Advertisement
ಸಕಲೇಶಪುರ: ಮೂರು ತಾಲೂಕುಗಳನ್ನು ಒಳಗೊಂಡ ಸಕಲೇಶಪುರ ಮೀಸಲು ವಿಧಾಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯ ಸಿಮೆಂಟ್ ಮಂಜು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಕಲೇಶಪುರ, ಆಲೂರು ತಾಲೂಕುಗಳ ಜೊತೆಗೆ ಹಾಸನ ತಾಲೂಕಿನ ಕಟ್ಟಾಯ ಹೋಬಳಿಯು ಒಳಗೊಂಡ ಬಹು ವಿಸ್ತೀರ್ಣದ ಕ್ಷೇತ್ರದಲ್ಲಿ ವಿರೋಧ ಪಕ್ಷದ ಶಾಸಕ ಮಂಜು ಅವರಿಗೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನಗಳ ಬಹುದೊಡ್ಡ ಸವಾಲು ಇದೆ.
Related Articles
Advertisement
ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಿಮ್ಮ ಪರಿಕಲ್ಪನೆ ಏನು?
ಮಲೆನಾಡಿನ ಪ್ರದೇಶ, ಹೇಮಾವತಿ, ಯಗಚಿ ಮತ್ತು ವಾಟೆಹೊಳೆ ನದಿ ಹರಿಯುತ್ತಿದ್ದರೂ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಶುದ್ಧ ಕುಡಿಯುವ ನೀರಿನ ಸೌಲಭ್ಯ ಇನ್ನೂ ಇಲ್ಲ. ಸಕಲೇಶಪುರಕ್ಕೆ ಹೇಮಾವತಿ ನದಿಯಿಂದ, ಆಲೂರು ಪಟ್ಟಣಕ್ಕೆ ಯಗಚಿ ನದಿ ಮತ್ತು ವಾಟೆಹೊಳೆ ಜಲಾಶಯದಿಂದ ನದಿಯಿಂದ ಶುದ್ಧ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬಹುದು. ಕಟ್ಟಾಯ ಹೋಬಳಿಯಲ್ಲಿಯೇ ಹೇಮಾವತಿ ಜಲಾಶಯ ವಿದ್ದರೂ ಆ ಭಾಗಕ್ಕೆ ಹೇಮಾವತಿ ನೀರು ಕುಡಿಯಲು ಪೂರೈಕೆಯಾಗುತ್ತಿಲ್ಲ. ಜೆಜೆಎಂ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗಳು ನಡೆಯುತ್ತಿವೆ. ತ್ವರಿತವಾಗಿ ಪೂರ್ಣಗೊಳಿಸಲು ಪ್ರಯತ್ನಿಸುವೆ.
ಮಲೆನಾಡು ಭಾಗದಲ್ಲಿ ಸಮರ್ಪಕ ರಸ್ತೆ ಸೌಲಭ್ಯದ ಬಗ್ಗೆ ಚಿಂತನೆ ಏನು?
ಎತ್ತಿನಹೊಳೆ ಯೋಜನೆಯಡಿ ಕೆಲವೆಡೆ ರಸ್ತೆಗಳು ನಿರ್ಮಾಣವಾಗಿವೆ, ಸಕಲೇಶಪುರ ತಾಲೂಕಿನಲ್ಲಿ ಇನ್ನೂ ರಸ್ತೆಗಳ ಅಭಿವೃದ್ಧಿ ಆಗಬೇಕು. ಎತ್ತಿನಹೊಳೆ ಯೋಜನೆಯಡಿ 12 ಕೋಟಿ ರೂ.ಗಳ ಅನುದಾನ ಲಭ್ಯವಾಗುತ್ತಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ಶೀಘ್ರದಲ್ಲಿ ಆರಂಭಿಸಲಾಗುವುದು.
ಸಕಲೇಶಪುರ-ಆಲೂರು ಪಟ್ಟಣಗಳ ಕುರಿತು ತಮ್ಮ ಕಲ್ಪನೆ ಏನು?
ಸಕಲೇಶಪುರ ಪಟ್ಟಣದ ಮುಖ್ಯವಾದ ಬಿ.ಎಂ.ರಸ್ತೆ ಅತ್ಯಂತ ಕಿರಿದಾಗಿದ್ದು, ಅದರ ಅಗಲೀಕರಣ ನನ್ನ ಕನಸಾಗಿದೆ. ಪಟ್ಟಣದ ಪಾದಾಚಾರಿ ಜಾಗಗಳನ್ನು ಬೀದಿ ಬದಿ ವ್ಯಾಪಾರಿಗಳು ಒತ್ತುವರಿ ಮಾಡಿದ್ದಾರೆ. ರಸ್ತೆ ಬದಿ ಟಾರ್ಪಲ್ ಹಾಕಿದ ಗೂಡಂಗಡಿಗಳು ಕಾಣುತ್ತವೆ. ಟಾರ್ಪ್‌ಲ್ ಮುಕ್ತ ಪಟ್ಟಣ ಮಾಡುವುದು ನನ್ನ ಆದ್ಯತೆೆ.
ಎರಡು ಪಟ್ಟಣಗಳಿಗೆ ಮೂಲ ಸೌಕರ್ಯಕ್ಕೆ ನಿಮ್ಮ ಚಿಂತನೆ ಏನು ?
ಸಕಲೇಶಪುರ ಮತ್ತು ಆಲೂರು ಪಟ್ಟಣದಲ್ಲಿ ಯುಜಿಡಿ ವ್ಯವಸ್ಥೆ, ಫುಡ್‌ಕೋರ್ಟ್, ಒಳಾಂಗಣ ಕ್ರೀಡಾಂಗಣ ನಿರ್ಮಾಣ ನನ್ನ ಕನಸಾಗಿದೆ. ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ಮತ್ತಷ್ಟು ಮೂಲ ಸೌಕರ್ಯಗಳನ್ನು ಒದಗಿಸುವುದು ನನ್ನ ಗುರಿ. ಈ ಎರಡು ಪಟ್ಟಣಗಳ ಸೌಂದಯಿìಕರಣಕ್ಕೆ ಪುರಸಭೆಗಳ ಸಹಕಾರ ಪಡೆದು ಉದ್ಯಾನವನಗಳ ನಿರ್ಮಾಣ ಸೇರಿದಂತೆ ಕೆಲವು ಯೋಜನೆಗಳ ಜಾರಿಯ ಕನಸಿದೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಏನು ಕ್ರಮ?
ಬೆಂಗಳೂರು-ಮಂಗಳೂರು ನಡುವಿನ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ. ಮಂಜ್ರಬಾದ್ ಕೋಟೆ, ಮೂಕನ ಮನೆ ಜಲಪಾತ, ಗವಿಬೆಟ್ಟ, ಮೂರುಕಣ್ಣು ಗುಡ್ಡ, ಪಟ್ಲ ಬೆಟ್ಟ, ಹೊಸಹಳ್ಳಿ ಗುಡ್ಡ, ಬೆಟ್ಟದ ಬೈರವೇಶ್ವರ ದೇವಸ್ಥಾನ ಸೇರಿದಂತೆ ಹಲವು ಪ್ರವಾಸಿ ಸ್ಥಳಗಳಿವೆ. ಆಲೂರು ತಾಲೂಕಿನಲ್ಲೂ ರಂಗನಾಥ ಬೆಟ್ಟ, ಪಾರ್ವತಮ್ಮ ಬೆಟ್ಟ ಸೇರಿದಂತೆ ಇನ್ನು ಹಲವು ಪ್ರವಾಸಿ ಸ್ಥಳಗಳಿವೆ. ಈ ಪ್ರದೇಶಗಳಿಗೆ ಸುಸಜ್ಜಿತ ರಸ್ತೆ ಸಂಪರ್ಕ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳುವೆ.
ಕ್ಷೇತ್ರದ ಜ್ವಲಂತ ಸಮಸ್ಯೆ ಕಾಡಾನೆಗಳ ಹಾವಳಿ ತಡೆಗೆ ನಿಮ್ಮ ಚಿಂತನೆ ಏನು ?
ಕಾಡಾನೆಗಳ ಹಾವಳಿ ದಶಕಗಳ ಸಮಸ್ಯೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲೇ ಬೇಕಾಗಿದೆ. ಆನೆಗಳು ಆಹಾರ, ನೀರು ಹರಸಿ ಹಿಡುವಳಿ ಪ್ರದೇಶಕ್ಕೆ ಬರದಂತೆ ಅರಣ್ಯ ದಲ್ಲಿಯೇ ಆನೆಗಳಿಗೆ ಆಹಾರಗಳನ್ನು ಬೆಳೆಸಿ, ನೀರಿ ಗಾಗಿ ಹೊಂಡಗಳನ್ನು ನಿರ್ಮಾಣ ಮಾಡಬೇಕು. ಇದಕ್ಕಾಗಿ ಅರಣ್ಯ ಇಲಾಖೆಯೊಂದಿಗೆ ಚರ್ಚೆ ನಡೆಸುವೆ. ಉಪಟಳ ನೀಡುವ ಆನೆಗಳನ್ನು ಹಿಡಿದು ಪಳಗಿಸುವ ಆನೆಧಾಮ ನಿರ್ಮಾಣ ಮಾಡಬೇಕು. ಈಗಾಗಲೇ ಆನೆಧಾಮ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಅದು ಪ್ರವಾಸಿ ತಾಣವಾಗಿಯೂ ರೂಪುಗೊಳ್ಳಬೇಕು ಎಂಬುದು ನನ್ನ ಕನಸು. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಗೆ ಸಲಹೆ ನೀಡುವೆ.
ಎತ್ತಿನಹೊಳೆ ಯೋಜನೆ ಕ್ಷೇತ್ರಕ್ಕೆ ಮಾರಕವಾಗಿದೆಯೇ?
ಎತ್ತಿನಹೊಳೆ ಯೋಜನೆಯಿಂದ ಸಕಲೇಶಪುರ ತಾಲೂಕಿನ ಪರಿಸರಕ್ಕೆ ಸಾಕಷ್ಟು ಹಾನಿಯಾಗಿದೆ. ಆದರೂ ಮಲೆನಾಡಿನ ಜನರು ಉದಾರಿಗಳು, ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ಬಯಲುಸೀಮೆ ಪ್ರದೇಶಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡುವ ಎತ್ತಿನಹೊಳೆ ಯೋಜನೆಗೆ ಅಡ್ಡಿಪಡಿಸಿಲ್ಲ. ಆದರೆ, ಎತ್ತಿನಹೊಳೆ ಯೋಜನೆ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ರಸ್ತೆಗಳಿಲ್ಲ, ಎತ್ತಿನಹೊಳೆ ಯೋಜನೆಯಿಂದ ಸಕಲೇಶಪುರ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಎತ್ತಿನಹೊಳೆ ಯೋಜನೆಯಡಿಯಲ್ಲಿ ಹಣ ಬಿಡುಗಡೆ ಮಾಡಬೇಕು. ಆ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರುವೆ.
ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುವ ಬಗ್ಗೆ ನಿಮ್ಮ ಕಲ್ಪನೆ ಏನು ?
ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕು ಎಂಬುದು ನನ್ನ ಮಹತ್ವಾಕಾಂಕ್ಷೆ. ಸಕಲೇಶಪುರ ತಾಲೂಕಿನಲ್ಲಿ ಈಗಾಗಲೇ ಸಾಕಷ್ಟು ರೆಸಾರ್ಟ್‌ಗಳಿವೆ. ನೂರಾರು ಪ್ರವಾಸಿಗರು ಬರುತ್ತಿದ್ದಾರೆ. ಆದರೆ, ಪ್ರವಾಸಿಗರಿಂದ ಪರಿಸರಕ್ಕೆ ಹಾನಿಯಾಗಬಾರದು. ಪ್ಲಾಸ್ಟಿಕ್ ಮುಕ್ತವಾದ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ನನ್ನ ಗುರಿ. ಪ್ರವಾಸಿಗರ ಆಕರ್ಷಣೆಗೆ ಆನೆಧಾಮ ನಿರ್ಮಾಣ, ಜಲ ಸಾಹಸ ಕ್ರೀಡೆ ವ್ಯವಸ್ಥೆ ಬಗ್ಗೆ ಚಿಂತನೆ ನಡೆಸಿದ್ದೇನೆ. ಈಗಾಗಲೇ ಆನೆಧಾಮ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಆದು ದುಬಾರೆ ಆನೆಧಾಮಕ್ಕಿಂತಲೂ ಪ್ರವಾಸಿಗರನ್ನು ಆಕರ್ಷಿಸುವಂತೆ ನಿರ್ಮಾಣವಾಗಬೇಕು. ಸಕಲೇಶಪುರ ತಾಲೂಕಿಗೆ ಬರುವ ಪ್ರವಾಸಿಗರು ಆನೆಧಾಮಕ್ಕೆ ಭೇಟಿ ಕೊಡುವಷ್ಟು ಆಕರ್ಷಣೀಯವಾಗಿರಬೇಕು ಎಂಬುದು ನನ್ನ ಕನಸು.
-ಸುಧೀರ್ ಎಸ್.ಎಲ್.