ಜಮಖಂಡಿ: ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿದ್ದರಿಂದ ಬಾಗಲಕೋಟೆ-ಅಥಣಿ ತಾಲೂಕಿನ ಕೆಲ ಪ್ರದೇಶದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರವಾಗಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕನಿಷ್ಠ ಎರಡು ಟಿಎಂಸಿ ಅಡಿ ನೀರನ್ನು ರಾಜ್ಯಕ್ಕೆ ಬಿಡಬೇಕೆಂದು ಶಾಸಕ ಆನಂದ ನ್ಯಾಮಗೌಡ ಶುಕ್ರವಾರ ಮುಂಬೈನಲ್ಲಿ ಮಹಾರಾಷ್ಟ್ರದ ನೀರಾವರಿ ಸಚಿವ ಗಿರೀಶ ಮಹಾಜನ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
Advertisement
ಈ ಕುರಿತು ಶಾಸಕ ಆನಂದ ಸಿದ್ದು ನ್ಯಾಮಗೌಡ ಉದಯವಾಣಿಗೆ ಮಾಹಿತಿ ನೀಡಿದರು. ಎರಡು ತಾಲೂಕಿನಲ್ಲಿ ರೈತರು, ಜನ-ಜಾನುವಾರುಗಳು ನೀರಿಲ್ಲದೇ ಪರದಾಡುತ್ತಿದ್ದು, ಉರಿ ಬಿಸಿಲಲ್ಲಿ ಜಾನುವಾರುಗಳು ನೀರಿಲ್ಲದೆ ಮೃತಪಟ್ಟಿವೆ. ಈ ಕುರಿತು ಮತ್ತು ಎರಡು ಕ್ಷೇತ್ರಗಳಲ್ಲಿ ನೀರಿನ ಅಭಾವದ ಬಗ್ಗೆ ಸಚಿವರಿಗೆ ಮನವರಿಕೆ ಮಾಡಲಾಗಿದೆ. ಅವರು ಕೂಡಾ ಸ್ಪಂದಿಸಿದ್ದಾರೆ. ಶೀಘ್ರದಲ್ಲಿ ಕೊಯ್ನಾ ಜಲಾಶಯದಿಂದ ನೀರು ಬಿಡಲು ಮಹಾರಾಷ್ಟ್ರದ ಸಚಿವರು ಸಮ್ಮತಿಸಿದ್ದು, ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಿ ಕೂಡಲೇ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಂಸದ ಪ್ರಕಾಶ ಹುಕ್ಕೇರಿ ಕೂಡಾ ಮಹಾರಾಷ್ಟ್ರ ನೀರಾವರಿ ಸಚಿವರಿಗೆ ದೂರವಾಣಿಯಲ್ಲಿ ನೀರಿನ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದ್ದಾರೆ. ನನ್ನ ಜೊತೆಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಆಗಮಿಸಿದ್ದರು ಎಂದು ತಿಳಿಸಿದರು.