ವಿಜಯಪುರ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣದ ಹಿಂದೆ ಬಿಜೆಪಿ, ಕಾಂಗ್ರೆಸ್ ನಾಯಕರೇ ಇದ್ದಾರೆ ಎಂಬುದು ಇದೀಗ ಸ್ಪಷ್ಟವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೆಸರು ಮಾತ್ರ ಹೊರ ಬಂದಿದ್ದು, ಒಳ ಒಪ್ಪಂದದ ಕಾರಣ ಇನ್ನೊಬ್ಬ ಸೂತ್ರಧಾರನಾದ ಸಿಎಂ ಪುತ್ರನ ಹೆಸರು ಹೊರ ಬಂದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ಹಾಗೂ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಎಲ್ಲರೂ ಇಡೀ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. ಇದೇ ಕಾರಣಕ್ಕೆ ಶಿವಕುಮಾರ ಮೇಲೆ ಮುಖ್ಯಮಂತ್ರಿ ಮೃದು ಧೋರಣೆ ಹೊಂದಿದ್ದಾರೆ. ರಾಷ್ಟ್ರೀಯ ಪಕ್ಷದ ನಾಯಕರೇ ಒಬ್ಬರು ನನಗೆ ಹೇಳಿದಂತೆ ಮುಖ್ಯಮಂತ್ರಿ ಸಿಡಿ ಡಿ.ಕೆ. ಶಿವಕುಮಾರ ಬಳಿ ಇದ್ದು ಶಿವಕುಮಾರ ವ್ಯವಹಾರದ ಎಲ್ಲ ಮಾಹಿತಿ ಮುಖ್ಯಮಂತ್ರಿ ಬಳಿ ಇದೆ. ಹೀಗಾಗಿ ಒಬ್ಬರಿಗೊಬ್ಬರು ಪರಸ್ಪರ ತಮ್ಮ ಅಕ್ರಮ ಮುಚ್ಚಿಕೊಳ್ಳುತಿದ್ದಾರೆ ಎಂದೂ ಆರೋಪಿಸಿದರು.
ಡಿ.ಕೆ. ಶಿವಕುಮಾರ ನನಗೆ ರಕ್ಷಣೆ ನೀಡಿದ್ದಾರೆ ಎಂದು ಸ್ವಯಂ ಸಂತ್ರಸ್ತೆಯ ಮೊಬೈಲ್ ಧ್ವನಿ ಮುದ್ರಿಕೆ ಹೇಳಿರುವುದರಿಂದ ಎಸ್‌ಐಟಿ ತನಿಖೆ ಸಾಗುವ ದಿಕ್ಕನ್ನು ಊಹಿಸಬಹುದು. ತನಿಖಾ ತಂಡದಲ್ಲಿರುವ ಐಪಿಎಸ್ ಅಧಿಕಾರಿ ಸಿಎಂ ಪುತ್ರನ ಕೈಗೊಂಬೆ. ಹೀಗಾಗಿ ಸರ್ಕಾರದ ನಿರ್ದೇಶನದಂತೆ ತನಿಖೆಯಾಗುತ್ತೆ ಎಂದು ದೂರಿದರು. ಮೇ 2ರ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತ ಎಂದು ಪುನರುಚ್ಚರಿಸಿದ ಬಿಜೆಪಿ ಶಾಸಕ ಯತ್ನಾಳ, ರಾಜ್ಯದ ವಿಧಾನ ಮಂಡಲದಲ್ಲಿ ಬಜೆಟ್ ಸಂದರ್ಭದಲ್ಲಿ ಕರ್ನಾಟಕದ ನೀರಾವರಿ ಬಗ್ಗೆ ಮಾತನಾಡಬೇಕಿತ್ತು. ಆದರೆ ಸಿಡಿ ಪ್ರಕರಣದ ಗದ್ದಲದಲ್ಲೇ ಸಮಯ ವ್ಯರ್ಥ ಮಾಡಿದ್ದರಿಂದ ಕೃಷ್ಣಾ ಕೊಳ್ಳದ ನೀರಾವರಿ ಗಂಭಿರ ವಿಷಯಗಳು ಚರ್ಚೆಗೆ ಬರಲೇ ಇಲ್ಲ.
ಪ್ರತಿ ವರ್ಷ 25 ಸಾವಿರ ಕೋಟಿ ರೂ. ನೀಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದರೂ ಈವರೆಗೆ 5,600 ಕೋಟಿ ರೂ. ನೀಡಿ ಸುಮ್ಮನಾಗಿದ್ದಾರೆ. ಇಂಥ ವಿಷಯಗಳು ಸದನದಲ್ಲಿ ಚರ್ಚೆ ಆಗುವ ಬದಲು ಅಶ್ಲೀಲ ಸಿಡಿ ವಿಷಯಕ್ಕೆ ಬಲಿ ಆಗಿದ್ದು ರಾಜ್ಯದ ಜನತೆಯ ದೌರ್ಭಾಗ್ಯ ಎಂದು ಹರಿಹಾಯ್ದರು. ನನ್ನ ವಿರುದ್ಧ ಶಾಸಕರ ಸಹಿ ಸಂಗ್ರಹ ನಡೆಯುತ್ತಿದೆ ಎಂಬುದು ಶುದ್ಧ ಸುಳ್ಳು. ತಮ್ಮ ವಿರುದ್ಧ ಕ್ರಮಕ್ಕೆ ಆಗ್ರಹಿಸಿ 65 ಶಾಸಕರು ಸಿಎಂ ಭೇಟಿಯಾಗಿದ್ದಾರೆ ಎಂಬುದು ನಿರಾಧಾರ. ಅನುದಾನ ವಿಚಾರ ಚರ್ಚೆಗೆ ಹೋಗಿದ್ದಾರೆ ಹೊರತು ತಮ್ಮ ವಿರುದ್ಧ ದೂರು ನೀಡಲು ಅಲ್ಲ ಎಂದರು.