಲೂ ನನಗೆ ಅಚ್ಚರಿಯಾಗುತ್ತಿದೆ. ಈ ಘಟನೆ ಆಗಬಾರದಿತ್ತು. ಆದರೆ ಮನುಷ್ಯ ಅಂದ ಮೇಲೆ ಸರಿ, ತಪ್ಪು ಆಗುತ್ತೆ ಎಂದರು.
ಈಗಲೂ ಆನಂದ್ ಸಿಂಗ್ ನನಗೆ ಅಣ್ಣನೇ. ಕಳೆದ ಹದಿನೈದು ವರುಷದಿಂದಲೂ ನನ್ನ ಕಷ್ಟ-ಸುಖದ ಬಗ್ಗೆ ಅವರಿಗೆ ಎಲ್ಲ ಗೊತ್ತಿದೆ. ಅವರು ಬೇಡವೆಂದರೂ ನಾನು ಅವರ ತಮ್ಮನಾಗಿರುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲಾ ಒಳ್ಳೆಯದಾಗುತ್ತದೆಂಬ ವಿಶ್ವಾಸವಿದೆ ಎಂದರು.
ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡಲ್ಲ: ರಮೇಶ್ ಜಾರಕಿಹೊಳಿ ನಮ್ಮ ಸಮಾಜದ ಮುಖಂಡರು. ಅವರು ಜಾತಿ ಅಭಿಮಾನದ ಮೇಲೆ ನನಗೆ ಸಚಿವ ಸ್ಥಾನ ಸಿಗುತ್ತೆ ಎಂದು ಹೇಳಿರಬಹುದು ಅಷ್ಟೆ.
ಬಳ್ಳಾರಿ ಜಿಲ್ಲೆಯ ಶಾಸಕರಾದ ತುಕಾರಾಂ, ಸತೀಶ್, ನಾಗೇಂದ್ರ ನಾವೆಲ್ಲರೂ ಒಂದೇ ಕುಟುಂಬದವರಿದ್ದಂತೆ. ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ. ರಮೇಶ್ ಅಣ್ಣ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ. ಐದು ವರ್ಷ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.