ಪಿರಿಯಾಪಟ್ಟಣ: ರೈತರು, ಹಿಂದುಳಿದವರು, ದೀನದಲಿತರು ಸೇರಿದಂತೆ ಎಲ್ಲಾ ವರ್ಗದ ಜನರ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕರೆ ಅದು ಎಲ್ಲಾ ವರ್ಗಕ್ಕೂ ಅಧಿಕಾರ ಸಿಕ್ಕಂತೆ ಎಂದು ಮಾಜಿ ಸಚಿವ ಹಾಗೂ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ತಾಲೂಕಿನ ಹೊನ್ನಾಪುರ ಗ್ರಾಮ ದಲ್ಲಿ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಚೈತನ್ಯ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಗತ್ಯ ಸಹಕಾರ: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಂತ್ಯದ ದಿನಗಳು ಆರಂಭವಾಗಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಾಗಿದ್ದಾಗ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ಕೋಟ್ಯಂತರ ರೂಪಾಯಿ ಮೀಸಲಿಟ್ಟು ಜಾತಿ ಸಮೀಕ್ಷೆ ನಡೆಸಿದರು.
ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಮತ್ತು ಈಗಿರುವ ಬಿಜೆಪಿ ಸರ್ಕಾರ ಈ ವರದಿಯನ್ನು ಸ್ವೀಕರಿಸಲಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಈ ವರದಿಯನ್ನು ಬಹಿರಂಗ ಪಡಿಸುವ ಮೂಲಕ ಎಲ್ಲಾ ವರ್ಗದವರಿಗೂ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಬಿಜೆಪಿ ಪೊಳ್ಳು ಭರವಸೆ: ಮಾಜಿ ಶಾಸಕ ಕೆ. ವೆಂಕಟೇಶ್ ಮಾತನಾಡಿ, ದೇಶದ ಅಭಿವೃದ್ಧಿ ಹಾಗೂ ಜನತೆ ಹಿತದೃಷ್ಟಿಯಿಂದ ಕಾಂಗ್ರೆಸ್ ಗೆಲುವು ಅನಿವಾರ್ಯ. ಬಿಜೆಪಿ ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿ ಜನರನ್ನು ಆರ್ಥಿಕವಾಗಿ ದಿವಾಳಿ ಮಾಡಿದೆ. ಬಿಜೆಪಿ ನೀಡಿದ ಪೂಳ್ಳು ಭರವಸೆ ನಂಬಿದ ಜನ ಇಂದು ಪಶ್ಚಾತ್ತಾಪ ಪಡುವಂತಾಗಿದೆ. 3-4 ಜಿಲ್ಲೆಗೆ ಸೀಮಿತವಾಗಿರುವ ಜೆಡಿಎಸ್ ಜನರ ಆಶೋತ್ತರಗಳಿಗೆ ಸ್ಪಂದಿಸದೆ ಟಿಕೆಟಿಗಾಗಿ ಮನೆಯಲ್ಲಿಯೇ ಕಿತ್ತಾಟ ಆರಂಭವಾಗಿದೆ. ತಾಲೂಕಿನಲ್ಲಿ ಶಾಸಕರು ಕಾಮಗಾರಿ ಹೆಸರಿನಲ್ಲಿ ಸರ್ಕಾರದ ಅನುದಾನ ಲೂಟಿ ಮಾಡುತ್ತಿದ್ದು ಇದನ್ನು ಪ್ರಶ್ನಿಸುವವರನ್ನು ಹೊಡೆಯಿರಿ, ಕಡಿಯಿರಿ ಎಂದು ಪ್ರಚೋದನಕಾರಿಯಾಗಿ ಬಾಯಿಗೆ ಬಂದಂತೆ ಬಯ್ಯುತ್ತಿದ್ದಾರೆ. ಹೀಗಾಗಿ ಹಿಂದುಳಿದವರ, ದೀನದಲಿತರ ಬಡವರ ಮತ್ತು ಕೂಲಿ ಕಾರ್ಮಿಕರ ಅಭಿವೃದ್ಧಿ ಬಗ್ಗೆ ಕಾಳಜಿಯುಳ್ಳ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ಸದಸ್ಯರಾದ ನಿತಿನ್ ವೆಂಕಟೇಶ್, ಅನಿಲ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಹಮತ್ ಜಾನ್ ಬಾಬು, ಡಿ.ಟಿ.ಸ್ವಾಮಿ, ತಾಪಂ ಮಾಜಿ ಸದಸ್ಯ ಈರಯ್ಯ. ಮುಖಂಡರಾದ ಎಚ್.ಡಿ.ಗಣೇಶ್, ಹೊಲದಪ್ಪ, ಬಿ.ವಿ.ಜವರೇಗೌಡ, ಕಲ್ಯಾಣಪ್ಪ, ಎಂ.ಬಿ.ಶಿವಕುಮಾರ್, ಬಿ.ಜೆ.ಬಸವರಾಜ್, ಮೋಹನ್ ಮಾಸ್ಟರ್, ಚನ್ನಕಲ್ ಶೇಖರ್, ಧನರಾಜ್, ಬೆಕ್ಕರೆ ನಂಜುಂಡಸ್ವಾಮಿ, ಶಿವು, ಕಣಗಾಲ್ ರಮೇಶ್ ಉಪಸ್ಥಿತರಿದ್ದರು.
ಈ ಹಿಂದಿನ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ : ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ತಂದಿದ್ದು ಕಾಂಗ್ರೆಸ್, ಸಣ್ಣ ಸಣ್ಣ ಸಮುದಾಯಗಳು ಇಂದು ತಾಪಂ, ಜಿಪಂ ಅಧ್ಯಕ್ಷರಾಗಿದ್ದಾರೆ ಎಂದರೆ ಇದಕ್ಕೆ ಕಾಂಗ್ರೆಸ್ ಕಾರಣ. ಇದರ ಫಲವಾಗಿ ನಾನೂ ವಿಧಾನಸಭೆ ಪ್ರವೇಶಿಸಲು ಸಾಧ್ಯವಾಯಿತು. ಕಾಂಗ್ರೆಸ್ ಸದಾ ನುಡಿದಂತೆ ನಡೆದಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯದ ಜನರಿಗೆ ಕೊಟ್ಟ ಮಾತಿನಿಂತೆ ಕೆಲಸ ಮಾಡಿದೆ. ಮುಂದೆಯೂ ಮಾಡುತ್ತೇವೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು. ತಾಲೂಕಿನಲ್ಲಿ ವೆಂಕಟೇಶ್ ಅವರು ನೀರಾವರಿ ಯೋಜನೆ ಸೇರಿ ಜನರ ಹಲವಾರು ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಮತ್ತೂಮ್ಮೆ ವೆಂಕಟೇಶ್ ಅವರನ್ನು ವಿಧಾನಸೌಧದ ಮೂರನೇ ಮಹಡಿಗೆ ಕಳುಹಿಸಬೇಕು ಎಂದು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಮನವಿ ಮಾಡಿದರು.