ಸುರತ್ಕಲ್: ಎಂ ಆರ್ ಪಿ ಎಲ್ ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸ್ಥಳೀಯ ಯುವಕನೊಬ್ಬನ ಮೊಬೈಲ್ ಫೋನ್ ಅನ್ನು ಬಲವಂತವಾಗಿ ತೆಗೆದುಕೊಂಡು ಅದರಲ್ಲಿರುವ ಫೋಟೋಸ್, ದಾಖಲೆಗಳನ್ನು ತಡಕಾಡಿ ಆರು ಜನ ಅಧಿಕಾರಿಗಳು ತೀವ್ರತರ ತನಿಖೆ ಮಾಡಿ ಯುವಕನಿಗೆ ಮಾನಸಿಕ ದೌರ್ಜನ್ಯ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು,ಶಾಸಕ ಡಾ.ವೈ ಭರತ್ ಶೆಟ್ಟಿ ಅವರು ಶನಿವಾರ ಬೆಳಿಗ್ಗೆ ದಿಡೀರ್ ಭೇಟಿ ನೀಡಿ ಎಂ ಆರ್ ಪಿ ಎಲ್ ಅಧಿಕಾರಿಗಳನ್ನು ಕರೆಸಿ ಮಾಹಿತಿ ಪಡೆದರು. ಬೃಹತ್ ಕಂಪನಿಯೊಳಗೆ ಸ್ಥಳೀಯರಿಗೆ ದೌರ್ಜನ್ಯ ಆದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಸುರತ್ಕಲ್ ಸಿ ಐ ಚಂದ್ರಪ್ಪ ಅವರಿಗೆ ಶಾಸಕರು ಸೂಚಿಸಿದರು.
ಅಧಿಕಾರಿಗಳು ಪೊಲೀಸರ ಕೆಲಸ ಮಾಡಬಾರದು. ಮೊಬೈಲ್ ಕಸಿದು ಒಳಗಿನ ಮಾಹಿತಿ ಪರಿಶೀಲಿಸುವುದು ಉದ್ಯೋಗಿಯ ಖಾಸಗಿತನದ ಮೇಲೆ ಪ್ರಹಾರ ಮಾಡಿದಂತೆ. ಕೆಲಸದ ವೇಳೆಯಲ್ಲಿ ಉದ್ಯೋಗಿಗಳು ಮೊಬೈಲ್ ತೆಗೆದುಕೊಂಡು ಹೋಗಿದ್ದು ತಪ್ಪಾಗಿದ್ದಲ್ಲಿ ದಂಡ ಹಾಕುವುದನ್ನು ಬಿಟ್ಟು ಮೊಬೈಲ್ ಕಸಿದು ಅದರೊಳಗಿನ ಮಾಹಿತಿ ಪರಿಶೀಲಿಸುವುದು ತಪ್ಪು.ಇಲ್ಲಿ ಯಾವುದೋ ಬೇರೆ ವಿಷಯಗಳ ಬಗ್ಗೆ ಅಧಿಕಾರಿಗಳು ತನಿಖೆ ಮಾಡುವ ಪ್ರಯತ್ನ ಮಾಡುವುದು ಸರಿಯಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತ ಪಡಿಸಿದರು.
ಇದನ್ನೂ ಓದಿ: ವಿಜಯೇಂದ್ರ ಹೈಕಮಾಂಡ್ ಭೇಟಿ ಮಾಡಲು ಇಡಿ ತನಿಖೆ ಭಯ ಕಾರಣ: ಯತ್ನಾಳ್
ಸಭೆಯಲ್ಲಿ ಉಪಸ್ಥಿತರಿದ್ದ ಕಂಪೆನಿಯ ಉನ್ನತ ಅಧಿಕಾರಿಗಳಾದ ಬಿ ಎಚ್ ವಿ ಪ್ರಸಾದ್ ಹಾಗೂ ಕೃಷ್ಣ ಹೆಗ್ಡೆಯವರು ಇಂತಹ ಘಟನೆಗಳು ಮುಂದೆ ಆಗದಂತೆ ನೋಡಿಕೊಳ್ಳುವುದಾಗಿ ಹಾಗೂ ಆ ಯುವಕನೊಂದಿಗೆ ಅಸಭ್ಯವಾಗಿ ವರ್ತಿಸಿದ ಆರು ಜನ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಎಂ ಆರ್ ಪಿ ಎಲ್ ನಲ್ಲಿ ಕೆಲಸ ಮಾಡುವ ಸ್ಥಳೀಯರಿಗೆ ಅಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕರು ಪೊಲೀಸ್ ಸಬ್ ಇನ್ಸಪೆಕ್ಟರ್ ಚಂದ್ರಪ್ಪ ಅವರಿಗೆ ಶಾಸಕ ಡಾ.ಭರತ್ ಶೆಟ್ಟಿ ಸೂಚನೆ ನೀಡಿದರು.
ಡಾ.ಭರತ್ ಶೆಟ್ಟಿಯವರೊಂದಿಗೆ ಪಾಲಿಕೆ ಸ್ಥಾಯಿ ಸಮತಿ ಅಧ್ಯಕ್ಷ ಲೋಕೇಶ್ ಬೊಳ್ಳಾಜೆ ಉಪಸ್ಥಿತರಿದ್ದರು.