Advertisement
ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಮತ್ತು ಎಚ್. ಮರುಳಸಿದ್ದಪ್ಪ ಅವರು ರಾಬಕೊ ಹಾಲು ಒಕ್ಕೂಟದ ನಿರ್ದೇಶಕರಾಗಿರುವ ಪ್ರಕ್ರಿಯೆ ಸಮರ್ಪಕವಾಗಿ ಇಲ್ಲ ಎಂದು ಆಕ್ಷೇಪಿಸಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆ.ಪ್ರತಾಪರೆಡ್ಡಿ ಎನ್ನುವವರು ಕೆಲ ವರ್ಷಗಳ ಹಿಂದೆ ದೂರು ನೀಡಿದ್ದರು. ಇವರ ದೂರನ್ನು ಆಲಿಸಿ ವಿಚಾರಣೆ ನಡೆಸಿದ್ದ ಕಲಬುರಗಿ ಪ್ರಾಂತದ ರಾಯಚೂರು ಸಹಕಾರ ಸಂಘಗಳ ಜಂಟಿ ನಿಬಂಧಕ ಚವ್ಹಾಣ ಗೋಪಾಲ ಅವರು, ಈ ಇಬ್ಬರ ಸದಸ್ಯತ್ವವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದರು. ನಿಬಂಧಕರ ಆದೇಶವನ್ನು ಪ್ರಶ್ನಿಸಿದ್ದ ಶಾಸಕ ಭೀಮಾನಾಯ್ಕ ಅವರು, ವಿಚಾರಣೆ ವೇಳೆ ನನ್ನ ಅಭಿಪ್ರಾಯವೇ ಕೇಳದೇ ಆದೇಶ ಹೊರಡಿಸಲಾಗಿದೆ ಎಂದು ಆಕ್ಷೇಪಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಇವರ ಅರ್ಜಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್ ಸದಸ್ಯತ್ವ ರದ್ದುಗೊಳಿಸಿರುವ ಆದೇಶವನ್ನು ಮರು ಪರಿಶೀಲಿಸುವಂತೆ ಸೂಚನೆ ನೀಡಿತ್ತು. ಹೈಕೋರ್ಟ್ ಸೂಚನೆಯಂತೆ ಮತ್ತೂಮ್ಮೆ ಪರಿಶೀಲನೆ ನಡೆಸಿದ ಕಲಬುರಗಿ ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕ ಚವ್ಹಾಣ ಗೋಪಾಲ ಅವರು ಪುನಃ 2019, ಏ.3ರಂದು ನಡೆದ ಚುನಾವಣೆಯಲ್ಲಿ ಶಾಸಕ ಭೀಮಾನಾಯ್ಕ, ಎಚ್. ಮರುಳಸಿದ್ದಪ್ಪ ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.
Related Articles
Advertisement
ರಾಬಕೊ ಹಾಲು ಒಕ್ಕೂಟದ ಸದಸ್ಯತ್ವವನ್ನು ರದ್ದುಗೊಳಿಸಿರುವ ಪ್ರಾಂತ ಸಹಕಾರಿ ಸಂಘಗಳ ಜಂಟಿ ನಿಬಂಧಕರ ಆದೇಶಕ್ಕೆ ಸಂಬಂ ಧಿಸಿದಂತೆ ಪ್ರತಿಕ್ರಿಯಿಸಿರುವ ಭೀಮಾನಾಯ್ಕ ಅವರು, ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ ನೇಮಿರಾಜ ನಾಯ್ಕ, ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಸೋಮಶೇಖರ ರೆಡ್ಡಿ, ಕೆಎಂಎಫ್‌ನ ಕೆಲ ಅಧಿ ಕಾರಿಗಳು, ಕೆಲ ನಿರ್ದೇಶಕರು ಪಿತೂರಿ ಮಾಡಿ ನನ್ನನ್ನು ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ಒತ್ತಡಕ್ಕೆ ಸಿಲುಕಿದ ಸಹಕಾರಿ ಸಂಘಗಳ ನಿಬಂಧಕರು ಬಿಜೆಪಿ ಪರ ಕೆಲಸ ಮಾಡಿದ್ದಾರೆ. ರಾಬಕೊ ಚುನಾವಣೆ ವೇಳೆ ಬಿಜೆಪಿಗರು ಚುನಾವಣೆ ಮುಂದೂಡಿಸಲು ಯತ್ನಿಸಿದ್ದರು. ಆಗ ಧಾರವಾಡ ಮತ್ತು ಕಲಬುರಗಿ ನ್ಯಾಯಾಲಯಗಳ ನಿರ್ದೇಶನದಂತೆ ಚುನಾವಣೆ ನಡೆಸಲಾಗಿತ್ತು. ಈ ಚುನಾವಣೆಯಲ್ಲಿ ನಾನು ಗೆದ್ದಿದ್ದೇನೆ. ಅಲ್ಲಿಗೆ ನನ್ನ ಆಯ್ಕೆ ಸಂಪೂರ್ಣ ನ್ಯಾಯಸಮ್ಮತ. ಆದರೂ ನನ್ನ ಆಯ್ಕೆ ಪ್ರಶ್ನಿಸಿರುವುದು ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಉತ್ತಮ ಉದಾಹರಣೆ ಎಂದರು.
ನಾನು ಹಾಲು ಉತ್ಪಾದಕ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಹಿಂದೆ ಸೋಮಶೇಖರ ರೆಡ್ಡಿ ಕೆಎಂಎಫ್ ಅಧ್ಯಕ್ಷ ಆಗಿದ್ದರು. ಅವರು ಎಂದು ಹಾಲು ಉತ್ಪಾದಕರಾಗಿದ್ದರು ಎಂಬುದನ್ನು ತಿಳಿಸಿರಲಿಲ್ಲ. ಆಗ ಎಲ್ಲವೂ ನಡೆಯಿತು. ನಾನೀಗ ನಿಜವಾಗಿಯೂ ಹಾಲು ಉತ್ಪಾದಕ. ಹಾಗಿದ್ದರೂ ನನ್ನ ಮೇಲೆ ಇಲ್ಲ ಸಲ್ಲದ ಪಿತೂರಿ ಮಾಡಿ ನನ್ನನ್ನು ಅನರ್ಹಗೊಳಿಸಿದ್ದಾರೆ ಎಂದು ಅವರು ಕಿಡಿಕಾರಿದರು. ನಾನು ಖಂಡಿತಾ ಮತ್ತೆ ಹೈಕೋರ್ಟ್‌ಗೆ ಹೋಗಲಿದ್ದೇನೆ. ಹೈಕೋರ್ಟ್‌ನಲ್ಲಿ ನನಗೆ ನ್ಯಾಯ ಸಿಗಲಿದೆ ಎಂಬ ನಂಬಿಕೆ ಇದೆ ಎಂದ ಅವರು ಮುಂದೆ ನಮ್ಮ ಸರ್ಕಾರ ಅಧಿ ಕಾರಕ್ಕೆ ಬಂದ ಮೇಲೆ ಬಿಜೆಪಿಗರ ಬಣ್ಣ ಬಯಲು ಮಾಡಲಿದ್ದೇನೆ ಎಂದರು.