ಬೆಂಗಳೂರು: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ವಿರಾಜಪೇಟೆ ಕಾಂಗ್ರೆಸ್ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶಿಸಿದೆ.
ಇತ್ತೀಚೆಗಷ್ಟೇ ಕರ್ನಾಟಕ ವಿಧಾನಮಂಡಲ (ಅನರ್ಹತೆ ನಿವಾರಣ) (ತಿದ್ದುಪಡಿ) ವಿಧೇಯಕ ಮಂಡಿಸಿ ಅನುಮೋದನೆ ಪಡೆದಿದ್ದ ಸರಕಾರ, ಈಗ ಪೊನ್ನಣ್ಣ ಅವರನ್ನು ಸಿಎಂ ಕಾನೂನು ಸಲಹೆಗಾರರ ಹುದ್ದೆಗೆ ನೇಮಿಸಿ ಅಧಿಕೃತ ಆದೇಶ ಹೊರಡಿಸಿದ್ದು, ಸಂಪುಟ ದರ್ಜೆ ಸ್ಥಾನಮಾನವನ್ನೂ ನೀಡಿದೆ.
ಆರ್ಥಿಕ ಇಲಾಖೆ ಖಜಾನೆ ಆಯುಕ್ತಾಲಯ ಉಪ ನಿರ್ದೇಶಕರಾಗಿದ್ದ ಡಾ| ಮಾಜುದ್ದೀನ್ ಖಾನ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರ ಅಪ್ತ ಕಾರ್ಯದರ್ಶಿಯಾಗಿ ನಿಯೋಜನೆ ಮೇಲೆ ನೇಮಿಸಿದ್ದು, ಕರ್ನಾಟಕ ಉರ್ದು ಅಕಾಡೆಮಿ ರಿಜಿಸ್ಟ್ರಾರ್ ಆಗಿಯೂ ಅಧಿಕ ಪ್ರಭಾರದಲ್ಲಿರಿಸಿ ಆದೇಶಿಸಿದೆ.
ಬಿಬಿಎಂಪಿ ದಕ್ಷಿಣ ವಲಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಡಿ.ಎಂ. ನಿರಂಜನ್‌ರ ಸೇವೆಯನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ನಗರಾಭಿವೃದ್ಧಿ ಇಲಾಖೆಯಿಂದ ಮಾತೃ ಇಲಾಖೆ ತೋಟಗಾರಿಕಾ ಇಲಾಖೆಗೆ ಹಿಂಪಡೆದಿದೆ.