ಹೊಳೆನರಸೀಪುರ: ದೇಶ ಹಾಗೂ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಎದ್ದು ಕಾಣುತ್ತಿದೆ ಕಾರ್ಯಾಂಗ ಮತ್ತು ಶಾಸಕಾಂಗ ಎರಡು ಸಹ ಹದಗೆಟ್ಟಿದೆ. ಪ್ರಸ್ತುತ ಪ್ರಜಾಪ್ರಭುತ್ವ ಕವಲು ದಾರಿಯಲ್ಲಿ ಸಾಗಿದೆ ಎಂದು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ನುಡಿದರು.
ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಜೋಡಿಗುಬ್ಬಿ ಗ್ರಾಮದಲ್ಲಿ ಜಲ್‌ಜೀವನ್ ಮಿಷನ್ ಯೋಜನೆಯಡಿ ಮನೆಗಳಿಗೆ ಕುಡಿಯುವ ನೀರಿನ ನಲ್ಲಿ ಸಂಪರ್ಕ ಹಾಗು ಕಾಂಕ್ರೀಟ್ ರಸ್ತೆ ಚರಂಡಿ ನಿರ್ಮಾಣ ಹಾಗೂ ಹಾಸ್ಟೆಲ್ ಕಟ್ಟಡ ದುರಸ್ತಿ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಮಧ್ಯೆ ನಾವೇಣಿಸಿದಂತೆ ನ್ಯಾಯಾಂಗ ವ್ಯವಸ್ಥೆ ಕಂಡು ಬರುತ್ತಿಲ್ಲ ಎಂದು ವಿಷಾದಿಸಿದರು.
ಕಾರ್ಯಾಂಗ, ಶಾಸಕಾಂಗ ವ್ಯವಸ್ಥೆಯಲ್ಲಿ ಜನರಿಗೆ ನ್ಯಾಯ ದೊರಕದೆ ಹೋದಾಗ ಅಂತಿಮವಾಗಿ ನಾವು ನ್ಯಾಯಕ್ಕಾಗಿ ತೆರಳುವುದು ನ್ಯಾಯಾಂಗಕ್ಕೆ, ಆಲ್ಲೂ ಸಹ ಬಡವರಿಗೆ ಮತ್ತು ನ್ಯಾಯ ದೊರಕದೇ ಹೋದರೇ ಅದನ್ನು ಪ್ರಜಾಪ್ರಭುತ್ವದ ದೊಡ್ಡ ದುರಂತ ಎಂದು ಹೇಳಬೇಕಾಗುತ್ತದೆ ಎಂದು ನುಡಿದರು.
ಕವಲು ದಾರಿಯಲ್ಲಿ ಪ್ರಜಾಪ್ರಭುತ್ವ: ಕವಲು ದಾರಿಯಲ್ಲಿ ಇರುವ ಪ್ರಜಾಪ್ರಭುತ್ವವನ್ನು ಸರಿ ದಾರಿಗೆ ತರಲು ಕೇವಲ ಒಬ್ಬರಿಂದ ಸಾಧ್ಯ. ಅದು ಯಾರೆಂದರೆ ತಾವುಗಳು ಎಂಬುದನ್ನು ಮತ್ತೆ ಮತ್ತೆ ಹೇಳಬೇಕಿಲ್ಲ, ನೀವುಗಳು ಮನಸ್ಸು ಮಾಡಿದ್ದಲ್ಲಿ ಕಾರ್ಯಾಂಗ ಶಾಸಕಾಂಗಗಳನ್ನು ಸರಿದಾರಿಗೆ ತರಲು ಸರಿಯಾಗಿ ಮತದಾನ ನೀಡಿ, ಆಗ ಮಾತ್ರ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ನ.26 ಸಂವಿಧಾನ ಅಂಗೀಕರಿಸಿದ ದಿನ: ನ.26ರಂದು ತಮ್ಮ ಅರಕಲಗೂಡು ಪಟ್ಟಣದ ಶಿಕ್ಷಕರ ಭವನದಲ್ಲಿ ಭಾರತ ಸಂವಿಧಾನ ಅಂಗೀಕರಿಸಿದ ದಿನ. ಅಂದು ವೀರ ಸೇನಾನಿಗಳಿಗೆ ಗೌರವ ಸಮರ್ಪಿಸಲಾಗುವುದು ಎಂದು ತಿಳಿಸಿದರು.
ನಮ್ಮ ಯೋಧರು ದೇಶ ರಕ್ಷಣೆಗೆ ಬಿಸಿಲು, ಮಳೆ, ಚಳಿ ಎನ್ನದೇ ಹಗಲಿರಳು ಕಾಯುತ್ತಿದ್ದಾರೆ. ನಮ್ಮ ರಕ್ಷಣೆಗಾಗಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿ ಸುತ್ತಿದ್ದಾರೆ. ಅಂತಹ ಮಹಾನ್ ಸೇನಾನಿಗಳನ್ನು ಗುರುತಿಸಿ ಅವರಿಗೆ ನಮನ ಸಲ್ಲಿಸುವ ಕಾರ್ಯ ಹಮ್ಮಿಕೊಂಡಿದ್ದೇನೆ. ಬ್ರಿಟಿಷರ ದಾಸ್ಯದಿಂದ ಭಾರತದ ಮುಕ್ತಿಗಾಗಿ ಸಿಪಾಯಿದಂಗೆ ಮೊದಲ ಹಂತವಾಗಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟಗಾರರು, ಮಹಿನೀಯರ ತ್ಯಾಗ, ಬಲಿದಾನವೇ ಕಾರಣ. ಹಾಗಾಗಿ ನಾವಿಂದು ಸಂವಿಧಾನ ನೀಡಿರುವ ಹಕ್ಕುಗಳನ್ನು ಚಲಾಯಿಸಿ ಸ್ವರ್ವ ಸ್ವಾತಂತ್ರ್ಯವಾಗಿ ಬದುಕುತ್ತಿದ್ದೇವೆ ಎಂದರು.
ನ.26ರಂದು ನಡೆಯಲಿರುವ ನಮ್ಮ ದೇಶ, ನಮ್ಮ ಯೋಧರು, ನಮ್ಮ ರಕ್ಷಣೆ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರು ಭಾಗವಹಿಸಿ ಸೇನಾನಿಗಳಿಗೆ ಗೌರವ ಆರ್ಪಿಸೋಣ. ಅದಕ್ಕೆ ತಪ್ಪದೆ ಪ್ರತಿಯೊಬ್ಬರು ಆಗಮಿಸಬೇಕೆಂದು ಮನವಿ ಮಾಡಿದರು.