ಕುಮಟಾ: ತಾಲೂಕಿನ ಅರ್ಹ ಫಲಾನುಭವಿಗಳಿಗೆ ಹಲವಾರು ತಿಂಗಳಿಂದ ವಿಧವಾ ವೇತನ ಹಾಗೂ ಮಾಸಾಶನ ದೊರೆಯದ ಕಾರಣ ಶಾಸಕ ದಿನಕರ ಶೆಟ್ಟಿ ಮೇಲಾಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ತಹಶೀಲ್ದಾರ್ ಕಾರ್ಯಾಲಯದ ಬಳಿ ಶಾಸಕ ದಿನಕರ ಶೆಟ್ಟಿ ಜನರ ಸಮಸ್ಯೆ ಆಲಿಸುತ್ತಿದ್ದ ಸಂದರ್ಭದಲ್ಲಿ ಹಲವರು ತಮಗೆ ಮಾಸಾಶನ ದೊರೆಯುತ್ತಿಲ್ಲ ಎಂದು ಶಾಸಕರ ಬಳಿ ಕಣ್ಣೀರು ತೋಡಿಕೊಂಡಿದ್ದರು.
ವಿಷಯ ತಿಳಿದಾಕ್ಷಣ ಶಾಸಕ ದಿನಕರ ಶೆಟ್ಟಿ, ಬೆಂಗಳೂರಿನ ಸಹಾಯಕ ಆಯುಕ್ತರಿಗೆ ಕರೆ ಮಾಡಿ, ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಕುಮಟಾ ಹಾಗೂ ಕಾರವಾರದಿಂದ ಈ ಬಗ್ಗೆ ಹಲವು ಮನವಿ ನೀಡಲಾಗಿದೆ. ಆದರೂ ಸಹ ನೀವು ಮಾಸಾಶನ ಹಾಗೂ ವಿಧವಾ ವೇತನದ ಹಣ ನೀಡುವಲ್ಲಿ ಮೀನಾಮೇಷ ಏಣಿಸುತ್ತಿದ್ದೀರಿ. ಇದು ಸರಿಯಲ್ಲ. ಕ್ಷೇತ್ರದ ಜನತೆಗೆ ತೊಂದರೆಯಾದರೆ ನಾನು ಸಹಿಸುವುದಿಲ್ಲ. ಇಂದೇ ಬೆಂಗಳೂರಿಗೆ ಆಗಮಿಸುತ್ತೇನೆ. ಮಾಸಾಶನ ಹಾಗೂ ವಿಧವಾ ವೇತನ ಪಡೆಯಲು ಅರ್ಹರಿರುವವರಿಗೆ ತಕ್ಷಣವೇ ಹಣ ಬಿಡುಗಡೆ ಮಾಡಬೇಕು ಎಂದು ಸಹಾಯಕ ಆಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಜಿಪಂ ಸದಸ್ಯ ಗಜಾನನ ಪೈ, ಪುರಸಭಾ ಸದಸ್ಯರಾದ ತುಳುಸು ಗೌಡ, ಮಹೇಶ ನಾಯಕ ವನ್ನಳ್ಳಿ, ಪ್ರಮುಖರಾದ ಕಾರ್ತಿಕ ಭಟ್ಟ ಸೇರಿದಂತೆ ಇನ್ನಿತರರು ಇದ್ದರು.
ಈ ಹಿಂದಿನ ಶಾಸಕತ್ವದ ಅವಧಿಯಲ್ಲಿ 300ಕ್ಕೂ ಅಧಿ ಕ ಜನರಿಗೆ 1 ವರ್ಷದಿಂದ ಪಿಂಚಣಿ ಹಣ ಬಂದಿರಲಿಲ್ಲ. ಸತತ ಪ್ರಯತ್ನ ನಡೆಸಿ ಅವರಿಗೆ ಪಿಂಚಣಿ ಹಣವನ್ನು ಮಂಜೂರಿ ಮಾಡಿಸಿದ್ದೇನೆ. ಈಗಲೂ ಸಹ ಮೇಲಧಿಕಾರಿಗಳ ಜೊತೆ ಚರ್ಚಿಸಿ, ತಕ್ಷಣವೇ ಹಣ ಮಂಜೂರಿ ಮಾಡಿಸುತ್ತೇನೆ.
-ದಿನಕರ ಶೆಟ್ಟಿ, ಶಾಸಕ