Advertisement

94 ಸಿ ಕಡತ ಶೀಘ್ರ ವಿಲೇವಾರಿಗೆ ಶಾಸಕ ಬಂಗೇರ ಆದೇಶ 

03:57 PM Oct 25, 2017 | |

ಬೆಳ್ತಂಗಡಿ: ಅರಣ್ಯ ಇಲಾಖೆಗೆ ಕಳುಹಿಸಿದ ಕಡತಗಳು ಕಂದಾಯ ಇಲಾಖೆಗೆ ಬರದ ಕಾರಣ ಅನೇಕರ 94ಸಿ ಕಡತಗಳು ವಿಲೇವಾರಿಯಾಗಿಲ್ಲ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಡತಗಳ ಮೇಲೆ ಬಡವರಿಗೆ ಅನುಕೂಲವಾಗುವ ಕಾನೂನು ಸೂಕ್ಷ್ಮಗಳಲ್ಲಿ ಕಡತ
ವಿಲೇ ಮಾಡುವಂತೆ ಶಾಸಕ, ಕೆ. ವಸಂತ ಬಂಗೇರ ಅಧಿಕಾರಿಗಳಿಗೆ ಆದೇಶಿಸಿದರು. ಅವರು ಮಂಗಳವಾರ ಇಲ್ಲಿನ ತಾ. ಪಂ. ಸಭಾಂಗಣದಲ್ಲಿ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

Advertisement

ಬಡವರಿಗೆ ತೊಂದರೆ ನೀಡದಿರಿ
ಯಾವುದೇ ಕಾರಣಕ್ಕೂ ಬಡವರಿಗೆ ತೊಂದರೆ ನೀಡದಿರಿ. ಅಧಿಕಾರ ಇದೆ ಎಂದು ದರ್ಪದಿಂದ ಅಹಂ ನಿಂದ ವರ್ತಿಸಬೇಡಿ ಎಂದು ತಾಕೀತು ಮಾಡಿದರು.

ನೆಡುತೋಪು ಅರಣ್ಯ
ನೆಡುತೋಪು ಅರಣ್ಯವನ್ನು ಅರಣ್ಯ ಇಲಾಖೆ ತನ್ನದೆಂದು ಹೇಳುತ್ತಿದೆ. ಇದು ಕಂದಾಯ ಇಲಾಖೆಯ ಜಾಗ. ಆದ್ದರಿಂದ ತತ್‌ಕ್ಷಣ ಮರಗಳ ವಿಲೇವಾರಿ ಮಾಡಿ ಕಂದಾಯ ಇಲಾಖೆಗೆ ಜಾಗ ಮರಳಿಸಿ ಎಂದು ಶಾಸಕರು ಹೇಳಿದರು.

ಹಾಗೆ ನೀಡಲು ಬರುವುದಿಲ್ಲ. ಮರಗಳನ್ನು ಕಡಿದರೆ ಮರಳಿ ನೆಡಬೇಕೆಂದು ನಿಯಮ ಇದೆ ಎಂದು ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ ಪ್ರತಿಕ್ರಿಯಿಸಿದರು. ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ ಅವರು ಕೂಡ ಈ ಕುರಿತು ಗಮನ ಸೆಳೆದರು.

ಹಿಂದೂ ಪತ್ರಿಕೆ: ಆರೋಪ
ನೆರಿಯ ಬಯಲು ಶಾಲೆಯಲ್ಲಿ ಸನಾತನ ಸಂಸ್ಥೆಯವರು ಮಕ್ಕಳಿಗೆ ಹಿಂದೂ ಧರ್ಮದ ಪ್ರಶ್ನೆ ಪತ್ರಿಕೆ ವಿತರಿಸಿ ಪರೀಕ್ಷೆ ಮಾಡಿ ಸರ್ವಧರ್ಮ ಸಮನ್ವಯ ವಾತಾವರಣ ಹಾಳು ಮಾಡುತ್ತಿದ್ದಾರೆ ಎಂದು ಜಿ.ಪಂ. ಶಿಕ್ಷಣ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಸಾಹುಲ್‌ ಹಮೀದ್‌ ಹೇಳಿದರು.

Advertisement

ಶಿಕ್ಷಣಾಧಿಕಾರಿ ಗುರುಪ್ರಸಾದ್‌ ಪ್ರತಿಕ್ರಿಯಿಸಿ ಈ ಬಗ್ಗೆ ನೋಟಿಸ್‌ ನೀಡಲಾಗಿದೆ. ಮುಖ್ಯೋಪಾಧ್ಯಾಯರ ಗಮನಕ್ಕೆ ಬರದೇ ಎಸ್‌ಡಿಎಂಸಿ ಸದಸ್ಯರು ಮಾಡಿದ ಕೆಲಸ ಇದಾಗಿದೆ. ಆ ಎಸ್‌ಡಿಎಂಸಿ ಸದಸ್ಯರನ್ನು ಸಮಿತಿಯಿಂದ ವಜಾ ಮಾಡಲಾಗಿದೆ ಎಂದರು.

ಶಾಸಕರು ಪ್ರತಿಕ್ರಿಯಿಸಿ ಯಾವುದೇ ಶಾಲಾ ವಠಾರದಲ್ಲಿ ಬೈಠಕ್‌, ಕವಾಯತು ಇತ್ಯಾದಿ ನಡೆಯಕೂಡದು. ನಡೆದರೆ ಅಂತಹ ಅವಕಾಶ ನೀಡಿದ ಮುಖ್ಯೋಪಾಧ್ಯಾಯರನ್ನು ಅಮಾನತು ಮಾಡಿ. ಅಂತಹ ಶಾಲಾಭಿವೃದ್ಧಿ ಸಮಿತಿ ಯನ್ನು ಬರ್ಖಾಸ್ತುಗೊಳಿಸಿ ಎಂದವರು ಆದೇಶಿಸಿದರು.

ಕುವೆಟ್ಟು ಗ್ರಾಮದಲ್ಲಿ ಶಾಲಾ ಆಟದ ಮೈದಾನದಲ್ಲಿ ಬೇಲಿ ಅಳವಡಿಸಿದ ಕುರಿತು ಜಿ.ಪಂ. ಸದಸ್ಯೆ ಮಮತಾ ಶೆಟ್ಟಿ ಹೇಳಿದರು. ಇದನ್ನು ಸೌಹಾರ್ದಯುತವಾಗಿ ಮುಗಿಸಬೇಕು ಎಂದು ಶಾಸಕರು ಹೇಳಿದರು.

ತಾಲೂಕು ಪಂಚಾಯತ್‌ ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ಸುಧೀರ್‌ ಸುವರ್ಣ, ಕಾರ್ಯ ನಿರ್ವಹಣಾಧಿಕಾರಿ ಬಸವರಾಜ್‌ ಅಯ್ಯಣ್ಣನವರ್‌, ತಹಶೀಲ್ದಾರ್‌ ಇಸ್ಮಾಯಿಲ್‌ ಮತ್ತಿತರರು ಉಪಸ್ಥಿತರಿದ್ದರು.

ಚಿರತೆ ಕಾಟ
ಕೊಕ್ಕಡ, ಮಚ್ಚಿನ ಪ್ರಾಂತ್ಯದಲ್ಲಿ ಚಿರತೆ ಕಾಟ ಇದ್ದು ಆ ಭಾಗದ ಶಾಲಾ ಮಕ್ಕಳು ಶಾಲೆಗೆ ಹೋಗಲು ಭಯಭೀತರಾಗಿ ಶಾಲೆಗೆ ಹೋಗುತ್ತಿಲ್ಲ ಎಂದು ಪ್ರಶ್ನೆ ಬಂದಾಗ ಅಲ್ಲಿಗೆ ಹೋಗಿ ಸ್ಥಳೀಯರಿಗೆ ಧೈರ್ಯ ನೀಡಲಾಗಿದೆ. ಚಿರತೆ ಬಂದರೆ ಇಲಾಖೆಯವರನ್ನು ಸಂಪರ್ಕಿಸುವಂತೆ ಮೊಬೈಲ್‌ ಸಂಖ್ಯೆ ನೀಡಲಾಗಿದೆ ಎಂದು ಇಲಾಖೆಯರು ಉತ್ತರಿಸಿದರು.

ಪಂಪ್‌ ಅಳವಡಿಸಿಲ್ಲ
ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಮಂಜೂರಾಗಿ ಬೋರ್‌ವೆಲ್‌ ಕೊರೆದು ವಿದ್ಯುತ್‌ ಸಂಪರ್ಕ ದೊರೆತಿದ್ದು ಸ್ಕಾಂನವರು ಪಂಪ್‌ ಅಳವಡಿಸಿಲ್ಲ ಎಂದು ಕೊರಗಪ್ಪ ನಾಯ್ಕ ಹೇಳಿದರು. ಇದಕ್ಕೆ ಸ್ಪಷ್ಟನೆ ನೀಡಿದ ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಶಿವಶಂಕರ್‌, ವಿದ್ಯುತ್‌ ಸಂಪರ್ಕ ನೀಡುವುದು ಮಾತ್ರ ಮೆಸ್ಕಾಂ ಕರ್ತವ್ಯ. ಪಂಪ್‌ ಅಳವಡಿಸಬೇಕಾದುದು ನಿಗಮ ಎಂದರು. ವಿದ್ಯುತ್‌ ಸಂಪರ್ಕ ಅಳವಡಿಸಿದ ಅನಂತರ ಬಿಲ್‌ ಕಳುಹಿಸಲೇಬೇಕಾಗುತ್ತದೆ. ಪಂಪ್‌ ಅಳವಡಿಸದೇ ಬಿಲ್‌ ಕಳುಹಿಸಿದ್ದರೆ ಅದನ್ನು ನಿಗಮ ಪಾವತಿಸುವಂತೆ ಮಾಡಬೇಕು ಎಂದು ಜಿ.ಪಂ. ಎಂಜಿನಿಯರಿಂಗ್‌ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಿ.ಆರ್‌.ನರೇಂದ್ರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next