Advertisement

ಶಾಸಕ ಗಣೇಶ್‌ ಮೊದಲು ಹಲ್ಲೆ ನಡೆಸಿಲ್ಲ

01:10 AM Jan 26, 2019 | Team Udayavani |

ಬೆಂಗಳೂರು: ವಿಜಯನಗರ ಶಾಸಕ ಆನಂದ್‌ ಸಿಂಗ್‌ ಮೇಲೆ ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ ನಡೆಸಿರುವ ಹಲ್ಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆನಂದ್‌ ಸಿಂಗ್‌ ಮೇಲೆ ಗಣೇಶ್‌ ಮೊದಲು ಹಲ್ಲೆ ಮಾಡಿಲ್ಲ ಎಂದು ಗಣೇಶ್‌ ಅವರ ಗನ್‌ ಮ್ಯಾನ್‌ ಶರಣಪ್ಪ ಹೇಳಿದ್ದಾರೆ.

Advertisement

ಈ ಪ್ರಕರಣದ ನಂತರ ನಾಪತ್ತೆಯಾಗಿದ್ದ ಜೆ.ಎನ್‌.ಗಣೇಶ್‌ ಅವರ ಖಾಸಗಿ ಅಂಗ ರಕ್ಷಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ರೆಸಾರ್ಟ್‌ನಲ್ಲಿ ನಡೆದ ಗಲಾಟೆಯಲ್ಲಿ ಗಣೇಶ್‌ ಅವರ ತಪ್ಪಿಲ್ಲ. ಆನಂದ್‌ ಸಿಂಗ್‌ ಅವರೇ ಮೊದಲು ಬೆಡ್‌ಲ್ಯಾಂಪ್‌ನಿಂದ ಗಣೇಶ್‌ ಮೇಲೆ ಹಲ್ಲೆ ನಡೆಸಿ, ಅವರ ಬಟ್ಟೆ ಹರಿದಿದ್ದಾರೆ ಎಂದು ಹೇಳಿದ್ದಾರೆ.

ಗನ್‌ಮ್ಯಾನ್‌ ಹೇಳಿದ್ದಿಷ್ಟು: “ಅಂದು ರಾತ್ರಿ ಆನಂದ್‌ ಸಿಂಗ್‌ ಅವರು ರೂಮಿನಲ್ಲಿಯೇ ಪಾರ್ಟಿ ಮಾಡುತ್ತಿದ್ದರು. ನಾನು ಆನಂದ್‌ ಸಿಂಗ್‌ ಅವರ ರೂಮಿನ ಪಕ್ಕದ ರೂಮಿನಲ್ಲಿದ್ದೆ. ಅವತ್ತು ಗಣೇಶ್‌ ಸೇರಿದಂತೆ ಎಲ್ಲರೂ ಮದ್ಯಪಾನ ಮಾಡಿದ್ದರು. ಪ್ರಾರಂಭದಲ್ಲಿ ಎಲ್ಲರೂ ಖಾಸಗಿಯಾಗಿ ಮಾತನಾಡುತ್ತಿದ್ದರು. ನಂತರ ಕ್ಷೇತ್ರದ ವಿಷಯಗಳು ಹಾಗೂ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಆನಂದ್‌ ಸಿಂಗ್‌ ಅವರು ಭೀಮಾ ನಾಯ್ಕ ಮೇಲೆ ಹೊಡೆಯಲು ಹೋದರು. ಇಬ್ಬರ ನಡುವೆ ಗಲಾಟೆ ಶುರುವಾಯಿತು. ಗಣೇಶ್‌ ಅವರನ್ನು ಬಿಡಿಸಲು ಹೋದರು. ತಾಳ್ಮೆ ಬೆಡ್‌ಲ್ಯಾಂಪ್‌ನಿಂದ ಗಣೇಶ್‌ ಮೇಲೆ ಹಲ್ಲೆ ಮಾಡಿದ್ದಾರೆ.’ “ಆ ವೇಳೆ ನಾನು ಅವರನ್ನು ತಡೆಯಲು ಹೋದಾಗ ನೀನು ಮೂಗು ತೂರಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದರು. ಗಣೇಶ್‌ ಅವರು ನನಗೆ ಗನ್‌ ನೀಡುವಂತೆ ಕೇಳಿಲ್ಲ. ಯಾವುದೇ ರೀತಿಯ ಒತ್ತಡವನ್ನೂ ಹಾಕಿಲ್ಲ. ನನ್ನ ಬಳಿ ಗನ್‌ ಇರಲಿಲ್ಲ. ಗಣೇಶ್‌ ಅವರು ನನ್ನ ಕೆನ್ನೆಗೆ ಕಚ್ಚಿದರು ಎನ್ನುವ ವಿಷಯವೂ ಸುಳ್ಳು. ಗಣೇಶ್‌ ಎಲ್ಲಿದ್ದಾರೆ ಎನ್ನುವುದೂ ಗೊತ್ತಿಲ್ಲ. ಈ ಪ್ರಕರಣದ ನಂತರ ನಾನೆಲ್ಲಿಯೂ ತಲೆ ಮರೆಸಿಕೊಂ ಡಿಲ್ಲ. ಪೊಲೀಸರ ತನಿಖೆಗೆ ನಾನು ಸಹಕರಿ ಸುತ್ತೇನೆ’ ಎಂದು ಶರಣಪ್ಪ ಹೇಳಿದ್ದಾರೆ.

ಬಂಧಿಸುವವರೆಗೂ ಆಸ್ಪತ್ರೆ ಬಿಡುವುದಿಲ್ಲ
ಗಣೇಶ್‌ ಅವರಿಂದ ಹಲ್ಲೆಗೊಳಗಾಗಿರುವ ವಿಜಯನಗರ ಶಾಸಕ ಆನಂದ್‌ ಸಿಂಗ್‌, ಗಣೇಶ್‌ ಅವರನ್ನು ಬಂಧಿಸುವವರೆಗೂ ಆಸ್ಪತ್ರೆಯಿಂದ ಬಿಡುಗಡೆಯಾಗುವುದಿಲ್ಲ ಎನ್ನುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮನ್ನು ಭೇಟಿ ಮಾಡಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಎದುರು ರೆಸಾರ್ಟ್‌ನಲ್ಲಿ ಆಗಿರುವ ಘಟನೆಯ ಬಗ್ಗೆ ವಿವರಿಸಿ, ಆಕ್ರೋಶ ಹಾಗೂ ಆತಂಕ ಎರಡನ್ನೂ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದ್ದು, ಕಣ್ಣು ಹಾಗೂ ಎದೆಗೆ ಹಲ್ಲೆ ಮಾಡಿರುವುದರಿಂದ, ಒಳಗಡೆ ಗಾಯವಾಗಿರುವುದರಿಂದ ಇನ್ನೂ ಕನಿಷ್ಠ ಹದಿನೈದು ದಿನ ವಿಶ್ರಾಂತಿಯ ಅಗತ್ಯವಿದೆ
ಎಂದು ತಿಳಿದು ಬಂದಿದೆ.

Advertisement

ಕಂಪ್ಲಿ ಶಾಸಕ ಗಣೇಶ್‌ ಅವರು ವಿಜಯನಗರ ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿದ ಘಟನೆಯಿಂದ ರಾಜಕಾರಣಿಗಳಿಗೆ ಇದ್ದ ಅಲ್ಪ ಸ್ವಲ್ಪ ಮರ್ಯಾದೆಯೂ ಹೋದಂತಾಗಿದೆ. ಹಲ್ಲೆ ನಡೆಸಿರುವ ವಿಚಾರದಲ್ಲಿ ಸರ್ಕಾರ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ.
● ಎಸ್‌.ಆರ್‌. ಶ್ರೀನಿವಾಸ್‌ , ಸಚಿವ

ಆನಂದ್‌ ಸಿಂಗ್‌ ಅವರ ಮೇಲೆ ಹಲ್ಲೆ ಮಾಡಿದ ಶಾಸಕ ಗಣೇಶ ಅವರನ್ನು ರಕ್ಷಿಸುವ ಕೆಲಸವನ್ನು ನಾವ್ಯಾರೂ ಮಾಡುತ್ತಿಲ್ಲ ರೆಸಾರ್ಟ್‌ನಲ್ಲಿ ಇಬ್ಬರು ಶಾಸಕರ ಮಧ್ಯೆ ಜಗಳವಾಗಿದ್ದು ನಿಜ. ಈ ಕುರಿತು ಈಗಾಗಲೇ ಪ್ರಕರಣ ದಾಖಲಾಗಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ .
● ಸಿದ್ದರಾಮಯ್ಯ, ಮಾಜಿ ಸಿಎಂ

ಬುದ್ಧಿವಾದ ಹೇಳಿದರೆ ಗಣೇಶ ಗುರಾಯಿಸಿದ

ಬಳ್ಳಾರಿ: “ಶಾಸಕರಾದ ಆನಂದ್‌ಸಿಂಗ್‌ ಹಾಗೂ ಜೆ.ಎನ್‌.ಗಣೇಶ್‌ ನಡುವಿನ ಗಲಾಟೆಗೆ ನಾನು ಸಾಕ್ಷಿ ಅಲ್ಲ. ರಾತ್ರಿ 10 ಗಂಟೆಗೆ ರೂಮ್‌ ನಲ್ಲಿ ಮಲಗಿದ್ದ ನಾನು, ಗಲಾಟೆಯ ಶಬ್ದ ಕೇಳಿ 4.30ಕ್ಕೆ ಎದ್ದು ಬಂದಿದ್ದೇನೆ’ ಎಂದು ಸಚಿವ ಈ.ತುಕಾರಾಂ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಿನ ಜಾವ ಎದ್ದಾಗ ಇಬ್ಬರೂ ಮಾತಿನ ಚಕಮಕಿ ಮಾಡಿಕೊಂಡಿದ್ದರು. ಆಗ ಶಾಸಕರಾದ ರಘುಮೂರ್ತಿ, ತನ್ವೀರ್‌ ಸೇs…, ರಾಮಪ್ಪ ನಿಂತಿದ್ದರು.ನಾನು ಹೋಗಿ ಏನಪ್ಪ (ಗಣೇಶ) ನೀನೊಬ್ಬ ಶಾಸಕ. ಜವಾಬ್ದಾರಿ ಸ್ಥಾನದಲ್ಲಿರುವಂತವರು. ಸ್ವಲ್ಪ ಹುಷಾರ್‌ ಆಗಿ ಇರಬೇಕು ಎಂದು ಬುದ್ಧಿವಾದ ಹೇಳಿದೆ. ಆಗ ಸಿಟ್ಟಿನಿಂದ ಇದ್ದ ಗಣೇಶ್‌ ನನ್ನನ್ನು ಗುರಾಯಿಸಿದ. ನಂತರ ಆನಂದ್‌ ಸಿಂಗ್‌ ಅವರನ್ನು ಆಸ್ಪತ್ರೆಗೆ ಕಳುಹಿಸಿದೆ ಎಂದರು.

ತನಿಖೆ ಆರಂಭಿಸದ ಸಮಿತಿ

ಬೆಂಗಳೂರು: ಶಾಸಕರ ಮಾರಾಮಾರಿ ಪ್ರಕರಣದ ತನಿಖೆಗೆ ನೇಮಿಸಿದ್ದ ಸಮಿತಿ ಇದುವರೆಗೂ ಕಾರ್ಯ ಆರಂಭಿಸಿಲ್ಲ. ಈ ಪ್ರಕರಣ ಕಾಂಗ್ರೆಸ್‌ಗೆ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಮುಜುಗರ ಉಂಟು ಮಾಡಿತ್ತು. ಮುಜುಗರದಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್‌ ತಕ್ಷಣವೇ ಶಾಸಕ ಗಣೇಶ್‌ ಅವರನ್ನು ಶಾಸಕಾಂಗ ಪಕ್ಷದಿಂದ ಅಮಾನತು ಮಾಡಿತ್ತು.ಅಲ್ಲದೇ ಈ ಪ್ರಕರಣದ ತನಿಖೆ ನಡೆಸಲು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ನೇತೃತ್ವದಲ್ಲಿ ಕೆ.ಜೆ.ಜಾರ್ಜ್‌ ಹಾಗೂ ಕೃಷ್ಣ ಬೈರೇಗೌಡ ಅವರನ್ನೊಳಗೊಂಡ ಮೂವರು ಸಚಿವರ ಸಮಿತಿ ರಚಿಸಲಾಗಿತ್ತು. ಪ್ರಕರಣ ನಡೆದು ವಾರ ಕಳೆದರೂ ಸಮಿತಿ, ಘಟನೆ ನಡೆದ ರೆಸಾರ್ಟ್‌ಗಾಗಲಿ, ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆಯುವ ಗೋಜಿಗೆ ಹೋಗಿಲ್ಲ. ಯಾವುದೇ ರೀತಿಯ ತನಿಖೆ ಆರಂಭಿಸದೆ ಇರುವುದು, ಗಣೇಶ್‌ ಅವರನ್ನು ರಕ್ಷಿಸಲು ಕಾಟಾಚಾರಕ್ಕೆ ಸಮಿತಿ ರಚಿಸಿ ಕೈ ತೊಳೆದುಕೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next