Advertisement

ಸಿದ್ದರಾಮಯ್ಯ ಮತ್ತೂಮ್ಮೆ ಸಿಎಂ ಆಗಬೇಕು

02:31 PM Jan 23, 2023 | Team Udayavani |

ಚಾಮರಾಜನಗರ: ಹಿಂದುಳಿದ ವರ್ಗಗಳ ಹರಿಕಾರ, ನನ್ನ ನೆಚ್ಚಿನ ನಾಯಕ ಸಿದ್ದರಾಮಯ್ಯ ಅವರು ಮತ್ತೂಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಬೇಕು. ಅವರು ರಾಜಕೀಯ ನಿವೃತ್ತಿ ಪಡೆದ ದಿನ ನಾನೂ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.

Advertisement

ನಗರದ ತಾಲೂಕು ಕುರುಬರ ಸಂಘದ ಆವರಣದಲ್ಲಿ ಕಾಳಿದಾಸ ನೂತನ ವಿದ್ಯಾರ್ಥಿ ನಿಲಯದ ನಾಲ್ಕು ಅಂತಸ್ತಿನ ಕಟ್ಟಡ ಹಾಗೂ ಕನಕ ವಾಣಿಜ್ಯ ಸಂಕೀರ್ಣದ ಮೊದಲ ಅಂತಸ್ತಿನ ಉದ್ಘಾಟನೆ ಹಾಗೂ ಚುನಾಯಿತ ಪ್ರತಿನಿಧಿಗಳು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ‌ಮಾತನಾಡಿದರು.

ಸಮುದಾಯ ಭವನ ನಿರ್ಮಾಣಕ್ಕೆ ಆದ್ಯತೆ: 2013 ರಲ್ಲಿ ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾಗಿ 5 ವರ್ಷಗಳ ಕಾಲ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹೆಚ್ಚಿನ ಒತ್ತು ನೀಡಿದರು.  ಅವರ ಅವಧಿಯಲ್ಲಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಹಿಂದುಳಿದ ವರ್ಗಗಳ ಸಮುದಾಯ ಭವನಗಳು ನಿರ್ಮಾಣಕ್ಕಾಗಿ ಹೆಚ್ಚಿನ ಅನುದಾನ ನೀಡಿದರು. ನನ್ನ ಕ್ಷೇತ್ರದಲ್ಲಿ ತಾಲೂಕು ಕುರುಬರ ಸಂಘದ ಸಮುದಾಯ ಭವನಕ್ಕೆ 1 ಕೋಟಿ ರೂ. ಉಪ್ಪಾರ ಸಮುದಾಯ ಭವನಕ್ಕೆ 2 ಕೋಟಿ ಅಲ್ಲದೆ ಗ್ರಾಮಾಂತರ ಪ್ರದೇಶದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಆದ್ಯತೆ ನೀಡಿದರು. ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ನೀಡಿದರು. ಅವರು ಮತ್ತೆ ಮುಖ್ಯಮಂತ್ರಿ ಆದರೆ ಸಾಮಾಜಿಕ ನ್ಯಾಯ ದೊರಕುತ್ತದೆ. ಅವರು ಮತ್ತೂಮ್ಮೆ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದರು. ಉಪ್ಪಾರ ಸಮುದಾಯದವನಾದ ನಾನು ಮೂರು ಸಲ ಶಾಸಕನಾಗಲು ಸಿದ್ದರಾಮಯ್ಯ ಅವರ ಕೊಡುಗೆ ಅಪಾರವಿದೆ. ತದನಂತರ ನಮ್ಮ ಹಕ್ಕುಗಳನ್ನು ರಕ್ಷಣೆ ಮಾಡುವಲ್ಲಿ ನಿರಂತರವಾಗಿದ್ದರು. ಅವರ ಜೊತೆಯಲ್ಲಿ ನಾನು ಬೆಳೆದೆ. ಅವರು ರಾಜಕೀಯ ನಿವೃತ್ತಿ ಹೊಂದಿದ ದಿನ ನಾನೂ ನಿವೃತ್ತನಾಗುತ್ತೇನೆ ಎಂದರು.

ಉಪ್ಪಾರ ಸಮಾಜವನ್ನು ಎಸ್‌ಟಿಗೆ ಸೇರಿಸಲು ಕುಲಶಾಸ್ತ್ರೀಯ ಆಧ್ಯಯನಕ್ಕೆ ಅವಕಾಶ ಮಾಡಿ ಕೊಟ್ಟಿದ್ದರು. ಈಗ ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡಿದೆ. ಅವರ ಅವಧಿಯಲ್ಲಿ ಪೂರ್ಣಗೊಂಡಿದ್ದರೆ ಕೇಂದ್ರ ಸರ್ಕಾರ ವರದಿ ಸಲ್ಲಿಸಿ ಎಸ್‌ ಟಿಗೆ ನಮ್ಮ ಸಮಾಜವನ್ನು ಸೇರ್ಪಡೆ ಮಾಡುತ್ತಿದ್ದರು. 2023 ರಲ್ಲಿ ಸಿದ್ದರಾಮಯ್ಯ ನವರು ಗೆದ್ದು ಮುಖ್ಯಮಂತ್ರಿಯಾಗಬೇಕು ಎಂದರು.

ಸಂಘದ ಅಭಿವೃದ್ಧಿ ಜೊತೆಗೆ ಮುಂದಿನ ದಿನಗಳಲ್ಲಿ ಸಿರಗಳ್ಳಿ ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಸೋಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಸಹಕಾರ ಬ್ಯಾಂಕ್‌ ಸ್ಥಾಪನೆ ಮಾಡಲಾಗುವುದು ಎಂದರು.

Advertisement

ಇದೇ ಸಂದರ್ಭದಲ್ಲಿ ಸಮುದಾಯದ ಗ್ರಾ.ಪಂ. ಸದಸ್ಯರಿಗೆ ಸನ್ಮಾನ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ, ಸನ್ಮಾನಿಸಲಾಯಿತು. ಸಂಘದ ಗೌರವ ಅಧ್ಯಕ್ಷ ಡಿ.ಸೋಮಣ್ಣೇಗೌಡ, ಕನಕ ನೌಕರರ ಸಂಘದ ಅಧ್ಯಕ್ಷ ನಿಂಗೇಗೌಡ, ಪ್ರಧಾನ ಕಾರ್ಯದರ್ಶಿ ಕೆ.ಪಿ.ನಾಗರಾಜು, ಖಜಾಂಚಿ ಕುದೇರು ಲಿಂಗಣ್ಣ ಸಹ ಕಾರ್ಯ ದರ್ಶಿ ಮಣಿಕಂಠ, ಸಂಘಟನಾ ಕಾರ್ಯದರ್ಶಿ ಶಂಕರ, ಮಾಜಿ ಅಧ್ಯಕ್ಷ ಎಸ್‌. ರಾಜಶೇಖರ ನಿರ್ದೇಶಕರಾದ ಕಾಳನಹುಂಡಿ ಬಸವರಾಜು, ಮಹದೇವಸ್ವಾಮಿ, ಮಾದಪ್ಪ, ಶಾರದಮ್ಮ, ಸೋಮಣ್ಣ, ಮಹದೇವಸ್ವಾಮಿ, ಮುಖಂಡ ರಾದ ಮಹೇಶ್‌, ಸ್ವಾಮಿ, ಮಾದಾಪುರ ರವಿ, ಶಿಕ್ಷಕ ಬಸವರಾಜು ಇತರರು ಹಾಜರಿದ್ದರು.

5 ವರ್ಷಗಳ ಶ್ರಮ ಸಾರ್ಥಕ: ಉಮೇಶ್‌ : ಉಪ್ಪಾರ ಸಂಘದ ಉಪಾಧ್ಯಕ್ಷ ಆರ್‌.ಉಮೇಶ್‌ ಮಾತನಾಡಿ, ನಿಮ್ಮೆಲ್ಲರ ಸಹಕಾರದಿಂದ ಕುರುಬರ ಸಂಘದಿಂದ ವಿದ್ಯಾರ್ಥಿ ನಿಲಯ, ಅಂಗಡಿ ಮಳಿಗೆ ಉದ್ಘಾಟನೆಯಾಗಿ, 5 ವರ್ಷಗಳ ಶ್ರಮ ಸಾರ್ಥಕಗೊಂಡಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಹಾಸ್ಟೆಲ್‌ ನಿರ್ಮಾಣಕ್ಕೆ 50 ಲಕ್ಷ ರೂ .ಮಂಜೂರು ಮಾಡಿದ್ದರು. ಕನಕ ಸಮುದಾಯ ಭವನಕ್ಕೆ 1 ಕೋಟಿ ರೂ.ನೀಡಿದ್ದರು. ಮತ್ತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರೆ ಭವನ ಉದ್ಘಾಟನೆ ಯಾಗುತ್ತದೆ. ಅದೇ ರೀತಿಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಗಳ ಸಚಿವರಾಗಿದ್ದಾಗ ಸಮುದಾಯಕ್ಕೆ 100 ಕೊಳವಿ ಬಾವಿ, ಅನೇಕ ಸವಲತ್ತುಗಳನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next