Advertisement
ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಮೂಲತಃ ಕೃಷಿಕರಾದ ಬಿ.ಎನ್.ರವಿಕುಮಾರ್, 2018 ರಲ್ಲಿ ಬಿ.ಫಾರಂ ಗೊಂದಲದಲ್ಲಿ ಸಿಲುಕಿ ಅಲ್ಪಮತಗಳ ಅಂತರದಿಂದ ಕಾಂಗ್ರೆಸ್ ವಿರುದ್ಧ ಸೋತವರು. ಆದರೆ 2023 ರ ಚುನಾವಣೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದಿಂದ ಶಾಸಕರಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.
Related Articles
Advertisement
ನಮ್ಮನ್ನು ಶಿಷ್ಟಾಚಾರಕ್ಕೆ ವಿಧಾನಸಭಾಧ್ಯಕ್ಷರು ಮಾತನಾಡಿಸುತ್ತಾರೆ. ಆದರೆ, ನಮ್ಮ ಕ್ಷೇತ್ರದ ಹಾಗೂ ಜನರ ಸಮಸ್ಯೆಗಳು ಬಗ್ಗೆ ಸದನದಲ್ಲಿ ಮಾತನಾಡಿದರೆ ಅವು ಸರ್ಕಾರದ ಗಮನಕ್ಕೆ ಹೋಗುವುದಿಲ್ಲ. ಇದು ನನಗೆ ಅಧಿವೇಶನದಲ್ಲಿ ಆದ ಮೊದಲ ಅನುಭವ.
ಕ್ಷೇತ್ರದದ ಅಭಿವೃದ್ಧಿಗೆ ನಿಮ್ಮ ನೀಲ ನಕ್ಷೆ ಏನು?
ಅಧಿಕಾರಕ್ಕೆ ಅಥವಾ ಹಣ ಮಾಡುವ ಆಸೆಯಿಂದ ನಾನು ರಾಜಕಾರಣಕ್ಕೆ ಬಂದಿಲ್ಲ. ಚುನಾವಣೆ ಪೂರ್ವದಲ್ಲಿ ನಾನು ಕೊಟ್ಟಿರುವ ಭರವಸೆಗಳನ್ನು ಮುಂದಿನ 5 ವರ್ಷದಲ್ಲಿ ಈಡೇರಿಸುವ ಸಂಕಲ್ಪ ತೊಟ್ಟಿದ್ದೇನೆ. ನಮ್ಮ ಕ್ಷೇತ್ರದಲ್ಲಿ ಸುಮಾರು ಶೇ.70 ರಷ್ಟು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳು ಇವೆ. ಇವರಿಗೆಲ್ಲಾ ಗುಣಮಟ್ಟದ ಶಿಕ್ಷಣ, ಆರೋಗ್ಯದ ಜೊತೆಗೆ 176 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕೆಲಸವನ್ನು ಆದ್ಯತೆ ಮೇರೆಗೆ ಕೈಗೊಳ್ಳಲಿದ್ದೇನೆ.
ಕ್ಷೇತ್ರದಲ್ಲಿ ನೀವು ಮಾಡಲೇಬೇಕೆಂದುಕೊಂಡಿರುವ ಕೆಲಸಗಳೇನು?
ಚುನಾವಣಾ ಪೂರ್ವದಲ್ಲಿ ಕುಮಾರಣ್ಣ ಸಿಎಂ ಆದರೆ ಕ್ಷೇತ್ರಕ್ಕೆ ಎಂಜನಿಯರಿಂಗ್ ಕಾಲೇಜ್ ತರುವ ಕನಸು ಇತ್ತು. ಸಾದಲಿ ಸುತ್ತಮತ್ತ ಸಾಕಷ್ಟು ಮಳೆ ನೀರು ವ್ಯರ್ಥವಾಗಿ ಆಂಧ್ರಕ್ಕೆ ಹರಿದು ಹೋಗುತ್ತದೆ. ಅಲ್ಲಿ ಒಂದು ಡ್ಯಾಂ ನಿರ್ಮಾಣ ಮಾಡಿ ತಾಲೂಕಿಗೆ ಉತ್ತಮ ಶುದ್ಧ ಕುಡಿಯುವ ನೀರು ಒದಗಿಸಬೇಕೆಂಬ ಕನಸು ಇತ್ತು. ಆದರೂ ಈ 5 ವರ್ಷದಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ಕ್ಷೇತ್ರದಲ್ಲಿ ಶಾಶ್ವತವಾಗಿ ಹೆಸರು ಉಳಿಯುವ ಕೆಲಸ ಮಾಡುವೆ.
ಕೈಗಾರಿಕೆಗಳ ಸ್ಥಾಪನೆಗೆ ನಿಮ್ಮ ಪ್ರಯತ್ನ ಏನು?
ನನ್ನ ಕ್ಷೇತ್ರದಲ್ಲಿ ಕೈಗಾರಿಕೆಗಳ ಕೊರತೆ ಇದೆ. ಸುಮಾರು 8 ರಿಂದ 9 ಸಾವಿರ ಜನ ಕೋಲಾರ, ಹೊಸಕೋಟೆ ಭಾಗದ ಕೈಗಾರಿಕೆಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಕ್ಷೇತ್ರದಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಸುವ ಪ್ರಮಾಣಿಕ ಪ್ರಯತ್ನ ಮಾಡುವೆ. ಈಗಾಗಲೇ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದಿದ್ದೇನೆ. ಮುಂದಿನ ವರ್ಷದಲ್ಲಿ ಸ್ಪಂದಿಸುವ ಭರವಸೆ ನೀಡಿದ್ದಾರೆ.
ಶಿಡ್ಲಘಟ್ಟ ಪಟ್ಟಣ ಅಭಿವೃದ್ಧಿಗೆ ನಿಮ್ಮ ಆದ್ಯತೆ ಏನು?
ಪಟ್ಟಣದಲ್ಲಿ 12,860 ಕುಟುಂಬಗಳು ಇವೆ. 6,100 ಖಾತೆಗಳು ಸಕ್ರಮವಾಗಿವೆ. ಉಳಿದ 6,800 ಖಾತೆಗಳು ಸಕ್ರಮ ಆಗಬೇಕಿದೆ. ಶಿಡ್ಲಘಟ್ಟ ಪಟ್ಟಣದಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಕುಡಿಯುವ ನೀರಿನ ಸಮಸ್ಯೆ ಬಹಳ ಇದೆ. 10, 15 ದಿನಕ್ಕೊಮ್ಮೆ ಕುಡಿಯುವ ನೀರು ಕೊಡಲಿಕ್ಕೆ ಆಗುತ್ತಿಲ್ಲ. ಸ್ವತ್ಛತೆ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದೇವೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಕಸವನ್ನು ಲೋಡಗಟ್ಟಲೇ ವಿಲೇವಾರಿ ಮಾಡಿದ್ದೇವೆ. ರಸ್ತೆ, ಒಳಚಂಡಿ, ಕುಡಿಯುವ ನೀರಿಗೆ ಆದ್ಯತೆ ನೀಡಿದ್ದೇವೆ. ಪಟ್ಟಣದಲ್ಲಿ 68 ಸಾವಿರ ಜನ ಸಂಖ್ಯೆಗೆ ಇದೆ. ಜನರ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಉದ್ಯಾನವನ ನಿರ್ಮಾಣಕ್ಕೆ ಗಮನ ಹರಿಸುತ್ತಿದ್ದೇವೆ.
ಕ್ಷೇತ್ರದಲ್ಲಿ ಜನಸ್ನೇಹಿ ಆಡಳಿತಕ್ಕೆ ನಿಮ್ಮ ಕ್ರಮಗಳೇನು?
ಸರ್ಕಾರದಿಂದ ಬರುವ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನ ಸಾಮಾನ್ಯರಿಗೆ, ಅರ್ಹರಿಗೆ ಸಿಗುವ ರೀತಿ ಮಾಡಬೇಕೆಂದು ಕೆಡಿಪಿ ಸಭೆ ಮೂಲಕ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕ್ಷೇತ್ರಕ್ಕೆ ಬರುವ ಅನುದಾನ ಯಾವುದೇ ರೀತಿ ದುರ್ಬಳಕೆ ಆಗದ ರೀತಿಯಲ್ಲಿ ಗುಣಮಟ್ಟದ ಕೆಲಸ ಕಾರ್ಯಗಳು ಆಗುವ ರೀತಿ ನಿಗಾ ವಹಿಸುತ್ತೇನೆ. ಕ್ಷೇತ್ರದಲ್ಲಿಯೆ ಸದಾ ಇದ್ದು ಜನರ ಕಷ್ಟಸುಖಗಳಲ್ಲಿ ಭಾಗಿಯಾಗುವೆ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಪಕ್ಷಾತೀತವಾಗಿ ಶ್ರಮಿಸಲಿದ್ದೇನೆ. ಕ್ಷೇತ್ರದಲ್ಲಿ ಶೇ.100 ರಷ್ಟು ನಮ್ಮ ಅಧಿಕಾರ ಅವಧಿಯಲ್ಲಿ ಹೆಸರು ಉಳಿಸುವ ಕೆಲಸ ಮಾಡಲಿದ್ದೇನೆ.
ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಬಗ್ಗೆ ನಿಮ್ಮ ಅಭಿಪ್ರಾಯ?
ಹಿಂದೆ ಘೋಷಿಸಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳಿಗೆ ಅನುದಾನ ಕೊಡುತ್ತಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತ ಪಕ್ಷದ ಸಚಿವರ ಹಾಗೂ ಶಾಸಕರ ನಡುವೆಯೆ ಹೊಂದಾಣಿಕೆ ಇಲ್ಲ. ಅಭಿವೃದ್ಧಿ ವಿಚಾರ ಲೋಕಸಭಾ ಚುನಾವಣೆ ಮುಗಿಯುವವರೆಗೂ ಸರಿ ದಾರಿಗೆ ಬರುವ ಲಕ್ಷಣ ಕಾಣುತ್ತಿಲ್ಲ.
ಜಿಪಂ, ತಾಪಂ ಹಾಗೂ ಲೋಕಸಭೆಗೆ ನಿಮ್ಮ ತಯಾರಿ ಏನು?
2003 ರಿಂದ ದೇವೇಗೌಡ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ರಾಜಕಾರಣ ಮಾಡುತ್ತಿದ್ದೇನೆ. ನಾನು ರಾಜಕಾರಣ ಮಾಡಬೇಕಾದರೆ ದೇವೇಗೌಡರೇ ಕಾರಣ. ನನ್ನ ಕ್ಷೇತ್ರದಲ್ಲಿ ಎಲ್ಲಾ ಜಿಪಂ, ತಾಪಂ ಸ್ಥಳೀಯ ಸಂಸ್ಥೆಗಳನ್ನು ಗಂಭೀರವಾಗಿ ಪರಿಗಣಿಸಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಲಿದ್ದೇವೆ. ಕ್ಷೇತ್ರದ 23 ಗ್ರಾಪಂಗಳಲ್ಲಿ ಜೆಡಿಎಸ್ ಬೆಂಬಲಿತ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಇದ್ದಾರೆ. ನಮ್ಮ ಜನಪರವಾದ ಆಡಳಿತ ನೋಡಿ ಕ್ಷೇತ್ರದ ಜನ ಕೂಡ ನಮ್ಮ ಕೈ ಹಿಡಿಯುತ್ತಾರೆ.
ಕಾಂಗ್ರೆಸ್ ಸರ್ಕಾರದ ಮೇಲೆಯು ವರ್ಗಾವಣೆ ದಂಧೆ, ಕಮೀಷನ್ ಆರೋಪ ಕೇಳಿ ಬರುತ್ತಿದೆ?
ಈ ಸಂದರ್ಭದಲ್ಲಿ ಪಕ್ಷಗಳ ವಿರುದ್ಧವಾಗಿ ಮಾತನಾಡಿದರೆ ಜನರಿಗೆ ಏನು ಅನುಕೂಲವಾಗುವುದಿಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಏನೇನು ನಡೆಯಿತು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ. ಈಗ ಏನು ನಡೆಯುತ್ತಿದೆ ಎಂಬುದನ್ನು ಜನ ಗಮನಿಸುತ್ತಿದ್ದಾರೆ. ಆದರೆ ನಮ್ಮ ಮುಂದಿರುವುದು ಅಭಿವೃದ್ಧಿ ಮಾತ್ರ.
ಹೈಟೆಕ್ ರೇಷ್ಮೆ ಮಾರುಕಟ್ಟೆ ಸ್ಥಾಪನೆ ಎಲ್ಲಿವರೆಗೂ ಬಂತು?
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬೊಮ್ಮಾಯಿ ಅವರು 75 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ಸ್ಥಾಪನೆ ಘೋಷಿಸಿದ್ದರು. ಅದನ್ನು ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ಮುಂದುವರೆಸಿದ್ದಾರೆ. ಹೈಟೆಕ್ ರೇಷ್ಮೆಗೂಡು ಶಿಡ್ಲಘಟ್ಟ ಪಟ್ಟಣದ ಅಕ್ಕಪಕ್ಕ ನಿರ್ಮಾಣ ಆಗಬೇಕಿದೆ. ಸ್ವಲ್ಪ ಜಾಗದ ಸಮಸ್ಯೆ ಇದೆ. ವರದನಾಯಕನಹಳ್ಳಿ ಸ.ನಂ. 10 ಹನುಮಂತಪುರ ಸ.ನಂ.19ರಲ್ಲಿ ಕಂದಾಯ ಇಲಾಖೆ ,ಡೀಸಿ ಸೇರಿ ಜಾಗ ಹುಡುಕಿದ್ದಾರೆ. ಶೀಘ್ರದಲ್ಲಿಯೆ ಸರ್ಕಾರದ ಗಮನಕ್ಕೆ ತಂದು 75 ಕೋಟಿ ರೂ. ವೆಚ್ಚದಲ್ಲಿ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಶೀಘ್ರ ಕ್ರಮ ವಹಿಸುತ್ತೇವೆ.
-ಕಾಗತಿ ನಾಗರಾಜಪ್ಪ