ಹೊಳಲ್ಕೆರೆ: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಬಿಟ್ಟು ಹೋಗಿದ್ದ ಹೊಳಲ್ಕೆರೆ ತಾಲೂಕನ್ನು ಕಳೆದ ಬಿಜೆಪಿ ಸರ್ಕಾರದ ಅವ ಧಿಯಲ್ಲಿ ಸೇರಿಸಿ ಬಜೆಟ್ ನಲ್ಲಿ 500 ಕೋಟಿ ರೂ. ಅನುದಾನಕ್ಕೆ ಅನುಮೋದನೆ ಕೊಡಿಸಿದ್ದು ನಾನು. ಇದಕ್ಕೆ ಅನುಮೋದನೆ ಅನುಮೋದನೆ ದೊರೆಯದೆ ಕೆಲಸ ನಡೆಯಲು ಸಾಧ್ಯವೇ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಎಂ. ಚಂದ್ರಪ್ಪ ಪ್ರಶ್ನಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಸ್ಥಾನದ ಅವಧಿ ಆರು ತಿಂಗಳು ಇದ್ದರೂ ಅದಕ್ಕೂ ಮುನ್ನವೇ ರಾಜೀನಾಮೆ ನೀಡಿದ್ದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತಾಲೂಕನ್ನು ತಾವು ಸೇರ್ಪಡೆ ಮಾಡಿದ್ದಾಗಿ ಮಾಜಿ ಸಚಿವರು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂಟು ಟೀಕಿಸಿದರು. ಭದ್ರಾ ಮೇಲ್ದಂಡೆ ಯೋಜನೆ ನಮ್ಮ ಪಕ್ಷ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ಷೇತ್ರದ ಜನತೆಗೆ ನೀಡಿದ ಕೊಡುಗೆ ಎಂದರು.
ಮಾಚಿ ಸಚಿವ ಎಚ್. ಆಂಜನೇಯ 84 ಕೊಳವೆಬಾವಿಗಳನ್ನು ರೈತರಲ್ಲದ, ಪಹಣಿ ಮತ್ತು ಜಮೀನು ಇಲ್ಲದ ವ್ಯಕ್ತಿಗಳಿಗೆ ಹಾಕಿಸಿಕೊಟ್ಟಿದ್ದಾರೆ. ಸತತ ಬರಗಾಲದಿಂದ ಕುಡಿಯುವ ನೀರಿಲ್ಲದೆ ತತ್ತರಿಸುತ್ತಿದ್ದ ಸಮಯದಲ್ಲಿ ಕೊಳವೆಬಾವಿಗಳಲ್ಲಿ ಹನಿ ನೀರು ಕೂಡ ಬರುತ್ತಿರಲಿಲ್ಲ. ಆದರೆ ಮಾಚಿ ಸಚಿವರು ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿದ ಮೂರು ಸಾವಿರ ಕೊಳವೆಬಾವಿಗಳಲ್ಲಿ ನೀರು ಬಂದಿದೆ ಎನ್ನುವ ವರದಿ ಸೃಷ್ಟಿಸಿದ್ದಾರೆ. ಒಂದೇ ಒಂದು ಕೊಳವೆಬಾವಿ ನೀರಿಲ್ಲದೆ ಫೇಲ್ ಆಗಿಲ್ಲ ಎನ್ನುವ ಸುಳ್ಳು ಲೆಕ್ಕ ತೋರಿಸಿ ಅವ್ಯವಹಾರ ನಡೆಸಿದ್ದಾರೆ ಎದು ಆರೋಪಿಸಿದರು.
ಮೋಟಾರ್, ಪೈಪ್ ಪೂರೈಕೆ ಮಾಡಲು ಚಂದ್ರಪ್ಪ ಅಡ್ಡಿಯಾಗಿದ್ದಾರೆಂದು ಅಪಪ್ರಚಾರ ಮಾಡುವ ಅವರಿಗೆ, ಕಡಿಮೆ ದರಕ್ಕೆ ಟೆಂಡರ್ ನಮೂದಿಸಿರುವ ಎಲ್-1 ಗುತ್ತಿಗೆದಾರ ನ್ಯಾಯಾಲಯದಿಂದ ಸ್ಟೇ ತಂದಿದ್ದಾನೆ ಎನ್ನುವ ಅರಿವಿಲ್ಲ. ಸ್ಟೇ ಇಲ್ಲದ ರೈತರಿಗೆ ವಿದ್ಯುತ್ ಪರಿವರ್ತಕವನ್ನು ಈಗಾಗಲೇ ಅಳವಡಿಸಲಾಗಿದೆ. ಮೊದಲು ಏನೆಲ್ಲ ಅವ್ಯವಹಾರ ನಡೆದಿದ್ದರೂ ರೈತರಿಗೆ ಅನ್ಯಾಯ ಆಗಬಾರದು ಎಂದು ಮೋಟಾರ್, ಪೈಪ್‌ಗ್ಳನ್ನು ರೈತರಿಗೆ ವಿತರಣೆ ಮಾಡಬೇಕೆಂದು ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಿ ಪ್ರಯತ್ನ ಮಾಡಿದ್ದೇನೆ. ರಾಜಕೀಯಕ್ಕಾಗಿ ಸುಳ್ಳು ಆರೋಪ ಸರಿಯಲ್ಲ ಎಂದು ತಾಕೀತು ಮಾಡಿದರು. ಸಮಾಜಕಲ್ಯಾಣ ಇಲಾಖೆ ಮಂತ್ರಿಯಾಗಿದ್ದ ಎಚ್. ಆಂಜನೇಯ ಒಂದಿಷ್ಟು ಸೌಲಭ್ಯಗಳನ್ನು ಕಲ್ಪಿಸಿದ್ದನ್ನು ಹೊರತುಪಡಿಸಿದರೆ ಕ್ಷೇತ್ರದ ಜನತೆಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ. ಮಂತ್ರಿಯಾಗಿ ನಾಲ್ಕು ಹಾಸ್ಟೆಲ್ ಕಟ್ಟಿದ್ದೇ ಸಾಧನೆಯೇ, ಒಬ್ಬ ಶಾಸಕನಾಗಿ ಆ ಹಾಸ್ಟೆಲ್‌ಗಳನ್ನು ಮೊದಲೇ ನಾನು ಕಟ್ಟಿಸಿದ್ದೆ. ಎಸ್‌ಟಿ ವರ್ಗಕ್ಕೆ 223, ಎಸ್‌ಟಿ ವರ್ಗಕ್ಕೆ 160, ಒಬಿಸಿಗೆ 60, ಮುಸ್ಲಿಂ ಸಮುದಾಯದವರಿಗೆ 10 ಕೊಳವೆಬಾವಿ ಸೌಲಭ್ಯ ಕಲ್ಪಿಸಿದ್ದೇನೆ ಎಂದು ತಿಳಿಸಿದರು.
ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದೇಶ್, ಜಿಪಂ ಸದಸ್ಯರಾದ ಎಂ.ಬಿ. ತಿಪ್ಪೇಸ್ವಾಮಿ, ಮಹೇಶ್ವರಪ್ಪ, ಸುಮಾ ಲಿಂಗರಾಜ್, ಪಪಂ ಅಧ್ಯಕ್ಷ ಆರ್.ಎ. ಅಶೋಕ್, ಉಪಾಧ್ಯಕ್ಷ ಕೆ.ಸಿ. ರಮೇಶ್, ಸದಸ್ಯ ಪಿ.ಆರ್. ಮಲ್ಲಿಕಾರ್ಜುನಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರಪ್ಪ ಇದ್ದರು.