Advertisement

ಶಾಸಕ ಗಣೇಶ್‌ಗೆ 14 ದಿನ ನ್ಯಾಯಾಂಗ ಬಂಧನ ;ಕೈದಿ ನಂಬರ್‌ 1799

12:51 AM Feb 22, 2019 | Team Udayavani |

ರಾಮನಗರ: ವಿಜಯನಗರ ಶಾಸಕ ಆನಂದ್‌ ಸಿಂಗ್‌ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಜಿ.ಎನ್‌.ಗಣೇಶ್‌ ಅವರನ್ನು ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ವಿಚಾರಣೆಯನ್ನು ಮಾರ್ಚ್‌ 6ಕ್ಕೆ ಮುಂದೂಡಿದೆ.

Advertisement

ಜನವರಿ 19ರಂದು ಬಿಡದಿ ಬಳಿಯ ಈಗಲ್ಟನ್‌ ರೆಸಾರ್ಟ್ಸ್ನಲ್ಲಿ ಕಾಂಗ್ರೆಸ್‌ ಶಾಸಕರು ತಂಗಿದ್ದ ವೇಳೆ ಶಾಸಕ ಗಣೇಶ್‌ ಅವರು, ಶಾಸಕ ಆನಂದ್‌ ಸಿಂಗ್‌ ಅವರ ಮೇಲೆ ಹಲ್ಲೆ ನಡೆಸಿದ್ದರು. ತೀವ್ರ ಗಾಯಗಳಿಂದ ಆನಂದ್‌ ಸಿಂಗ್‌ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂಬಂಧ ಆನಂದ್‌ ಸಿಂಗ್‌ ಬಿಡದಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ತಲೆ ಮರೆಸಿಕೊಂಡಿದ್ದ ಗಣೇಶ್‌, ಬುಧವಾರವಷ್ಟೇ ಗುಜರಾತ್‌ನ ಸೋಮನಾಥದಲ್ಲಿ ಜಿಲ್ಲಾ ಪೊಲೀಸ್‌ ತಂಡಕ್ಕೆ ಸಿಕ್ಕಿ ಬಿದ್ದಿದ್ದರು. ಗುರುವಾರ ಬೆಳಗ್ಗೆ ಅವರನ್ನು ವಿಮಾನದ ಮೂಲಕ ಬೆಂಗಳೂರಿಗೆ ಕರೆ ತಂದ ಡಿಸಿಐಬಿ ಇನ್ಸ್‌ಪೆಕ್ಟರ್‌ ರಮೇಶ್‌ ಮತ್ತು ಎಸ್‌ಐ ಮಹದೇವಸ್ವಾಮಿ ನೇತೃತ್ವದ ತಂಡ, ಅಲ್ಲಿಂದ ರಸ್ತೆ ಮೂಲಕ ಬೆಳಗ್ಗೆ 10.55ರ ವೇಳೆಗೆ ಬಿಡದಿ ಪೊಲೀಸ್‌ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿತು.

ಸುಮಾರು ಎರಡೂವರೆ ಗಂಟೆಗಳ ಕಾಲ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಗಣೇಶ್‌ ಅವರು, ಜ.19ರ ರಾತ್ರಿಯ ಘಟನೆಯ ಬಗ್ಗೆ ಮಾಹಿತಿ ಕೊಟ್ಟರು ಎನ್ನಲಾಗಿದೆ. ಬಳಿಕ, ಮಧ್ಯಾಹ್ನ 1.45ರ ವೇಳೆಗೆ ಗಣೇಶ್‌ ಅವರನ್ನು ಬಿಗಿ ಭದ್ರತೆಯಲ್ಲಿ ರಾಮನಗರ ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಅವರ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯನರಸಿಂಹ ನೇತೃತ್ವದಲ್ಲಿ  ಫಿಜಿಷಿಯನ್‌ ಡಾ.ವೆಂಕಟೇಶ್‌ ಅವರು, ವೈದ್ಯಕೀಯ ತಪಾಸಣೆ ನಡೆಸಿ, ಶಾಸಕ ಗಣೇಶ್‌ ಆರೋಗ್ಯ ವಾಗಿದ್ದಾರೆಂದು ಪ್ರಮಾಣಪತ್ರ ನೀಡಿದರು.

ಬಳಿಕ, ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಅವರನ್ನು ಹಾಜರು ಪಡಿಸಲಾಯಿತು. ಇದೇ ವೇಳೆ, ಸ್ವತಃ ಗಣೇಶ್‌ ಅವರು, ತಮಗೆ ಹರ್ನಿಯಾ ಇದ್ದು ತುಂಬಾ ನೋವಾಗುತ್ತಿದೆ ಎಂದು ಹೇಳಿಕೊಂಡರು.

ಶಾಸಕರ ಪರ ವಾದ ಮಂಡಿಸಿದ ಎ.ಡೆರಿಕ್‌ ಅನಿಲ್‌, ತಮ್ಮ ಕಕ್ಷಿದಾರರಿಗೆ 2016ರಿಂದ ಉಸಿರಾಟದ ತೊಂದರೆಯಿದೆ ಎಂದು ಪೂರಕ ದಾಖಲೆಗಳನ್ನುಹಾಜರುಪಡಿಸಿದರು. ಗಣೇಶ್‌ ಅವರಿಗೆ ಚಿಕಿತ್ಸೆಯ ಅಗತ್ಯವಿದ್ದು, ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಅಂತಹ ಚಿಕಿತ್ಸೆ ಲಭ್ಯವಿರುವುದಿಲ್ಲ. ಅಲ್ಲದೆ, ಅವರು ಚುನಾಯಿತ ಪ್ರತಿನಿಧಿಯಾಗಿಯೇ ಮುಂದುವರಿದಿದ್ದು, ಜನರ ಭೇಟಿಗೆ ಅವಕಾಶ ಕಲ್ಪಿಸಿಕೊಡಬೇಕಿದೆ. ಹೀಗಾಗಿ, ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಅಥವಾಸೂಕ್ತ ಸ್ಥಳದಲ್ಲಿ ಅವರನ್ನು ಇರಿಸುವಂತೆ ಮನವಿ ಮಾಡಿದರು. ಸರ್ಕಾರದ ಪರ ಆರ್‌.ನಾಗರತ್ನ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಅನಿತಾ ಅವರು, ಶಾಸಕರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿ, ಪ್ರಕರಣವನ್ನು ಮಾರ್ಚ್‌ 6ಕ್ಕೆ ಮುಂದೂಡಿದರು. ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು

Advertisement

ಕೈದಿ ನಂಬರ್‌ 1799
ಬೆಂಗಳೂರು: ಶಾಸಕ ಗಣೇಶ್‌ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾದೀನ ಕೈದಿ ಯಾಗಿ ಗುರುವಾರ ಸೇರಿಕೊಂಡಿದ್ದಾರೆ. ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಜೈಲಿನಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಗಣೇಶ್‌ ಜೈಲು ಸೇರಿದರು. ಗಣೇಶ್‌ಗೆ ವಿಚಾರಣಾಧೀನ ಕೈದಿಯಾಗಿ 1799 ನಂಬರ್‌ ನೀಡಲಾಗಿದೆ. ಅವರನ್ನು ಹೈ ಸೆಕ್ಯೂರಿಟಿ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಬಿಳಿ ಶರ್ಟ್‌, ಜೀನ್ಸ್‌ ಧರಿಸಿ ಬಂದ ಶಾಸಕ

ಬಿಳಿ ಶರ್ಟ್‌, ನೀಲಿ ಜೀನ್ಸ್‌ ಪ್ಯಾಂಟ್‌ ಧರಿಸಿ ರಾಮನಗರ ಜಿಲ್ಲಾ ನ್ಯಾಯಾಲಯ ಸಂಕೀರ್ಣ  ದಲ್ಲಿರುವ ಪ್ರಿನ್ಸಿಪಲ್‌ ಸೀನಿಯರ್‌ ಜ್ಯೂಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಮತ್ತು ಸಿಜೆಎಂ ನ್ಯಾಯಾಲದೊಳಕ್ಕೆ ಬಂದ ಗಣೇಶ್‌ಗೆ, ಪೊಲೀಸರು ಕಟಕಟೆಯಲ್ಲಿ ನಿಲ್ಲುವಂತೆ ಸೂಚಿಸಿದರು. ಚಪ್ಪಲಿ ಕಳಚಿ ಕಟಕಟೆಯಲ್ಲಿ ನಿಂತ ಅವರಿಗೆ ನ್ಯಾಯಾ ಧೀಶರಾದ ಅನಿತಾ ಅವರು ಮುಂದಕ್ಕೆ ಬರುವಂತೆ ಸೂಚನೆ ಕೊಟ್ಟರು. ನ್ಯಾಯಾಧೀಶರ ಸೂಚನೆ ಮೇರೆಗೆ ಎರಡೂ ಕೈ ಜೋಡಿಸಿ, ನಮಸ್ಕರಿಸುತ್ತಲೇ ನ್ಯಾಯಾಧೀಶರ ಮುಂದೆ ಬಂದು ನಿಂತರು.

ಶಾಸಕರಿಗೆ ಜಾಮೀನು ಕೋರಿ ಬೆಂಗಳೂರಿನ 82ನೇ ಸಿವಿಲ್‌ ನ್ಯಾಯಾಲಯದಲ್ಲಿ ನಮ್ಮಹಿರಿಯ ವಕೀಲ ಹನುಮಂತರಾಯ್ಯಪ್ಪ ಸಲ್ಲಿಸಲಿದ್ದಾ ರೆ. ಗಣೇಶ್‌ ಅವರ ಆರೋಗ್ಯ ಸಮಸ್ಯೆಗೆ ಸಿಜೆಎಂ ನ್ಯಾಯಾಲಯ ಸ್ಪಂದಿಸಿದೆ. ● ಎ.ಡೆರಿಕ್‌ ಅನಿಲ್‌, ಗಣೇಶ್‌ ಪರ ವಕೀಲ

Advertisement

Udayavani is now on Telegram. Click here to join our channel and stay updated with the latest news.

Next