Advertisement
ಹಲ್ಲೆಯಿಂದ ಕಣ್ಣಿಗೂ ಗಂಭೀರ ಗಾಯ ಆಗಿರುವ ಹಿನ್ನೆಲೆಯಲ್ಲಿ ಆನಂದ್‌ಸಿಂಗ್ ಅವರಿಗೆ ನಾರಾಯಣ ನೇತ್ರಾಲಯದಲ್ಲಿ ನೇತ್ರ ಪರೀಕ್ಷೆ ನಡೆಸಿ ನಂತರ ಮತ್ತೆ ವಾಪಸ್ ಅಪೋಲೋ ಆಸ್ಪತ್ರೆಗೆ ಕಳುಹಿಸಲಾಗಿದೆ. ಆನಂದ್‌ಸಿಂಗ್ ಅವರ ಕಣ್ಣು ಸುತ್ತುವರಿದ ಮೂಳೆ ಹಾನಿಗೊಂಡಿರುವುದರಿಂದ ಅವರ ಬಲಗಣ್ಣು ಗಾಯಗೊಂಡು ಕೆಲ ಕೋನಗಳಲ್ಲಿ ಎರಡು ನೋಟ ಕಾಣುತ್ತಿದೆ. ಅವರಿಗೆ ಹೊರಗಿನ ರಕ್ತಸ್ರಾವವೂ ಆಗಿದ್ದು ಅದು ಗುಣವಾಗಲು 10 ರಿಂದ 15 ದಿನಗಳು ಬೇಕಾಗುತ್ತದೆ. ಗಾಯದಿಂದ ಅವರ ಎರಡೂ ಕಣ್ಣಿನ ರೆಪ್ಪೆಗಳು ಊದಿಕೊಂಡಿವೆ. ಆದರೆ, ದೃಷ್ಟಿಗೆ ಯಾವುದೇ ಹಾನಿಯುಂಟಾಗಿಲ್ಲ. ಒಂದು ವಾರದ ಚಿಕಿತ್ಸೆ ನೀಡಿ ನಂತರ ಅವರ ಸ್ಥಿತಿಯನ್ನು ಮತ್ತೆ ಪರೀಕ್ಷಿಸಲಾಗುತ್ತದೆ. ಸುಧಾರಣೆಯಾಗದೆ ಇದ್ದಲ್ಲಿ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
Related Articles
Advertisement
ಕಂಪ್ಲಿ ಕ್ಷೇತ್ರದ ಕಾರ್ಯಕರ್ತರು ಯುವ ಮುಖಂಡ ಜಗದೀಶ್ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಅವರ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ, ಆನಂದ್ ಸಿಂಗ್ ಹಾಗೂ ಗಣೇಶ್ ನಡುವೆ ಉತ್ತಮ ಬಾಂಧವ್ಯ ಇದೆ. ಇಬ್ಬರೂ ಸಹೋದರರ ರೀತಿ ಇದ್ದಾರೆ. ರೆಸಾರ್ಟ್‌ನಲ್ಲಿ ಆಗಿರುವ ಘಟನೆ ದುರದೃಷ್ಠಕರ. ಈಗ ಅವರನ್ನು ಪಕ್ಷದಿಂದ ಅಮಾನತು ಮಾಡಿರುವುದು ಪಕ್ಷದ ಕಾರ್ಯಕರ್ತರಾಗಿ ನಮಗೆ ಆತಂಕವುಂಟು ಮಾಡಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅಲ್ಲದೇ ಅವರನ್ನು ಅಮಾನತು ಮಾಡಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ನಾವು ಹೇಗೆ ಕೆಲಸ ಮಾಡುವುದು ಎಂಬ ಗೊಂದಲ ಉಂಟಾಗಿದೆ. ಹೀಗಾಗಿ, ಅವರಿಬ್ಬರನ್ನೂ ಕರೆಸಿ ಸಂಧಾನ ಮಾಡಿ, ಅವರ ಮೇಲಿನ ಅಮಾನತು ಆದೇಶ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಭೇಟಿ ಬಳಿಕ ಮಾತನಾಡಿದ ಜಗದೀಶ್, ಶಾಸಕ ಆನಂದ್ ಸಿಂಗ್ ಹಾಗೂ ಗಣೇಶ್ ಇಪ್ಪತ್ತು ವರ್ಷಗಳಿಂದಲೂ ಸ್ನೇಹಿತರು. ಇಬ್ಬರೂ ಅಣ್ಣ ತಮ್ಮಂದಿರಂತಿದ್ದರು. ಆದರೆ, ಯಾಕೆ ಹೀಗೆ ಗಲಾಟೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಪಕ್ಷದಿಂದ ಅವರನ್ನು ಅಮಾನತು ಮಾಡಿದ್ದಾರೆ. ಇದರಿಂದ ನಮಗೆ ಸಾಕಷ್ಟು ಆತಂಕವಾಗಿದೆ ಎಂದರು. ನಂತರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನೂ ಪಕ್ಷದ ಕಚೇರಿಯಲ್ಲಿ ಭೇಟಿ ಮಾಡಿ ಅಮಾನತು ಆದೇಶ ವಾಪಸ್ ಪಡೆಯುವಂತೆ ಮನವಿ ಮಾಡಿದರು.
ಕಂಪ್ಲಿ ಗಣೇಶ್ ಶೀಘ್ರ ಬಂಧನ: ಪರಮೇಶ್ವರ್
ಈ ಮಧ್ಯೆ, ಸುದ್ದಿಗಾರರ ಜೊತೆ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕಂಪ್ಲಿ ಶಾಸಕ ಗಣೇಶ್ ನಾಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲು ಮಾಡಿ ಹುಡುಕುತ್ತಿದ್ದಾರೆ. ಆದಷ್ಟು ಬೇಗ ಬಂಧನವಾಗಬಹುದು ಎಂದು ತಿಳಿಸಿದರು. ರೆಸಾರ್ಟ್‌ನಲ್ಲಿ ನಡೆದ ಘಟನೆ ಬಗ್ಗೆ ನನ್ನ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಹೈಕಮಾಂಡ್‌ಗೆ ವರದಿ ನೀಡಲಾಗುವುದು. ವರದಿ ಕೊಟ್ಟ ನಂತರ ಹೈಕಮಾಂಡ್ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಹಲ್ಲೆ ಹಿಂದೆ ಬಿಜೆಪಿ?
ಉಡುಪಿ: ಶಾಸಕ ಗಣೇಶ್ ಮತ್ತು ಆನಂದ ಸಿಂಗ್ ವೈಯಕ್ತಿಕ ವಿಚಾರವಾಗಿ ಹೊಡೆದಾಡಿಕೊಂಡಿದ್ದಾರೆ. ಇದಕ್ಕೆ ಪಕ್ಷ ಏನು ಮಾಡೋಕ್ಕಾಗುತ್ತೆ ಎಂದು ಸಚಿವೆ ಡಾ. ಜಯಮಾಲಾ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿ, ಶಾಸಕ ಗಣೇಶ್ ಮತ್ತು ಆನಂದ ಸಿಂಗ್ ವೈಯಕ್ತಿಕ ವಿಚಾರವಾಗಿ ಹೊಡೆದಾಡಿಕೊಂಡಿದ್ದಾರೆ. ಬೇರೆ ಪಕ್ಷದವರು ಕೂಡ ಹೊಡೆದಾಡಿಕೊಳ್ಳುವುದಿಲ್ಲವೆ? ಇದರ ಹಿಂದೆ ಬೇರೆಯವರ ಕೈ ಕೂಡ ಇರಬಹುದು. ಬಿಜೆಪಿ ಯವರೇ ಮಾಡಿರಬಹುದಲ್ಲವೆ? ಯಾರೇ ಹೊಡೆದಾಡಿ ಕೊಂಡರೂ ನಾವ್ಯಾರೂ ಬೆಂಬಲಿಸುವುದಿಲ್ಲ ಎಂದರು.
ಗಣೇಶ ಹಾಗೂ ಆನಂದ ಸಿಂಗ್ ಇಬ್ಬರೂ ಸ್ನೇಹಿತರು. ಸ್ನೇಹಿತರ ಮಧ್ಯೆ ಸಣ್ಣ ಪುಟ್ಟ ಜಗಳ ಬರುವುದು ಸಹಜ. ಹೊಡೆದಾಟಕ್ಕೆ ಸಂಬಂಧಿಸಿ ಈಗಾಗಲೇ ಗಣೇಶ ಅವರು ಆನಂದ ಸಿಂಗ್ ಬಳಿ ಕ್ಷಮೆ ಕೇಳಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಅವರ ಉಚ್ಚಾಟನೆಯನ್ನೂ ಮಾಡಲಾಗಿದೆ. ಆನಂದ ಸಿಂಗ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಗಣೇಶ ಅವರನ್ನು ಹುಡುಕುತ್ತಿದ್ದಾರೆ. ಆದಷ್ಟು ಬೇಗ ಪೊಲೀಸರು ಅವರನ್ನು ಬಂಧಿಸಲಿದ್ದಾರೆ. ಕಾನೂನು ಎಲ್ಲರಿಗೂ ಒಂದೇ. ● ಜಮೀರ್ ಅಹಮದ್ ಖಾನ್, ಸಚಿವ