ರಾಣಿಬೆನ್ನೂರ: ತಾಲೂಕಿನಲ್ಲಿ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 245 ಸದಸ್ಯ ಸ್ಥಾನಗಳಿಗೆ ಮತದಾರರು ಆಶೀರ್ವದಿಸಿದ್ದಾರೆ. 20 ಗ್ರಾಪಂಗಳಲ್ಲಿ ನಮ್ಮದೇ ಆಡಳಿತವಿದೆ. 2 ಪಂಚಾಯತಿ ಬಿಟ್ಟು ಹೋದವು. ಕ್ಷೇತ್ರ ಜನತೆಗೆ ಗ್ರಾಪಂ ಆಶೀರ್ವಸಿದ್ದು, ಅದೇ ರೀತಿ 4 ಜಿಪಂ ಗೆಲ್ಲುವ ವಿಶ್ವಾಸವಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಮೆಣಸಿನಹಾಳ ಗ್ರಾಮದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ನಿರೀಕ್ಷೆಗೂ ಮೀರಿ ಗ್ರಾಮೀಣ ಮಟ್ಟದಲ್ಲಿ ಬಿಜೆಪಿಗೆ ಬೆಂಬಲ ದೊರಕಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರಗಳು ಕೈಗೊಂಡಿರುವ ಜನಪರ ಯೋಜನೆಗಳೇ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಲು ಸಹಕಾರಿಯಾಗಿದೆ. ಜೊತೆಗೆ ಕಳೆದ ಬಾರಿ ಈ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿನ ಸ್ಪೂರ್ತಿ ಈಗಲೂ ಜಿಪಂ ಚುನಾವಣೆಯಲ್ಲಿ ನಡೆಯಲಿದೆ ಎಂದರು.
ಶನಿವಾರ-ರವಿವಾರ ಲೋಕೋಪಯೋಗಿ, ಎಸ್‌ಪಿ, ಜಲಸಂಪನ್ಮೂಲ ಇಲಾಖೆಯಿಂದ 6.86 ಲಕ್ಷ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮೆಣಸಿನಹಾಳಕ್ಕೆ ಕೆನಲ್ ನೀರಾವರಿ ಮಾಡಿಕೊಟ್ಟರೆ ಅನುಕೂಲವಾಗುತ್ತದೆ. ಅಧಿ ಕಾರಿಗಳು ಸರ್ವೇ ಮಾಡಿ 4.5 ಕೋಟಿ ವೆಚ್ಚ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆಗೆ ಕಳುಹಿಸಲಾಗಿದೆ. 50 ಲಕ್ಷ ಅನುದಾನದಲ್ಲಿ ಮೆಣಸಿನಹಾಳ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಎಸ್‌ಎಸ್‌ಪಿ ಅನುದಾನದಲ್ಲಿ ಮಹಾನಗರಕ್ಕೆ ಸರ್ಕಾರ 10 ಕೋಟಿ ಅನುದಾನ ಕೊಟ್ಟಿದೆ. ಅದರಲ್ಲಿ ಪ್ರಸ್ತುತ 5 ಕೋಟಿ ಅನುದಾನದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ ಹಲಗೇರಿ ಕ್ರಾಸ್ ಹಾಗೂ ಬೈಪಾಸ್, ಎನ್‌ವಿ, ಸಿದ್ದೇಶ್ವರ ದನದ ಮಾರ್ಕೆಟ್ ಮುಗಿಯುತ್ತ ಬಂದಿದೆ. ವಸತಿ ವ್ಯವಸ್ಥೆಗೆ 6.70 ಲಕ್ಷ ಅನುದಾನದಲ್ಲಿ ಕಾಮಗಾರಿ ಮಾಡಿದ್ದೇವೆ. ಕೊಳಚೆ ನಿವಾಸಿಗಳಿಗೆ ಮನೆ ನೀಡುವ ಯೋಜನೆ ಮಾಡಲಾಗಿದೆ. ಕ್ಷೇತ್ರಕ್ಕೆ ಸರ್ಕಾರ 2 ಸಾವಿರ ನಿವೇಶನ ನೀಡಿದೆ. ಕೆಲಸ ಸಹ ಪ್ರಾರಂಭವಾಗಿದೆ. ಅಮೃತ ಸಿಟಿ ಯೋಜನೆಯಲ್ಲಿ 24 ಸಾವಿರ ಮನೆಗಳಿಗೆ ದಿನದ 24 ಗಂಟೆ ಶುದ್ಧ ಕುಡಿವ ನೀರು ಸರಬರಾಜು ಕೆಲವೇ ದಿನಗಳಲ್ಲಿ ಮಾಡಲಾಗುವುದು ಎಂದರು.
ಎಪಿಎಂಸಿ ಆವರಣದಲ್ಲಿ ಕುಡಿವ ನೀರಿಗಾಗಿ ಕೆರೆ ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಕರೆದು ಇದೇ ತಿಂಗಳ ದಿನಾಂಕ ನಿಗ ದಿಪಡಿಸಲಾಗುವುದು. ಆಂಜನೇಯ ಬಡಾವಣೆ ಅಭಿವೃದ್ಧಿ ಮಾಡಲು ವಿ. ಸೋಮಣ್ಣ 1 ಕೋಟಿ ನೀಡಿದ್ದಾರೆ. ಉಕ್ಕಡಗಾತ್ರಿ, ಹೊಳೆ ಆನ್ವೇರಿ, ಬೇಲೂರು ಕ್ರಾಸ್ ಮೇಡ್ಲೆರಿ, ಹರನಗಿರಿ, ಪತ್ತೆಪುರ ರಸ್ತೆಗಳಿಗೆ 2 ಕಿ.ಮೀ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ 17 ಕೋಟಿ ಬಂದಿದೆ. ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಇದನ್ನೂ ಓದಿ:ರಾಮ ಮಂದಿರಕ್ಕೆ ನಿಧಿ ಸಂಗ್ರಹ
17 ರಸ್ತೆ ಅಭಿವೃದ್ಧಿ, ತುಮ್ಮಿನಕಟ್ಟಿ 1 ಕೋಟಿ ಕಾಂಕ್ರೀಟ್ ರಸ್ತೆ, ಬಸ್ ನಿಲ್ದಾಣ 40 ಲಕ್ಷ, ರಾಹುತನಕಟ್ಟಿ 6 ಕೋಟಿ, ಐರಣಿ ಕ್ರಿಯಾಯೋಜನೆ ಮಾಡಲಾಗಿದೆ. ಅತಿವೃಷ್ಟಿಯಿಂದ ತಗ್ಗು ಬಿದ್ದ ರಸ್ತೆ ಮುಚ್ಚಲು 5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಧಾನಮಂತ್ರಿ ಕನಸು ಜಲ ಜೀವನ ಕಾರ್ಯ ಆರಂಭವಾಗಿದೆ. ಮನೆ ಮನೆಗೂ ಕುಡಿವ ನೀರು ನೀಡಲಾಗುವುದು. 40 ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್ ಕೊಡುತ್ತೇವೆ. ವಿಶೇಷವಾಗಿ ಶಿವಮೊಗ್ಗ ಶಿಕಾರಿಪುರ ರೈಲು ಯೋಜನೆಗೆ 150 ಕೋಟಿ ನೀಡಿದ್ದಾರೆ. ನಗರದಲ್ಲಿರುವ ಬಸ್ ನಿಲ್ದಾಣ ಜನದಟ್ಟಣೆಯಲ್ಲಿದೆ. ಅದರ ಬದಲಾಗಿ ಹೈಟೆಕ್ ಬಸ್ ನಿಲ್ದಾಣವನ್ನು ಇಲ್ಲಿನ ದನದ ಮಾರುಕಟ್ಟೆಯಲ್ಲಿ ಮಾಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿರ್ದೇಶಕ ಸಂತೋಷಕುಮಾರ ಪಾಟೀಲ, ಪ್ರಕಾಶ ಪೂಜಾರ, ಮಂಜಯ್ಯ ಚಾವಡಿ, ಸುಭಾಷ ಶಿರಗೇರಿ ಸೇರಿದಂತೆ ಇತರರು ಇದ್ದರು.