Advertisement

ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ಶಾಸಕ ಬಾಲಚಂದ್ರ ಮನವಿ

06:12 PM Apr 24, 2021 | Team Udayavani |

ಗೋಕಾಕ : ಕೊರೊನಾ ಎರಡನೆ ಅಲೆ ದಿನೇ ದಿನೇ ಉಲ್ಬಣವಾಗುತ್ತಿದ್ದು, ಇದರ ಹತೋಟಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಇದಕ್ಕಾಗಿ ಸೋಮವಾರದಿಂದ ಮೇ 4 ರವರೆಗೆ ಸ್ವಯಂ ಪ್ರೇರಿತರಾಗಿ ಮಧ್ಯಾಹ್ನ ಅಂಗಡಿಗಳನ್ನು ಬಂದ್‌ ಮಾಡಿ ಸಹಕರಿಸುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವ್ಯಾಪಾರಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Advertisement

ಕೊರೊನಾ ಮಹಾಮಾರಿ ಗೋಕಾಕ ಹಾಗೂ ಅರಭಾವಿ ಮತಕ್ಷೇತ್ರಗಳಲ್ಲಿ ಶರವೇಗದಲ್ಲಿ ಹರಡುತ್ತಿದ್ದು ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಇದರ ನಿರ್ಮೂಲನೆಗಾಗಿ ಸಾರ್ವಜನಿಕರ ಸಹಾಯ ಅವಶ್ಯವಾಗಿದ್ದು, ಇದಕ್ಕಾಗಿಯೇ ತಹಶೀಲ್ದಾರ್‌ ಮತ್ತು ಡಿವೈಎಸ್‌ಪಿ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್‌ ಸಮಿತಿ ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದಿನೇ ದಿನೇ ಜನಜಂಗುಳಿ ಹೆಚ್ಚುತ್ತಿದೆ. ಮಾರುಕಟ್ಟೆಗಳಲ್ಲಿ ಜನರನ್ನು ನಿಯಂತ್ರಣಕ್ಕೆ ತರಬೇಕಿದೆ. ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ. ಆದರೂ ಕೆಲವರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಕೂಡ ಕಂಡುಬರುತ್ತಿದೆ. ಆದ್ದರಿಂದ ಸೋಮವಾರ ದಿ. 26 ರಿಂದ ಮೇ 4 ರವರೆಗೆ ಉಭಯ ತಾಲೂಕುಗಳಲ್ಲಿ ಬೆಳಿಗ್ಗೆ 7 ರಿಂದ ಮ. 1 ರವರೆಗೆ ಸಾರ್ವಜನಿಕರಿಗೆ ಅಗತ್ಯವಿರುವ ಅಂಗಡಿ ಮುಂಗಟ್ಟುಗಳನ್ನು ತೆರೆದು ತಮ್ಮ ವ್ಯವಹಾರ ನಡೆಸಿಕೊಳ್ಳಬೇಕು. ಮಧ್ಯಾಹ್ನ 1 ಗಂಟೆಯ ನಂತರ ಕಡ್ಡಾಯವಾಗಿ ತಮ್ಮ ಅಂಗಡಿಗಳನ್ನು ಬಂದ್‌ ಮಾಡಿ ತಾಲೂಕಾ ಆಡಳಿತದೊಂದಿಗೆ ಸಹಕರಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರವನ್ನು ಪಾಲಿಸಬೇಕು. ವ್ಯಾಪಾರಸ್ಥರು ಸಹ ಕರೊನಾ ನಿಯಂತ್ರಣಕ್ಕೆ ತಮ್ಮೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಇದರಿಂದ ತಮ್ಮನ್ನು ತಾವೇ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್‌ ಮಾಡಿಕೊಂಡಂತಾಗುತ್ತದೆ. ಕೊರೊನಾ ಚೈನ್‌ ಬ್ರೆಕ್‌ ಮಾಡುವುದೇ ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ. ನಿಯಂತ್ರಣಕ್ಕೆ ಸರ್ಕಾರ ಜಾರಿ ಮಾಡಿರುವ ಹೊಸ ಬಿಗಿ ಮಾರ್ಗಸೂಚಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ನಾಗರಿಕರು ಸಹಕರಿಸಬೇಕು. ಅಲ್ಲದೇ ಅನಗತ್ಯವಾಗಿ ಓಡಾಡಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಿ.ಎಸ್‌. ಯಡಿಯೂರಪ್ಪನವರ ಸಲಹೆಯಂತೆ ಮುನ್ನೆಚ್ಚರಿಕೆ ನಿಯಮಗಳನ್ನು ಪಾಲಿಸಿ ಸೋಂಕು ನಿಯಂತ್ರಣಕ್ಕೆ ನೆರವಾಗುವಂತೆ ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next