ಪಾಂಡವಪುರ: ಕ್ಷೇತ್ರದ ಜನರ ಋಣ ನನ್ನ ಮೇಲಿದ್ದು, ನಿರಂತರ ಸೇವೆ ಮಾಡುವ ಮೂಲಕ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಸಿ.ಎಸ್ .ಪುಟ್ಟರಾಜು ಹೇಳಿದರು.
ತಾಲೂಕಿನ ಚಿಕ್ಕಬ್ಯಾಡರಹಳ್ಳಿ ಸರ್ಕಲ್‌ನಲ್ಲಿ ನಡೆದ ಚಿಕ್ಕಾಡೆ ಜಿಪಂ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಕ್ಷೇತ್ರದಲ್ಲಿ 3 ಬಾರಿ ಶಾಸಕರಾಗಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ಕೆಲಸ ಮಾಡಿದ್ದೇನೆ. ಕ್ಷೇತ್ರದ ಜನರ ಸೇವೆಗಾಗಿ ನನ್ನ ಇಡೀ ಕುಟುಂಬವನ್ನು ಮುಡುಪಾಗಿಟ್ಟು, ನಾವು ದುಡಿದ ಹಣದಲ್ಲಿ ಶೇ.20ರಷ್ಟು ಮೀಸಲಿಟ್ಟು ಕ್ಷೇತ್ರದ ಜನರ ಸೇವೆ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನನ್ನ ಪ್ರಾಣ ಲೆಕ್ಕಿಸದೆ ಕೆಲಸ: ಕೊರೊನಾ ಸಂದ ರ್ಭದಲ್ಲಿ ಕ್ಷೇತ್ರದ ಜನರಿಗಾಗಿ ನನ್ನ ಪ್ರಾಣವನ್ನು ಲೆಕ್ಕಿಸದೆ ಕೆಲಸ ಮಾಡಿದ್ದೇನೆ. ಕೋವಿಡ್‌ನಿಂದ ಮೃತಪಟ್ಟವರನ್ನು ಖದ್ದು ಮುಂದೆ ನಿಂತು ಅವರ ಅಂತ್ಯಕ್ರಿಯೆ ಮಾಡಿಸಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಜನರಿಗೆ ಚಿಕಿತ್ಸೆ, ಔಷಧ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ ಎಂದರು.
ಸಚಿವನಾದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಎಲ್ಲಾ ಭಾಗಕ್ಕೂ ನೀರಾವರಿ ಸೌಲಭ್ಯ, ದುದ್ದ ಹೋಬಳಿಗೆ 188 ಕೋಟಿ ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ ಅನುಷ್ಠಾನದ ಮೂಲಕ ಆ ಭಾಗಕ್ಕೆ ನೀರಾವರಿ ಸೌಲಭ್ಯ, ಮೇಲುಕೋಟೆ, ಚಿನಕುರಳಿ ಭಾಗಕ್ಕೂ ಹಲವು ಏತನೀರಾವರಿ ಯೋಜನೆ ಅನುಷ್ಠಾನಗೊಳಿಸಿ, ಅನುಕೂಲ ಮಾಡಿಕೊಟ್ಟಿದ್ದೇನೆ ಎಂದು ತಿಳಿಸಿದರು. ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಕಾರ್ಯ ಕರ್ತರು ಬೆಳ್ಳಿ ಗದೆ ನೀಡಿ ಅಭಿನಂದಿಸಿದರು.
ಕಳೆದ ಗ್ರಾಪಂ, ಡೇರಿ, ವಿಎಸ್‌ಎಸ್‌ಎನ್‌ವಿ ಚುನಾವಣೆ ಯಲ್ಲಿ ಜಯಗಳಿಸಿದ ಹಾಗೂ ಪರಾಭವಗೊಂಡ ಎಲ್ಲಾ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು. ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಸಿ.ಪಿ. ಶಿವರಾಜು, ಚಿಕ್ಕಾಡೆ ಚೇತನ್ ತಿಮ್ಮೇಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ಸಿ.ಯಶ್ವಂತ್‌ಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಚಲುವರಾಜು, ಪುರಸಭೆ ಅಧ್ಯಕ್ಷೆ ಅರ್ಚನ ಚಂದ್ರು, ಉಪಾಧ್ಯಕ್ಷೆ ಶ್ವೇತ ಉಮೇಶ್, ವಿ.ಎಸ್ .ನಿಂಗೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎಸ್ .ವಿ.ಸ್ವಾಮೀಗೌಡ, ಮುಖಂಡರಾದ ಬೊಮ್ಮರಾಜು, ಆನಂದ್, ಚನ್ನೇಗೌಡ, ಸಿ.ಎನ್.ಚೇತನ್, ಪಾಂಡು, ಡೇರಿ ಮಾಜಿ ಅಧ್ಯಕ್ಷ ಸಿ.ಎನ್.ಚಂದನ್ ಸೇರಿದಂತೆ ಚಿಕ್ಕಾಡೆ ಜಿಪಂ ಕ್ಷೇತ್ರದ ಎಲ್ಲಾ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ಸೇವೆಗೆ ಅವಕಾಶ ನೀಡಿ : ಚಿಕ್ಕಾಡೆ ಜಿಪಂ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜನರು ಸೇರಿರುವುದನ್ನು ನೋಡಿದರೆ ಇದೊಂದು ವಿಜಯ ಸಂಕೇತವಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮಲ್ಲರ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಶಾಸಕ ಸಿ.ಎಸ್. ಪುಟ್ಟರಾಜು ಮನವಿ ಮಾಡಿದರು.